Heavy Rain Alert: ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಮಳೆ ಅಬ್ಬರ: IMDಯಿಂದ ಭಾರಿ ಮಳೆ ಎಚ್ಚರಿಕೆ, ಇಲ್ಲಿದೆ ಮುನ್ಸೂಚನೆ!
ಚೆನ್ನೈ: ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಮಳೆಯ ಅಬ್ಬರ ಮುಂದುವರಿಯುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಕರಾವಳಿ ಕರ್ನಾಟಕ, ಕೇರಳ, ದಕ್ಷಿಣ ಒಳನಾಡು ಕರ್ನಾಟಕ ಸೇರಿದಂತೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಾಲ್ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಕೆಲವೆಡೆ ಗುಡುಗು, ಮಿಂಚು ಹಾಗೂ ಬಿರುಗಾಳಿಯ ಆತಂಕವೂ ಇದ್ದು, ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ತಮಿಳುನಾಡಿನ ರಾಜಧಾನಿ ಚೆನ್ನೈ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದೆ. ಈಶಾನ್ಯ ಮಾರುತಗಳು ಸಕ್ರಿಯಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಅಕ್ಟೋಬರ್ 18 ಮತ್ತು 19ರಂದು ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಅಕ್ಟೋಬರ್ 20ರಂದು ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.

ಚೆನ್ನೈನಲ್ಲಿ ಭಾನುವಾರ ಮತ್ತು ಸೋಮವಾರ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಅಕ್ಟೋಬರ್ 20ರಂದು ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ನಂತರದ ದಿನಗಳಲ್ಲೂ ಮಳೆಯ ಚಟುವಟಿಕೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈಶಾನ್ಯ ಮಾರುತಗಳ ಪ್ರವೇಶ: ಮತ್ತೆ ಚುರುಕಾದ ಮಳೆ
ಅಕ್ಟೋಬರ್ 15ರಂದು ತಮಿಳುನಾಡು, ಪುದುಚೇರಿ ಪ್ರದೇಶಗಳಲ್ಲಿ ಈಶಾನ್ಯ ಮಾರುತಗಳು ಆರಂಭವಾಗಿವೆ. ಇದರ ಬೆನ್ನಲ್ಲೇ ರಾಜ್ಯದ ವಿವಿಧೆಡೆ ಮಳೆಯ ಪ್ರಮಾಣ ಹೆಚ್ಚಾಗಿದೆ. ಚೆನ್ನೈ ಮತ್ತು ಅದರ ಪಶ್ಚಿಮ ಉಪನಗರಗಳಲ್ಲಿ ಈಗಾಗಲೇ ತೀವ್ರ ಮಳೆಯಾಗಿದ್ದು, ಜನಜೀವನದ ಮೇಲೆ ಪರಿಣಾಮ ಬೀರಿದೆ.
ಉತ್ತರ ಚೆನ್ನೈನಲ್ಲಿ ಮಳೆಯ ಅಬ್ಬರ
ಚೆನ್ನೈನಲ್ಲಿ ರಾತ್ರಿ ಸುರಿದ ಭಾರೀ ಮಳೆಯಿಂದ ಹಲವು ಪ್ರದೇಶಗಳಲ್ಲಿ ನೀರು ನಿಂತಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಉತ್ತರ ಚೆನ್ನೈನ ಕತ್ತಿವಾಕ್ಕಂ, ಪ್ಯಾರಿಸ್, ಸತ್ತಂಗಾಡು ಮತ್ತು ತಿರುವೊಟ್ಟಿಯೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿದೆ.
ವರದಿಗಳ ಪ್ರಕಾರ, ಕತ್ತಿವಾಕ್ಕಂನಲ್ಲಿ 310.2 ಮಿ.ಮೀ., ಪ್ಯಾರಿಸ್‌ನಲ್ಲಿ 300.9 ಮಿ.ಮೀ. ಹಾಗೂ ಸತ್ತಂಗಾಡಿನಲ್ಲಿ 234.4 ಮಿ.ಮೀ. ಮಳೆಯಾಗಿದೆ. ತಿರುವೊಟ್ಟಿಯೂರಿನಲ್ಲಿ 198.6 ಮಿ.ಮೀ. ಮತ್ತು ಎನ್ನೂರಿನಲ್ಲಿ 192.4 ಮಿ.ಮೀ. ಮಳೆ ದಾಖಲಾಗಿದೆ. ಕಾರ್ಗಿಲ್ ನಗರದಲ್ಲಿ 180 ಮಿ.ಮೀ., ಮೀನಂಬಾಕ್ಕಂನಲ್ಲಿ 142 ಮಿ.ಮೀ. ಹಾಗೂ ನುಂಗಂಬಾಕ್ಕಂನಲ್ಲಿ 107.7 ಮಿ.ಮೀ. ಮಳೆಯಾಗಿದೆ ಎಂದು ವರದಿಯಾಗಿದೆ.
ತಗ್ಗು ಪ್ರದೇಶಗಳಲ್ಲಿ ಜಲಾವೃತ: ಮುನ್ನೆಚ್ಚರಿಕೆ ಕ್ರಮ
ಭಾರೀ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ಗ್ರೇಟರ್ ಚೆನ್ನೈ ಕಾರ್ಪೊರೇಷನ್ (GCC) ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಮಳೆನೀರು ಚರಂಡಿಗಳನ್ನು ಸ್ವಚ್ಛಗೊಳಿಸಲು ಹಾಗೂ ಜಲಾವೃತ ಸಮಸ್ಯೆಯನ್ನು ನಿಯಂತ್ರಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅಕ್ಟೋಬರ್ 17 ರಂದು ಪಾಲಿಕೆ ವರದಿಯ ಪ್ರಕಾರ, ಚೆನ್ನೈನಲ್ಲಿ ಸರಾಸರಿ 34.2 ಮಿ.ಮೀ. ಮಳೆಯಾಗಿದೆ. ಪೆರಂಬೂರಿನಲ್ಲಿ 87.9 ಮಿ.ಮೀ., ಮಾಧವರಂನಲ್ಲಿ 87 ಮಿ.ಮೀ., ಮುಲ್ಲೈ ನಗರದಲ್ಲಿ 80.6 ಮಿ.ಮೀ. ಹಾಗೂ ಮನಲಿ ನ್ಯೂ ಟೌನ್‌ನಲ್ಲಿ 74.4 ಮಿ.ಮೀ. ಮಳೆ ದಾಖಲಾಗಿದೆ. ಇದೇ ಅವಧಿಯಲ್ಲಿ ಮೀನಂಬಾಕ್ಕಂನಲ್ಲಿ 63.6 ಮಿ.ಮೀ., ತಿರುವೊಟ್ಟಿಯೂರಿನಲ್ಲಿ 62.1 ಮಿ.ಮೀ., ಕತ್ತಿವಾಕ್ಕಂನಲ್ಲಿ 54.3 ಮಿ.ಮೀ. ಮತ್ತು ನುಂಗಂಬಾಕ್ಕಂನಲ್ಲಿ 46.8 ಮಿ.ಮೀ. ಮಳೆಯಾಗಿದೆ.
Heavy Rain Alert: ಮರಗಳು ಧರೆಗೆ, ವಿದ್ಯುತ್ ಅವಘಡಗಳು
ಭಾರೀ ಮಳೆಯ ಪರಿಣಾಮ ನಗರದ ಹಲವು ಭಾಗಗಳಲ್ಲಿ ಮರಗಳು ಧರೆಗುರುಳಿವೆ. ರಸ್ತೆಬದಿಯ ವಿದ್ಯುತ್ ಜಂಕ್ಷನ್ ಬಾಕ್ಸ್‌ಗಳ ಬಳಿ ವಿದ್ಯುತ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡ ಘಟನೆಗಳೂ ವರದಿಯಾಗಿವೆ. ಟಿ.ನಗರ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ಸಂಭವಿಸಿದ ವಿದ್ಯುತ್ ಸಂಬಂಧಿತ ಬೆಂಕಿ ಅವಘಡಗಳನ್ನು ನಿಯಂತ್ರಿಸಲಾಗಿದೆ ಎಂದು ವರದಿಯಾಗಿದೆ.
ಮಳೆಯ ಹಿನ್ನೆಲೆಯಲ್ಲಿ ಅರ್ಕೋಣಂನಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ತಂಡವನ್ನು ಚೆನ್ನೈಗೆ ಕರೆಸಲಾಗಿದೆ ಎಂದು ವರದಿಯಾಗಿದೆ. ತಗ್ಗು ಪ್ರದೇಶಗಳಲ್ಲಿ ಅಗತ್ಯವಿದ್ದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವ ಕುರಿತು ವಿಪತ್ತು ನಿರ್ವಹಣಾ ಸಿಬ್ಬಂದಿ ಮತ್ತು ಸ್ಥಳೀಯ ಆಡಳಿತದ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಅಕ್ಟೋಬರ್ 20ರಂದು ಅತಿ ಭಾರೀ ಮಳೆ ಮುನ್ಸೂಚನೆ
ಹವಾಮಾನ ಇಲಾಖೆಯ ಪ್ರಾದೇಶಿಕ ಮುನ್ಸೂಚನೆಯ ಪ್ರಕಾರ, ಅಕ್ಟೋಬರ್ 18 ಮತ್ತು 19ರಂದು ತಮಿಳುನಾಡು, ಪುದುಚೇರಿ ಹಾಗೂ ಕಾರೈಕಾಲ್‌ನ ಪ್ರತ್ಯೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅಕ್ಟೋಬರ್ 20ರಂದು ಕೆಲವು ಸ್ಥಳಗಳಲ್ಲಿ ಅತಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಅಕ್ಟೋಬರ್ 21ರಿಂದ 24ರವರೆಗೂ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ.
ದಕ್ಷಿಣ ಭಾರತದ ಇತರ ಭಾಗಗಳಲ್ಲಿಯೂ ಮಳೆಯ ಚಟುವಟಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಕರಾವಳಿ ಕರ್ನಾಟಕ, ಕೇರಳ, ದಕ್ಷಿಣ ಒಳನಾಡು ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಾಲ್ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಕಡೆ ಗುಡುಗು, ಮಿಂಚು ಹಾಗೂ ಬಿರುಗಾಳಿಯೂ ಕಾಣಿಸಿಕೊಳ್ಳಬಹುದು ಎಂದು ಮುನ್ಸೂಚನೆ ತಿಳಿಸಿದೆ.


Click it and Unblock the Notifications
