IMD Weather Forecast: ಅಕ್ಟೋಬರ್ 11ರವರೆಗೆ ಈ ಭಾಗಗಳಲ್ಲಿ ಗುಡುಗು ಸಹಿತ ರಣಮಳೆ...Rain Alert
ಬೆಂಗಳೂರು, ಅಕ್ಟೋಬರ್ 06: ಹಿಂಗಾರು ಮಳೆ ಆರಂಭವಾಗುವ ಮೊದಲೇ ದೇಶಾದ್ಯಂತ ಭಾರೀ ಮಳೆ ಅಬ್ಬರ ಮತ್ತೆ ಶುರುವಿಟ್ಟುಕೊಂಡಿದೆ. ಮಳೆ ತೀವ್ರಗೊಳ್ಳಲು ಅರಬ್ಬಿ ಸಮುದ್ರ ಮಟ್ಟದಲ್ಲಿ ಸೃಷ್ಟಿಯಾಗಿರುವ "ಶಕ್ತಿ' ಚಂಡಮಾರುತದ ಪ್ರಭಾವವೇ ಕಾರಣವಾಗಿದೆ. ಮುಂದಿನ ಒಂದು ವಾರಗಳ ಕಾಲ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಗುಡುಗು, ಮಿಂಚು ಸಹಿತ ರಣ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅರಬ್ಬಿ ಸಮುದ್ರದ ಮಧ್ಯ-ಪಶ್ಚಿಮ ಹಾಗೂ ಉತ್ತರ-ಪಶ್ಚಿಮ ಭಾಗದಲ್ಲಿ ರೂಪಗೊಂಡಿದ್ದ ತೀವ್ರ ಚಂಡಮಾರುತ "ಶಕ್ತಿ' ನಿಧಾನವಾಗಿ ದುರ್ಬಲಗೊಂಡು ಈಗ ಸೈಕ್ಲೋನಿಕ್ ಸ್ಟಾರ್ಮ್ ಆಗಿ ಬದಲಾಗಿದೆ. ಒಮಾನ್ ಪ್ರದೇಶದಿಂದ 200 ಕಿಮೀ ಆಗ್ನೇಯ ಅರಬ್ಬಿ ಸಮುದ್ರದಲ್ಲಿ ನೆಲಗೊಂಡಿದೆ. ಪಾಕಿಸ್ತಾನ ಕರಾಚಿಯಿಂದ 910 ಕಿಮೀ ದಕ್ಷಿಣ-ಪಶ್ಚಿಮ ಮತ್ತು ದ್ವಾರಕಾದಿಂದ 950 ಕಿಮೀ ಪಶ್ಚಿಮ-ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ಇದೆ. ಅಕ್ಟೋಬರ್ 7ರಂದು ಈ ಚಂಡಮಾರುತ ಕಡಿಮೆ ಒತ್ತಡದ ಪ್ರದೇಶವಾಗಿ ದುರ್ಬಲಗೊಳ್ಳುವ ಲಕ್ಷಣ ಇದೆ.

ಎಲ್ಲೆಲ್ಲಿ ಭಾರೀ ಮಳೆ ಆಗುತ್ತೆ?
ಉತ್ತರ ಅಫ್ಘಾನಿಸ್ತಾನ್ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ 3 ರಿಂದ 6 ಕಿಮೀ ಎತ್ತರದಲ್ಲಿ ಸ್ಟ್ರಫ್ ಉಂಟಾಗಿದೆ. ಇದರ ಗಾಳಿಯ ವೇಗ ತೀವ್ರಗೊಳ್ಳುತ್ತಿದೆ. ಈಶಾನ್ಯ ಬಿಹಾರ ಪ್ರದೇಶದಲ್ಲಿ ಈ ಬಿರುಗಾಳಿ ಮುಂದುವರಿದಿದೆ. ಅದೇ ರೀತಿ ದಕ್ಷಿಣ ತಮಿಳುನಾಡು ಕರಾವಳಿ ಬಳಿ ಬಂಗಾಳಕೊಲ್ಲಿಯ ಸುಳಿಗಾಳಿ ಎದ್ದಿದೆ. ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಪ್ರದೇಶಗಳಲ್ಲಿ ಕೆಲವು ಕಡೆ ಭಾರೀ ಮಳೆ ಸಾಧ್ಯತೆ ಇದೆ. ಮುಂದಿನ ಮೂರು-ನಾಲ್ಕು ದಿನ ಈ ಮಳೆ ಮುಂದುವರಿಯಲಿದ್ದು, ಪ್ರತಿ ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ.
ಅಕ್ಟೋಬರ್ 7ರಿಂದ 11ರವರೆಗೆ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗಗಳಲ್ಲಿ ಗಾಳಿ ಸಹಿತ ಆಲಿಕಲ್ಲು ಮಳೆಯೂ ಆಗಲಿದೆ. ಅಷ್ಟೇ ಅಲ್ಲದೇ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಅತ್ಯಧಿಕ ಭಾರೀ ಮಳೆ ಆಗಲಿದ್ದು, "ಯೆಲ್ಲೋ ಅಲರ್ಟ್' ನೀಡಲಾಗಿದೆ.
ಕರ್ನಾಟಕ ಸೇರಿ ಕರಾವಳಿ ರಾಜ್ಯಗಳಿಗೆ ಭಾರೀ ಮಳೆ
ಇನ್ನೂ ಅಕ್ಟೋಬರ್ 9ರವರೆಗೆ ತಮಿಳುನಾಡು, ಕೇರಳ, ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಆಂಧ್ರ ಪ್ರದೇಶದಲ್ಲಿ ರಣ ಮಳೆ ಆಗಲಿದೆ. ಗಂಟೆಗೆ ಗರಿಷ್ಠ 40 ಕಿಲೋ ಮೀಟರ್ ವೇಗದ ಗಾಳಿ ಸಹಿತ ಮಳೆ ಅಬ್ಬರಿಸಲಿದೆ. ಕೇರಳ ಮತ್ತು ತಮಿಳುನಾಡು ಕರಾವಳಿಯಲ್ಲಿ ಹೆಚ್ಚಿನ ಮಳೆ ಮುಂದುವರಿಯುವ ನಿರೀಕ್ಷೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.












Click it and Unblock the Notifications