
ತಮಿಳುನಾಡು; ಭಾರೀ ಮಳೆ ಹಲವು ಶಾಲೆಗಳಿಗೆ ರಜೆ ಘೋಷಣೆ
ಚೆನ್ನೈ, ನವೆಂಬರ್ 1: ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಚೆನ್ನೈನಲ್ಲಿ ಭಾರೀ ಮಳೆಯ ನಂತರ, ನಗರದ ಕೆಲವು ಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಅಕ್ಟೋಬರ್ 31ರ ಸೋಮವಾರ ಸಂಜೆ ಚೆನ್ನೈನ ನುಂಗಂಬಾಕ್ಕಂನಲ್ಲಿ 30 ವರ್ಷಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಈಶಾನ್ಯ ಮಾನ್ಸೂನ್ ಚೆನ್ನೈನಲ್ಲಿ ಪ್ರಾರಂಭವಾದಾಗ ಹಲವಾರು ಪ್ರದೇಶಗಳು ಭಾರೀ ಮಳೆಯನ್ನು ದಾಖಲಿಸಿವೆ. ಮಂಗಳವಾರ ನಾಗಪಟ್ಟಣಂ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು 45.40 ಮಿ. ಮೀ. ಮಳೆ ದಾಖಲಾಗಿದೆ. ಸದ್ಯ ಯಾವುದೇ ಹಾನಿ ದಾಖಲಾಗಿಲ್ಲ.
Bengaluru Rains : ಹಿಂಗಾರು ಮಳೆಯ ಮೊದಲ ಆರ್ಭಟ: ಬುಧವಾರ 'ಯೆಲ್ಲೋ ಅಲರ್ಟ್'
ನವೆಂಬರ್ 1ರಂದು ಚೆನ್ನೈನ ನುಂಗಂಬಾಕ್ಕಂ ಪ್ರದೇಶದಲ್ಲಿ 8 ಸೆಂ. ಮೀ. ಮಳೆಯಾಗಿದ್ದು, ಇದು 30 ವರ್ಷಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ ಮತ್ತು 72 ವರ್ಷಗಳಲ್ಲಿ ಮೂರನೇ ಅತಿ ಹೆಚ್ಚು ಮಳೆ ದಾಖಲಾಗಿದೆ. ನವೆಂಬರ್ 1, 1964ರಂದು, ನುಂಗಂಬಾಕ್ಕಂನಲ್ಲಿ 11 ಸೆಂ. ಮೀ ಮಳೆಯಾಗಿದ್ದರೆ, 1990ರಲ್ಲಿ ಈ ಸಂಖ್ಯೆ 13 ಸೆಂ.ಮೀ ಆಗಿತ್ತು ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರದ (ಆರ್‌ಎಂಸಿ) ಮುಖ್ಯಸ್ಥ ಡಾ.ಎಸ್. ಬಾಲಕೃಷ್ಣನ್ ಹೇಳಿದ್ದಾರೆ.
ಈ ವರ್ಷ ಅಕ್ಟೋಬರ್ 1 ರಿಂದ ನವೆಂಬರ್ 1 ರ ನಡುವೆ ಚೆನ್ನೈ ಜಿಲ್ಲೆಯಲ್ಲಿ 20 ಸೆಂ.ಮೀ ಮಳೆಯಾಗಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಚೆನ್ನೈ 28 ಸೆಂ.ಮೀ ಮಳೆಯನ್ನು ದಾಖಲಿಸಿದೆ. ಆದಾಗ್ಯೂ ಈ ವರ್ಷ ಇದೇ ಅವಧಿಯಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯನ್ನು ಕಂಡಿದೆ. ನಾವು ಅಕ್ಟೋಬರ್ 1 ರಿಂದ ಅಕ್ಟೋಬರ್ 31 ರವರೆಗೆ ಲೆಕ್ಕ ಹಾಕಿದರೆ ಚೆನ್ನೈನಲ್ಲಿ ಸಾಮಾನ್ಯವಾಗಿ 27 ಸೆಂ.ಮೀ ಮಳೆಯಾಗುತ್ತದೆ. ಆದರೆ ಈ ವರ್ಷ ಕೇವಲ 14 ಸೆಂ.ಮೀ ಮಳೆಯಾಗಿದೆ. ಇದು ವಾಡಿಕೆಗಿಂತ 48% ಕಡಿಮೆಯಾಗಿದೆ. ನಾವು ಅಕ್ಟೋಬರ್ 31 ರಿಂದ ನವೆಂಬರ್ 1ರ ನಡುವೆ ಸುಮಾರು 18% ನಷ್ಟು ಮಳೆಯನ್ನು ಪಡೆದಿದ್ದೇವೆ ಎಂದು ಡಾ. ಬಾಲಕೃಷ್ಣನ್ ಹೇಳಿದರು.
ಮಳೆಯ ಹಿನ್ನೆಲೆಯಲ್ಲಿ ಚೆನ್ನೈ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಾದ ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟುವಿನ ಎಲ್ಲಾ ಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ. ಚೆನ್ನೈನಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಮತ್ತು ಇನ್ನೂ 24 ಗಂಟೆಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಬಾಲಕೃಷ್ಣನ್ ತಿಳಿಸಿದ್ದಾರೆ.
ಈಶಾನ್ಯ ಮುಂಗಾರು ಮಳೆಯ ಪ್ರಾರಂಭದೊಂದಿಗೆ ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ನಗರದ ಹಲವಾರು ಭಾಗಗಳಲ್ಲಿ ಮೋಟಾರು ಪಂಪ್‌ಗಳನ್ನು ಇರಿಸಿದ್ದು, ಜಲಾವೃತಗೊಂಡಾಗ ವಸತಿ ಪ್ರದೇಶಗಳಿಂದ ನೀರನ್ನು ಪಂಪ್ ಮಾಡಲು ಪ್ರಾರಂಭಿಸಲಾಗುತ್ತದೆ.

ಪ್ರವಾಹಕ್ಕೆ ಸಂಬಂಧಿಸಿದ ಸವಾಲುಗಳನ್ನು ತಗ್ಗಿಸಲು ನಿಯಂತ್ರಣ ಕೊಠಡಿಯನ್ನು ಸಹ ಸ್ಥಾಪಿಸಲಾಗಿದೆ ಎಂದು ಜಿಸಿಸಿ ತಿಳಿಸಿದೆ. ಪ್ರವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ದೂರು ನೀಡಲು ಸಹಾಯವಾಣಿ ಸಂಖ್ಯೆ 1913 ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಲು ಚೆನ್ನೈ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ.