ದೆಹಲಿಯಲ್ಲಿ ದಾಖಲೆ ಬರೆದ ಬಿಸಿಗಾಳಿ, ದೇಶದ ಹಲವೆಡೆ ಮಳೆ ಮುನ್ಸೂಚನೆ
ನವದೆಹಲಿ, ಜೂನ್ 8: ದಕ್ಷಿಣ ಭಾರತ, ಈಶಾನ್ಯಾ ಭಾರತದಲ್ಲಿ ಮುಂಗಾರು ಆರಂಭವಾಗಿದ್ದರೆ, ಉತ್ತರ ಮತ್ತು ಮಧ್ಯ ಭಾರತದ ಹಲವು ಭಾಗಗಳಲ್ಲಿ ಮಾತ್ರ ಮಳೆ ಆರಂಭವಾಗುವುದು ಇನ್ನೂ ತಡವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಮುಂಬರುವ ಕೆಲವು ದಿನಗಳಲ್ಲಿ ಭಾರತದ ಹಲವು ಭಾಗಗಲ್ಲಿ ಬಿಸಿಗಾಳಿ ತೀವ್ರವಾಗಲಿದೆ ಎಂದು ಎಚ್ಚರಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಜೂನ್ 9 ರವರೆಗೆ ಜಮ್ಮು, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ-ದೆಹಲಿ ಮತ್ತು ಪೂರ್ವ ಮಧ್ಯಪ್ರದೇಶದಲ್ಲಿ ಬಿಸಿಗಾಳಿಯ ವಾತಾವರಣ ಇರುವ ಸಾಧ್ಯತೆ ಇದೆ.
ಇದೇ ರೀತಿಯ ಹವಾಮಾನವು ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಮಧ್ಯಪ್ರದೇಶದಲ್ಲಿ ಜೂನ್ 8 ರಂದು ಮತ್ತು ಒಡಿಶಾದಲ್ಲಿ ಜೂನ್ 10 ರವರೆಗೆ ಇರುತ್ತದೆ. ಐಎಂಡಿ ತನ್ನ ಬುಲೆಟಿನ್‌ನಲ್ಲಿ ಮುಂದಿನ ಮೂರು ದಿನಗಳವರೆಗೆ ಮಧ್ಯ ಭಾರತ, ವಾಯುವ್ಯ ಮತ್ತು ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲ ಎಂದು ಹೇಳಿದೆ.
3 ದಿನಗಳ ನಂತರ ತಾಪಮಾನವು ಕ್ರಮೇಣ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಲಿದೆ. ಮುಂದಿನ ನಾಲ್ಕರಿಂದ ಐದು ದಿನಗಳಲ್ಲಿ ದೇಶದ ಉಳಿದ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಾಖಲೆ ಬರೆದ ಬಿಸಿಗಾಳಿ
2022ರಲ್ಲಿ 34 ಬಾರಿ ಬಿಸಿಗಾಳಿಯಿಂದ ದೆಹಲಿ ತತ್ತರಿಸಿದೆ. ಕಳೆದ 12 ವರ್ಷಗಳಲ್ಲೇ ಇದು ದಾಖಲೆಯಾಗಿದೆ. 2010 ರಲ್ಲಿ ಸಫ್ದರ್‌ಜಂಗ್ ಇದೇ ಅವಧಿಯಲ್ಲಿ 20 ಬಾರಿ ಹೆಚ್ಚಿನ ಶಾಖದ ದಿನಗಳನ್ನು ದಾಖಲಿಸಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ದೆಹಲಿಯಲ್ಲಿ ಮಾರ್ಚ್‌ನಲ್ಲಿ ಐದು ದಿನಗಳು, ಏಪ್ರಿಲ್‌ನಲ್ಲಿ 18 ದಿನಗಳು ಮೇ ತಿಂಗಳಲ್ಲಿ 8 ದಿನ ಬಿಸಿಗಾಳಿ ವಾತಾವರಣ ಎದುರಿಸಿದ್ದಾರೆ. ಜೂನ್‌ನಲ್ಲಿ ಒಂದು ವಾರದಲ್ಲೇ 3ನೇ ದಿನ ಬಿಸಿಗಾಳಿ ವಾತಾವರಣ ನಿರ್ಮಾಣವಾಗಿದೆ. ಉತ್ತರ ಭಾರತ ಬಿಸಿಲಿನಂದ ಕಂಗಾಲಾಗಿದ್ದರೆ ದಕ್ಷಿಣ, ಈಶಾನ್ಯ ಭಾರತದಲ್ಲಿ ಮುಂಗಾರು ಆರಂಭವಾಗಿದೆ.

ಕರ್ನಾಟಕದ ಹಲವೆಡೆ ಉತ್ತಮ ಮಳೆ
ರಾಜ್ಯದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ವಿವಿಧ ಭಾಗಗಳಲ್ಲಿ ಜೂನ್ 8 ರಿಂದ ಜೂನ್ 11ರವರೆಗೆ ಧಾರಾಕಾರ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದ ಬಳ್ಳಾರಿ, ಬೆಳಗಾವಿ, ಬೆಂಗಳೂರು ನಗರ, ಚಿತ್ರದುರ್ಗ, ಧಾರವಾಡ, ಗದಗ, ಗೋಕರ್ಣ, ಹಾಸನ, ಹೊನ್ನಾವರ, ಕಲಬುರಗಿ, ಕಾರವಾರ, ಮಡಿಕೇರಿ, ಮಂಡ್ಯ, ಮಂಗಳೂರು, ಮೈಸೂರು, ರಾಯಚೂರು ಮತ್ತು ವಿಜಯಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ.

ದಕ್ಷಿಣ ಭಾರತದ ಹಲವೆಡೆ ಮಳೆ ಸಾಧ್ಯತೆ
ತಮಿಳುನಾಡು, ಪುದುಚೇರಿ, ಕಾರೈಕಲ್, ನೈಋತ್ಯ ಮತ್ತು ಪಶ್ಚಿಮ ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ನೈಋತ್ಯ ಮುಂಗಾರು ಮುಂದುವರೆಯಲಿದೆ. ಅರೇಬಿಯನ್ ಸಮುದ್ರದಿಂದ ದಕ್ಷಿಣ ಪೆನಿನ್ಸುಲಾರ್ ಭಾರತದ ಮೇಲೆ ಪಶ್ಚಿಮ ಗಾಳಿ ಬೀಸುವ ಪರಿಣಾಮದಿಂದ ಕಡಿಮೆ ಉಷ್ಣವಲಯದ ಮಟ್ಟದಲ್ಲಿ, ಕೇರಳ, ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ದಕ್ಷಿಣ ರಾಜ್ಯಗಳ ಮೇಲೆ ಮಳೆಯ ಮುನ್ಸೂಚನೆ ಇದೆ.
ಮುಂದಿನ 5 ದಿನಗಳಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ ಮತ್ತು ತೆಲಂಗಾಣದಲ್ಲಿ ಗುಡುಗು, ಮಿಂಚು ಸಹಿತ ವ್ಯಾಪಕವಾದ ಲಘು ಅಥವಾ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ. ಜೂನ್ 8 ರಂದು ದಕ್ಷಿಣ ಒಳನಾಡಿನಲ್ಲಿ ಕೇರಳ ಮತ್ತು ಮಾಹೆಯಲ್ಲಿ ಜೂನ್ 11 ರವರೆಗೆ ಭಾರಿ ಮಳೆ ಬೀಳುವ ಮುನ್ಸೂಚನೆ ನೀಡಿದೆ.

ಈಶಾನ್ಯ ರಾಜ್ಯಗಳಿಗೂ ಮಳೆ ಎಚ್ಚರಿಕೆ
ಈಶಾನ್ಯ ರಾಜ್ಯಗಳಲ್ಲೂ ಮಳೆಯಾಗುವ ಮುನ್ಸೂಚನೆ ಇದೆ. ಹವಾಮಾನ ಇಲಾಖೆ ಪ್ರಕಾರ ಮುಂಬರುವ ಕೆಲವು ದಿನಗಳಲ್ಲಿ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಉಪ-ಹಿಮಾಲಯ ಭಾಗದಲ್ಲಿರುವ ಪಶ್ಚಿಮ ಬಂಗಾಳ, ಸಿಕ್ಕಿಂ, ನಾಗಾಲ್ಯಾಂಡ್, ಮಿಜೋರಾಂನಲ್ಲಿ ಕೂಡ ಉತ್ತಮ ಮಳೆಯಾಗಲಿದೆ. ಮುಂದಿನ ಐದು ದಿನಗಳಲ್ಲಿ ಬಿಹಾರ, ಜಾರ್ಖಂಡ್, ಒಡಿಶಾದಲ್ಲಿ ಗುಡುಗು, ಸಿಡಿಲು ಸಹಿತ ಚದುರಿದ ಮಳೆಯಾಗುವ ನಿರೀಕ್ಷೆಯಿದೆ.












Click it and Unblock the Notifications