ಎಚ್‌ಡಿ ಕುಮಾರಸ್ವಾಮಿ ಮೋದಿ ಸಂಪುಟಕ್ಕೆ ಎಂಟ್ರಿ- ಕೇರಳ ಜೆಡಿಎಸ್ ಎಕ್ಸಿಟ್
ಎಚ್.ಡಿ.ಕುಮಾರಸ್ವಾಮಿ ಮೋದಿ ಸಂಪುಟಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಕೇರಳ ಜೆಡಿಎಸ್ ಪಕ್ಷದಿಂದ ಎಕ್ಸಿಟ್ ಆಗಲು ನಿರ್ಧರಿಸಿದೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ನೇತೃತ್ವದ ಅಧಿಕೃತ ಜೆಡಿಎಸ್ ಪಕ್ಷದಿಂದ ದೂರ ಉಳಿಯಲು ಕೇರಳ ಜೆಡಿಎಸ್ ನಿರ್ಧರಿಸಿದ್ದು ಹೊಸ ಪಕ್ಷ ಸ್ಥಾಪಿಸಲು ತೀರ್ಮಾನಿಸಿದೆ.
ಜನತಾ ದಳ ಜಾತ್ಯತೀತ) ನ ಕೇರಳ ಘಟಕ ತನ್ನ ಪ್ರಸ್ತುತ ಪಕ್ಷದ ಹೆಸರನ್ನು ಕೈಬಿಟ್ಟು ಹೊಸ ರಾಜಕೀಯ ಘಟಕವನ್ನು ರಚಿಸುವ ಮೂಲಕ ತನ್ನನ್ನು ಮರುಬ್ರಾಂಡ್ ಮಾಡಲು ತೀರ್ಮಾನಿಸಿದೆ.

ಮಂಗಳವಾರ 18 ಜೂನ್ JD (S) ರಾಜ್ಯ ಅಧ್ಯಕ್ಷ ಮ್ಯಾಥ್ಯೂ ಟಿ ಥಾಮಸ್ ಅವರು ರಾಜ್ಯ ಸಮಿತಿ ಸಭೆಯ ನಂತರ ಮಾತನಾಡಿ ಪಕ್ಷಕ್ಕೆ ಹೊಸ ಹೆಸರನ್ನು ನೋಂದಾಯಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಹೇಳಿದರು. ಕಾನೂನು ಪರಿಗಣನೆಗಳ ಪರಿಶೀಲನೆಯಿಂದಾಗಿ ಹೆಸರು ಬದಲಾಯಿಸುವ ನಿರ್ಧಾರ ಬಾಕಿ ಉಳಿದಿದೆ ಎಂದು ಅವರು ಹೇಳಿದರು.
ಜೆಡಿಎಸ್ ಬಿಜೆಪಿಯಿಂದ ದೂರವಾದರೆ ಮಾತ್ರ ಕೇರಳ ಘಟಕ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ ಎಂದು ಥಾಮಸ್ ಹೇಳಿದ್ದಾರೆ. ಪ್ರಸ್ತುತ, ಕೇರಳ ವಿಧಾನಸಭೆಯಲ್ಲಿ ಜೆಡಿ(ಎಸ್) ಥಾಮಸ್ ಮತ್ತು ಕೆ ಕೃಷ್ಣನ್‌ಕುಟ್ಟಿ ಎಂಬ ಇಬ್ಬರು ಶಾಸಕರನ್ನು ಹೊಂದಿದೆ. ಸಚಿವ ಸಂಪುಟದಲ್ಲಿ ಕೆ.ಕೃಷ್ಣನ್ ಕುಟ್ಟಿ ಇಂಧನ ಸಚಿವರಾಗಿದ್ದಾರೆ.
ಜೆಡಿಎಸ್ ಕೇರಳದಲ್ಲಿ ಪಿಣರಾಯಿ ನೇತೃತ್ವದಲ್ಲಿ ಎಲ್ ಡಿಎಫ್ ಸರ್ಕಾರದಲ್ಲಿ ಮೈತ್ರಿ ಹೊಂದಿದೆ. ಇತ್ತ ಕುಮಾರಸ್ವಾಮಿ ಅವರು ಕೇಂದ್ರದ ಎನ್ ಡಿಎ ಸರ್ಕಾರದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹೀಗಾಗಿ ಕೇರಳದಲ್ಲಿ ಎಲ್‌ಡಿಎಫ್-ಎನ್‌ಡಿಎ ಮೈತ್ರಿಕೂಟ ಆಡಳಿತ ನಡೆಸುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಜೆಡಿ(ಎಸ್) ಎನ್‌ಡಿಎಗೆ ಸೇರ್ಪಡೆಗೊಂಡಿತ್ತು. ಆದರೆ ಸಿಎಂ ವಿಜಯನ್ ಮತ್ತು ಆಡಳಿತಾರೂಢಸಿಪಿಐ(ಎಂ) ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ ಮತ್ತು ಜೆಡಿಎಸ್ ಜೊತೆ ಮೈತ್ರಿ ಮುಂದುವರೆಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ರಾಷ್ಟ್ರೀಯ, ಕೇರಳ ಬಣಗಳ ನಡುವೆ ಬಿರುಕು
JD(S) ರಾಷ್ಟ್ರೀಯ ನಾಯಕತ್ವದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವ ಕೇರಳ ನಿರ್ಧಾರಕ್ಕೆ ಕಾರಣ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು. ಈ ಮೈತ್ರಿಯ ಫಲದಿಂದಾಗಿ ಕರ್ನಾಟಕ ಜೆಡಿಎಸ್ ಮುಖ್ಯಸ್ಥ ಎಚ್‌ಡಿ ಕುಮಾರಸ್ವಾಮಿ ಅವರು ಈಗ ಕೇಂದ್ರ ಸಚಿವ ಸಂಪುಟದ ಸದಸ್ಯರಾಗಿದ್ದಾರೆ.
ಜೆಡಿಎಸ್ ನಾಯಕರು ಎಸ್‌ಡಿಎ ಮೈತ್ರಿಕೋಟಕ್ಕೆ ಸೇರಲು ನಿರ್ಧರಿಸಿದಾಗಿನಿಂದ, ಕೇರಳ ಘಟಕದಲ್ಲಿ ಅಸಮಾಧಾನ ಮೂಡಿತ್ತು. ಸಿಪಿಎಂ ನೇತೃತ್ವದ 'ಎಲ್‌ಡಿಎಫ್' ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಕೇರಳ ಜೆಡಿಎಸ್‌ಗೆ, ರಾಜ್ಯದಲ್ಲಿ ಮೈತ್ರಿ ಉಳಿಸಿಕೊಳ್ಳುವ ಒತ್ತಡ ಎದುರಾಗಿತ್ತು.
ಮೈತ್ರಿಕೂಟದ ಮಿತ್ರ ಪಕ್ಷಗಳು ಜೆಡಿಎಸ್ ನಡೆಯನ್ನು ಟೀಕಿಸಲಾರಂಭಿಸಿದ್ದವು. ಪಕ್ಷದ ನಾಯಕರೂ ಆಗಿರುವ ಕರ್ನಾಟಕದ ಸಂಸದ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವ ಸಂಪುಟಕ್ಕೆ ಸೇರಿದ ಬಳಿಕ ಅದು ಇನ್ನಷ್ಟು ಹೆಚ್ಚಾಗಿತ್ತು.
ಹೀಗಾಗಿ ಮಂಗಳವಾರ ಸಭೆ ನಡೆಸಿದ ಕೇರಳ ಜೆಡಿಎಸ್ ನಾಯಕರು, ಹೊಸ ಪಕ್ಷ ರಚಿಸಲು ತೀರ್ಮಾನಿಸಿದ್ದಾರೆ. ಅನರ್ಹತೆಯ ಭೀತಿಯಿಂದಾಗಿ, ಪಕ್ಷದ ಇಬ್ಬರು ಶಾಸಕರು ಹೊಸ ಪಕ್ಷದಲ್ಲಿ ಅದಿಕೃತವಾಗಿ ಯಾವುದೇ ಸ್ಥಾನ ಪಡೆಯದಿರಲು ನಿರ್ಧರಿಸಿದ್ದಾರೆ. ಸದ್ಯಕ್ಕೆ ಅವರು ಅಧಿಕೃತ ಪಕ್ಷದಲ್ಲೇ ಉಳಿಯಲಿದ್ದಾರೆ.











Click it and Unblock the Notifications