Haryana assembly elections 2024: ಕಾಂಗ್ರೆಸ್ ಕೈಗೆ ಅಧಿಕಾರ ಎಂದ ಸಮೀಕ್ಷೆ
ನವದೆಹಲಿ, ಆಗಸ್ಟ್ 10: ಈ ವರ್ಷ ವಿಧಾನಸಭೆ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಹರ್ಯಾಣ ಸಹ ಒಂದು. ಲೋಕಸಭೆ ಚುನಾವಣೆ 2024ರ ಮೊದಲು ರಾಜ್ಯದಲ್ಲಿ ರಾಜಕೀಯ ಬೆಳವಣಿಗೆ ನಡೆದಿತ್ತು. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ ನೀಡಿದ್ದರು. ನಯಾಬ್ ಸಿಂಗ್ ಸೈನಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ, ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತು ಮಾಡಿದ್ದರು.
ಕೇಂದ್ರ ಚುನಾವಣಾ ಆಯೋಗ ಮಹಾರಾಷ್ಟ್ರ, ಹರ್ಯಾಣ, ಜಮ್ಮು & ಕಾಶ್ಮೀರ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿಯನ್ನು ಘೋಷಣೆ ಮಾಡುವ ತಯಾರಿಯಲ್ಲಿದೆ. ನವೆಂಬರ್ 25ಕ್ಕೂ ಮೊದಲು ಹರ್ಯಾಣ ವಿಧಾನಸಭೆಯ ಅವಧಿ ಪೂರ್ಣಗೊಳ್ಳಲಿದ್ದು, ಅದಕ್ಕೂ ಮೊದಲು ಚುನಾವಣೆ ನಡೆದು, ಹೊಸ ಸರ್ಕಾರ ಅಧಿಕಾರಕ್ಕೆ ಬರಬೇಕಿದೆ.

ಹರ್ಯಾಣ ವಿಧಾನಸಭೆ ಚುನಾವಣೆ ಕುರಿತು, ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಆಡಳಿತದ ಕುರಿತು ಚುನಾವಣಾ ಪೂರ್ವ ಸಮೀಕ್ಷೆಗಳು ನಡೆಯುತ್ತಿವೆ. ಹರ್ಯಾಣದಲ್ಲಿ ಬಿಜೆಪಿ-ಜನನಾಯಕ ಜನತಾ ಪಕ್ಷ (ಜೆಜೆಪಿ) ಮೈತ್ರಿಗೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಎದುರಾಳಿಗಳು. 2024ರಲ್ಲಿ ರಾಜ್ಯದ ಆಡಳಿತ ಯಾರ ಕೈ ಸೇರಲಿದೆ ಎಂದು ಕಾದು ನೋಡಬೇಕಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಎಂದ ಸಮೀಕ್ಷೆ: ಹರ್ಯಾಣ ವಿಧಾನಸಭೆ 90 ಸದಸ್ಯ ಬಲವನ್ನು ಹೊಂದಿದೆ. Janmatpolls ರಾಜ್ಯದ ವಿಧಾನಸಭೆ ಚುನಾವಣೆ ಕುರಿತು ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಿದೆ. ಸಮೀಕ್ಷೆಯ ವರದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
ಸಮೀಕ್ಷೆಯ ವರದಿಯಂತೆ 90 ಸದಸ್ಯ ಬಲದ ಹರ್ಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ 50-52 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅಧಿಕಾರವನ್ನು ಪಡೆಯಲಿದೆ. ಬಿಜೆಪಿ 28-30 ಮತ್ತು ಇತರರು 8-9 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ಸಮೀಕ್ಷೆ ಅಂದಾಜಿಸಿದೆ. ರಾಜ್ಯದಲ್ಲಿ ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ 46.
ಸದ್ಯದ ಸಮೀಕ್ಷೆ ವರದಿಯ ಪ್ರಕಾರ ಬಿಜೆಪಿ-ಜನನಾಯಕ ಜನತಾ ಪಕ್ಷ (ಜೆಜೆಪಿ) ಮೈತ್ರಿಗೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆದಿರುವ ಕಾಂಗ್ರೆಸ್ ಹರ್ಯಾಣದಲ್ಲಿ ಅಧಿಕಾರವನ್ನು ಹಿಡಿಯಲಿದೆ.
2024ರ ಲೋಕಸಭೆ ಚುನಾವಣೆ ಬಳಿಕ ಹರ್ಯಾಣ, ಮಹಾರಾಷ್ಟ್ರ, ಜಮ್ಮು & ಕಾಶ್ಮೀರದ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಹರ್ಯಾಣ, ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಸರ್ಕಾರವೇ ಅಸ್ತಿತ್ವದಲ್ಲಿದೆ. ವಿಶೇಷ ಸ್ಥಾನಮಾನ ರದ್ದುಗೊಂಡ ಬಳಿಕ ಮೊದಲ ಬಾರಿಗೆ ಜಮ್ಮು & ಕಾಶ್ಮೀರ ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತಿದೆ.
ಲೋಕಸಭೆ ಚುನಾವಣೆ 2024ಕ್ಕೂ ಮೊದಲು ಬಿಜೆಪಿ-ಜನನಾಯಕ ಜನತಾ ಪಕ್ಷ (ಜೆಜೆಪಿ) ಮೈತ್ರಿಯಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹಬ್ಬಿತ್ತು. ಇದೇ ಸಂದರ್ಭದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸಂಪುಟದ ಸದಸ್ಯರ ಜೊತೆ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ನೀಡಿದರು.
ಬಳಿಕ ಮನೋಹರ್ ಲಾಲ್ ಖಟ್ಟರ್ ಸಂಪುಟದಲ್ಲಿ ಸಚಿವರಾಗಿದ್ದ, ಅವರ ಆಪ್ತರಾಗಿದ್ದ ನಯಾಬ್ ಸಿಂಗ್ ಸೈನಿ ನೂತನ ಮುಖ್ಯಮಂತ್ರಿಯಾದರು. ಹರ್ಯಾಣದಲ್ಲಿ ಒಬಿಸಿ ಸಮಯದಾಯದಲ್ಲಿ ಬಿಜೆಪಿಯ ಪ್ರಭಾವವನ್ನು ಗಟ್ಟಿಗೊಳಿಸಿರುವುದು ನಯಾಬ್ ಸಿಂಗ್ ಸೈನಿ. 1996ರಲ್ಲಿ ಬಿಜೆಪಿ ಜೊತೆಯೇ ಒಡನಾಟ ಅರಂಭಿಸಿದ ಸೈನಿ ಬಿಜೆಪಿ ಯುವ ಘಟಕದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಿದರು.
2010ರ ಚುನಾವಣೆಯಲ್ಲಿ ಸೋಲು ಕಂಡಿದ್ದ ನಯಾಬ್ ಸಿಂಗ್ ಸೈನಿ, 2014ರಲ್ಲಿ ನಾರಾಯಣಗಢ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2016ರಲ್ಲಿ ಸಚಿವರಾಗಿ ಖಟ್ಟರ್ ಕ್ಯಾಬಿನೆಟ್ ಸೇರಿದರು. 2019ರ ಲೋಕಸಭೆ ಚುನಾವಣೆಯಲ್ಲಿ ಕುರುಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. ಸದ್ಯ ಹರ್ಯಾಣಕ್ಕೆ ಅವರೇ ಮುಖ್ಯಮಂತ್ರಿಗಳು.












Click it and Unblock the Notifications