Haryana Assembly Election 2024 Results: ಹರಿಯಾಣದಲ್ಲಿ ಕಾಂಗ್ರೆಸ್‌ನ ವಿನೇಶ್ ಫೋಗಟ್ ಮುನ್ನಡೆ
ನವದೆಹಲಿ, ಅಕ್ಟೋಬರ್ 08: ಹರಿಯಾಣ ವಿಧಾನಸಭೆ ಚುನಾವಣೆ 2024ರ ಮತ ಎಣಿಕೆ ನಡೆಯುತ್ತಿದೆ. 90 ಸದಸ್ಯ ಬಲದ ವಿಧಾನಸಭೆಗೆ ಒಂದೇ ಹಂತದಲ್ಲಿ ಅಕ್ಟೋಬರ್ 5ರ ಶನಿವಾರ ಮತದಾನ ನಡೆದಿತ್ತು. ಮಂಗಳವಾರ ಮತ ಎಣಿಕೆ ನಡೆಯುತ್ತಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 46. ಚುನಾವಣೆಯಲ್ಲಿ ಮಾಜಿ ಕುಸ್ತಿಪಟು ವಿನೇಶ್ ಫೋಗಟ್ ಮುನ್ನಡೆ ಪಡೆದಿದ್ದಾರೆ.
ಹರಿಯಾಣ ವಿಧಾನಸಭೆ ಚುನಾವಣೆ ಮತ ಎಣಿಕೆ ಮಂಗಳವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ. ಕೇಂದ್ರ ಚುನಾವಣಾ ಆಯೋಗದ ಮಾಹಿತಿ ಪ್ರಕಾರ 10 ಗಂಟೆ ವೇಳೆಗೆ ರಾಜ್ಯದಲ್ಲಿ ಕಾಂಗ್ರೆಸ್ 36, ಬಿಜೆಪಿ 38, ಐಎನ್‌ಎಲ್‌ಡಿ 1, ಬಿಎಸ್‌ಪಿ 1 ಇತರರು 3 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಕೈತಪ್ಪಿದ ಬಳಿ ಕುಸ್ತಿಪಟು ವಿನೇಶ್ ಫೋಗಟ್, ಕುಸ್ತಿಯಿಂದ ನಿವೃತ್ತರಾಗಿದ್ದರು. ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. ಕಾಂಗ್ರೆಸ್ ಸೇರಿದ್ದ ಅವರಿಗೆ ಜುಲಾನಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿತ್ತು. ಸದ್ಯದ ಮಾಹಿತಿಯಂತೆ ಅವರು ಮುನ್ನಡೆ ಪಡೆದಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ವಿನೇಶ್ ಫೋಗಟ್ 7,276 ಮತಗಳನ್ನು ಪಡೆದಿದ್ದಾರೆ. ಕ್ಷೇತ್ರದಲ್ಲಿ ವಿನೇಶ್ ಫೋಗಟ್‌ಗೆ ಬಿಜೆಪಿಯ ಯೋಗೇಶ್ ಕುಮಾರ್ ಎದುರಾಳಿ. ವಿನೇಶ್ ಫೋಗಟ್ 2128 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
"ವಿನೇಶ್ ಫೋಗಟ್ ಈ ಹಂತದಲ್ಲಿ ರಾಜಕೀಯಕ್ಕೆ ಸೇರಬಾರದಿತ್ತು. 2028ರ ಒಲಿಂಪಿಕ್ಸ್‌ನಲ್ಲಿ ಅವರು ಚಿನ್ನದ ಪದಕ ಗೆಲ್ಲಬೇಕು ಎಂಬುದು ನನ್ನ ಆಸೆಯಾಗಿತ್ತು" ಎಂದು ಮಹಾವೀರ್ ಫೋಗಟ್ ಹೇಳಿದ್ದರು.
ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಮಾತನಾಡಿದ್ದ ವಿನೇಶ್ ಫೋಗಟ್, "ಜನರ ಆಶೀರ್ವಾದದಿಂದ ಪ್ರತಿಯೊಂದು ಹೋರಾಟವನ್ನು ನಾನು ಗೆಲ್ಲುತ್ತೇನೆ. ನನ್ನ ದೇಶ ನನ್ನ ಜೊತೆ ನಿಂತಿದೆ. ನನ್ನ ಪ್ರೀತಿ ಪಾತ್ರರು ನನ್ನ ಜೊತೆ ಇದ್ದಾರೆ. ನನಗೆ ಅವರೇ ಮುಖ್ಯ" ಎಂದು ತಿಳಿಸಿದ್ದರು.
ಕೇಂದ್ರ ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ ಹರಿಯಾಣದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ ದಾಟಿದೆ. ಬಿಜೆಪಿ 48, ಕಾಂಗ್ರೆಸ್ 34, ಐಎನ್‌ಎಲ್‌ಡಿ 1, ಬಿಎಸ್‌ಪಿ 1 ಇತರರು 5 ಸ್ಥಾನಗಳಲ್ಲಿ ಮುನ್ನಡೆ ಕಾಪಾಡಿಕೊಂಡಿದ್ದಾರೆ.
ಸಮಯ 10.28ರ ಮಾಹಿತಿಯಂತೆ ವಿನೇಶ್ ಫೋಗಟ್ ಹಿನ್ನಡೆ ಅನುಭವಿಸಿದ್ದಾರೆ. ಬಿಜೆಪಿಯ ಯೋಗೇಶ್ ಕುಮಾರ್ 14,329 ಮತಗಳನ್ನು ಪಡೆದಿದ್ದಾರೆ. ವಿನೇಶ್ ಫೋಗಟ್ 12,209 ಮತಗಳನ್ನು ಪಡೆದಿದ್ದಾರೆ.
ಕಾಂಗ್ರೆಸ್ ಪಕ್ಷ ಸೇರುವ ಮೊದಲು ವಿನೇಶ್ ಫೋಗಟ್ ಭಾರತೀಯ ರೈಲ್ವೆಯಲ್ಲಿನ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಉತ್ತರ ರೈಲ್ವೆಯಲ್ಲಿ ಅವರು ವಿಶೇಷ ಕರ್ತವ್ಯದ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಅವರು, ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. "ಭಾರತೀಯ ರೈಲ್ವೆಗೆ ಸೇವೆ ಸಲ್ಲಿಸುವುದು ನನ್ನ ಜೀವನದಲ್ಲಿ ಸ್ಮರಣೀಯ ಮತ್ತು ಹೆಮ್ಮೆಯ ಸಮಯ" ಎಂದು ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದರು.












Click it and Unblock the Notifications