ದೇವಸ್ಥಾನದ ಕಾಣಿಕೆ ಪೆಟ್ಟಿಗೆಯಿಂದ 5000 ರೂ. ಕದ್ದು 10 ರೂಪಾಯಿ ದೇಣಿಗೆ ನೀಡಿದ ಕಳ್ಳ!
ದೇವಸ್ಥಾನದಲ್ಲಿ ಕಳ್ಳತನಕ್ಕಾಗಿ ಬಂದ ಕಳ್ಳನೊಬ್ಬ ಹನುಮಾನ್ ಚಾಲೀಸ್ ಪಠಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾತ್ರವಲ್ಲದೆ ಕಳ್ಳ ಹಣ ಕದಿಯುವ ಮುನ್ನ ದೇವರ ಪಾದದ ಮೇಲೆ ಹಣವನ್ನು ಇಟ್ಟಿದ್ದಾನೆ. ಕಳ್ಳನ ಈ ನಡೆ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ.
ಹರಿಯಾಣದ ರೇವಾರಿ ಜಿಲ್ಲೆಯ ಧರುಹೆರಾದಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಕಾಣಿಕೆ ಪೆಟ್ಟಿಗೆಯ ಬೀಗ ಒಡೆದ ಕಳ್ಳನೊಬ್ಬ 5,000 ರೂಪಾಯಿ ಕಳ್ಳತನ ಮಾಡಿದ್ದಾನೆ. ಆದರೆ ಕಳ್ಳತನ ಮಾಡುವ ಮುನ್ನ ಆತ ಹನುಮಾನ್ ಚಾಲೀಸ್ ಪಠಿಸಿದ್ದಾನೆ ಎಂಬುದು ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ.

ಸಿಸಿಟಿವಿ ದೃಶ್ಯಾವಳಿಗಳು ತೋರಿಸುವಂತೆ, ಅವರು ಭಗವಾನ್ ಹನುಮಾನ್ ವಿಗ್ರಹದ ಮುಂದೆ ಕುಳಿತು ಕೆಲವು ನಿಮಿಷಗಳ ಕಾಲ ಅಲ್ಲಿಯೇ ಧ್ಯಾನ ಮಾಡುವಂತೆ ಕಂಡು ಬಂದಿದೆ. ಈ ಸಮಯದಲ್ಲಿ ಆತ ಭಕ್ತರ ಮೇಲೆ ಗಮನವನ್ನು ಇಡುತ್ತಾನೆ. ಬಳಿಕ ಆತ ಯಾರಿಗೂ ಅನುಮಾನ ಬಾರಬಾರದೆಂಬಂತೆ 10 ರೂಪಾಯಿಯ ನೋಟನ್ನು ದೇವರ ಪಾದದ ಮೇಲೆ ಇಟ್ಟು ಹನುಮಾನ್ ಚಾಲೀಸಾವನ್ನು ಪಠಿಸುತ್ತಾನೆ. ಸೂಕ್ತ ಅವಕಾಶ ಸಿಕ್ಕ ತಕ್ಷಣ ಪೆಟ್ಟಿಗೆಯನ್ನು ತೆರೆದು ನೋಟುಗಳ ಕಂತೆಯನ್ನು ತೆಗೆದು ಅಲ್ಲಿಂದ ಹೊರಡುತ್ತಾನೆ.
ಕಳ್ಳತನ ನಡೆದಿರುವುದು ಅರಿಯದ ಅರ್ಚಕರು ರಾತ್ರಿ ದೇವಸ್ಥಾನದ ಬಾಗಿಲು ಮುಚ್ಚಿ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ಹಿಂದಿರುಗಿದಾಗ ಕಾಣಿಕೆ ಡಬ್ಬಿಯ ಬೀಗ ಮುರಿದಿರುವುದು ಕಂಡು ಬಂದಿದೆ ಎಂದು ತಿಳಿದು ಬಂದಿದೆ.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕಳ್ಳನು ಕಳ್ಳತನ ಮಾಡುವ ಮೊದಲು ಹನುಮಾನ್ ಚಾಲೀಸಾವನ್ನು ಪಠಿಸುವುದನ್ನು ಮತ್ತು ದೇವರ ಪಾದಗಳಿಗೆ ಹಣವನ್ನು ಅರ್ಪಿಸುವುದು ಕಂಡುಬಂದಿದೆ. ಪೊಲೀಸರು ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆತನ ಪತ್ತೆಗೆ ಶೋಧ ನಡೆಸಿದ್ದಾರೆ.
ದೇವಸ್ಥಾನದಲ್ಲಿ ಕದ್ದ ಆಭರಣವಾಪಸ್ ಕೊಟ್ಟ ಕಳ್ಳತನ
ಒಂಬತ್ತು ವರ್ಷಗಳ ಹಿಂದೆ ದೇವಸ್ಥಾನದಲ್ಲಿ ಕದ್ದ ಆಭರಣಗಳನ್ನು ಕಳ್ಳನೊಬ್ಬ ಮತ್ತೆ ವಾಪಸ್ಸು ತಂದಿಟ್ಟ ವಿಚಿತ್ರ ಘಟನೆಯೊಂದು ಓಡಿಶಾದಲ್ಲಿ ಕಳೆದ ಮಾರ್ಚ್‌ನಲ್ಲಿ ನಡೆದಿತ್ತು. ಓಡಿಶಾದ ಭುವನೇಶ್ವರದ ಹೊರವಲಯದಲ್ಲಿರುವ ದೇವಾಲಯದಿಂದ ಬೆಳ್ಳಿ ಆಭರಣಗಳನ್ನು ಕದ್ದಿದ್ದ ವ್ಯಕ್ತಿಯೊಬ್ಬರು ಲಿಖಿತ ಟಿಪ್ಪಣಿಯ ಮೂಲಕ ತನ್ನ ಅಪವಿತ್ರ ಕೃತ್ಯಕ್ಕೆ ಕ್ಷಮೆಯಾಚಿಸುವಂತೆ ಹೇಳಿ ಎಲ್ಲವನ್ನೂ ಹಿಂದಿರುಗಿಸಿದ್ದರು.
ಮೇ 2014ರಲ್ಲಿ ಭುವನೇಶ್ವರದ ಗೋಪಿನಾಥಪುರ ಗ್ರಾಮದ ರಾಧಾ-ಕೃಷ್ಣ ದೇವಾಲಯದ ಹಲವಾರು ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿತ್ತು. ಕದ್ದ ಆಭರಣಗಳಲ್ಲಿ ಶಿರಸ್ತ್ರಾಣ, ಕಿವಿಯೋಲೆಗಳು, ಬಳೆಗಳು ಮತ್ತು ಕೊಳಲು ಸೇರಿದೆ. ಪೊಲೀಸರಿಗೆ ದೂರು ನೀಡಿದರೂ ಪ್ರಕರಣದಲ್ಲಿ ಯಾವುದೇ ಪ್ರಗತಿಯಾಗಿರಲಿಲ್ಲ. ಆದರೆ ಒಂಬತ್ತು ವರ್ಷಗಳ ಬಳಿಕ ಕಳ್ಳ ಕದ್ದ ಆಭರಣಗಳನ್ನು ದೇವಸ್ಥಾನಕ್ಕೆ ವಾಪಸ್ಸು ನೀಡಿದ್ದನು. ಇದರೊಂದಿಗೆ ಹಿಂದಿಯಲ್ಲಿ ಚೀಟಿಯನ್ನೂ ಬರೆದಿಟ್ಟಿದ್ದನು.

ಕ್ಷಮಾಪಣೆಯ ಚೀಟಿಯೊಂದಿಗೆ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಆಭರಣಗಳ ಚೀಲವನ್ನು ದೇವಸ್ಥಾನದ ಪಕ್ಕದ ಮನೆಯೊಂದರ ಹೊರಗೆ ಇರಿಸಲಾಗಿದ್ದು, ಈ ಹಿಂದೆ ಕಳ್ಳರು ಅದನ್ನು ಕದ್ದೊಯ್ದಿದ್ದರು.
ಕ್ಷಮಾಪಣೆಯ ಚೀಟಿಯಲ್ಲಿ "ನನಗೆ ಇತ್ತೀಚೆಗೆ ಭಗವದ್ಗೀತಾ ಓದಿದ ಬಳಿಕ ಪಶ್ವಾತ್ತಾಪವಾಯಿತು. ದೇವಸ್ಥಾನದಲ್ಲಿ ಯಜ್ಞ ನಡೆಯುತ್ತಿದ್ದಾಗ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದೆ. ಆಭರಣಗಳನ್ನು ಕದ್ದ ನಂತರ ನಾನು ಒಂಬತ್ತು ವರ್ಷಗಳಲ್ಲಿ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದೆ. ಅದಕ್ಕಾಗಿಯೇ ನಾನು ದೇವಸ್ಥಾನದಲ್ಲಿ ಕದ್ದ ಎಲ್ಲಾ ಆಭರಣಗಳನ್ನು ವಾಪಸ್ಸು ನೀಡಲು ನಿರ್ಧರಿಸಿದ್ದೇನೆ'' ಎಂದು ಆಭರಣ ಕದ್ದ ವ್ಯಕ್ತಿ ಹೇಳಿದ್ದನು. ಅವರು ತಮ್ಮ ಹೆಸರನ್ನು ಟಿಪ್ಪಣಿಯಲ್ಲಿ ನೀಡಿರಲಿಲ್ಲ.
ಕಳ್ಳತನವಾದ ಆಭರಣಗಳನ್ನು ವಶಪಡಿಸಿಕೊಳ್ಳುವುದು ಪವಾಡಕ್ಕಿಂತ ಕಡಿಮೆಯಿಲ್ಲ ಎಂದು ದೇವಾಲಯದ ಅರ್ಚಕ ಕೈಲಾಶ್ ಪಾಂಡಾ ಹೇಳಿದ್ದರು. "ಆಭರಣಗಳು ಈ ರೀತಿ ಮತ್ತೆ ಕಾಣಿಸಿಕೊಳ್ಳುತ್ತವೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಘಟನೆಯ ನಂತರ ನಾವು ದೇವತೆಗಳಿಗೆ ಹೊಸ ಆಭರಣಗಳನ್ನು ಖರೀದಿಸಿದ್ದೆವು. ಇದು ದೈವಿಕ ಹಸ್ತಕ್ಷೇಪವಲ್ಲದೆ ಬೇರೇನೂ ಅಲ್ಲ" ಎಂದು ಪಾಂಡ ಹೇಳಿದರು.












Click it and Unblock the Notifications