ಹರ್ಷವರ್ಧನ್ ರಾಜೀನಾಮೆ ಮೂಲಕ ಕೊರೊನಾ ನಿರ್ವಹಣೆ ವೈಫಲ್ಯ ಒಪ್ಪಿಕೊಂಡ ಕೇಂದ್ರ
ನವದೆಹಲಿ, ಜುಲೈ 08: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ರಾಜೀನಾಮೆಯು ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿ ವೈಫವನ್ನು ಎತ್ತಿ ತೋರಿಸಿದೆ.
ಕೊರೊನಾ ಎರಡನೇ ಅಲೆಯ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎನ್ನವು ಆರೋಪವು ಸಾರ್ವಜನಿಕ ವಲಯ ಹಾಗೂ ಪ್ರತಿಪಕ್ಷಗಳಿಂದ ಕೇಳಿಬಂದಿತ್ತು.
ಆದರೆ ಇದನ್ನು ಕೇಂದ್ರ ಸರ್ಕಾರ ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ ಆದರೆ ಆರೋಗ್ಯ ಸಚಿವ ಹರ್ಷವರ್ಧನ್ ರಾಜೀನಾಮೆ ಮೂಲಕ ಕೇಂದ್ರ ಸರ್ಕಾರವು ಆರೋಗ್ಯ ಸಚಿವಾಲಯದ ವೈಫಲ್ಯ ಹಾಗೂ ಕೊರೊನಾ ನಿಯಂತ್ರಣದಲ್ಲಿ ಎಡವಿದ್ದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.

ಕೇಂದ್ರ ಆರೋಗ್ಯ ಸಚಿವರಾಗಿದ್ದ ಹರ್ಷವರ್ಧನ್ ಕೊರೊನಾ ನಿಯಂತ್ರಣ ಹಾಗೂ ಕೊರೊನಾ ಎರಡನೇ ಅಲೆಯ ಲೆಕ್ಕಾಚಾರದಲ್ಲಿ ಸಂಪುರ್ಣ ಎಡವಿದ್ದರು ಎನ್ನುವ ಆರೋಪವು ಮೊದಲಿನಿಂದಲೂ ಇತ್ತು.
2021ರ ಮಾರ್ಚ್‌ನಲ್ಲಿ ಭಾರತವು ಕೊರೊನಾ ಸೋಂಕಿನಿಂದ ಸಂಪೂರ್ಣ ಮುಕ್ತವಾಗಿದೆ ಎಂದು ದೇಶದ ಜನತೆಯ ಮುಂದೆ ಹೇಳಿದ್ದರು, ಆದರೆ ಈ ಹೇಳಿಕೆಯ ಕೆಲವೇ ದಿನಗಳ ಬಳಿಕ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿತ್ತು.
ಇದರಿಂದ ಎಚ್ಚೆತ್ತುಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೆಯೇ ಪ್ರಧಾನಿ ಕಾರ್ಯಾಲಯ ಕೊರೊನಾ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ತಾನೇ ನಿರ್ವಹಿಸಿಕೊಂಡಿತ್ತು.
ಪ್ರಧಾನಿ ಕಾರ್ಯಾಲಯ, ನೀತಿ ಆಯೋಗ ಹಾಗೂ ಕೊರೊನಾ ಕಾರ್ಯಪಡೆಯು ಕೊರೊನಾ ನಿಯಂತ್ರಣದ ಮೇಲುಸ್ತುವಾರಿ ನೋಡಿಕೊಳ್ಳಲು ಆರಂಭಿಸಿತ್ತು.
ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಮುಖ್ಯಮಂತ್ರಿಗಳ ಸರಣಿ ಸಭೆ, ಇಲಾಖೆಯ ಸರಣಿ ಸಭೆಯನ್ನು ಪ್ರಧಾನಿ ಕಾರ್ಯಾಲಯ ನೇರವಾಗಿ ಮಾಡಿತ್ತು.
ಈ ಕೆಲ ಸಭೆಗಳಲ್ಲಿ ಆರೋಗ್ಯ ಸಚಿವ ಹರ್ಷವರ್ಧನ್ ಇಲ್ಲದಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಇದಕ್ಕೆ ಕಾರಣವೇನೆಂದರೆ ಹರ್ಷವರ್ಧನ್ ಹೇಳಿಕೆ ಹಾಗೂ ಕಾರ್ಯವೈಖರಿಯಿಂದ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.
ದೇಶದಲ್ಲಿ ಈಗ ಲಸಿಕೆ ಹಂಚಿಕೆ ಅಭಿಯಾನ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ, ಹಾಗೆಯೇ ಮೂರನೇ ಅಲೆಯ ಅಪಾಯ ಕೂಡ ಎದುರಾಗಿದೆ. ಈ ಹಂತದಲ್ಲಿ ಹರ್ಷವರ್ಧನ್ ಅವರನ್ನು ಇರಿಸಿಕೊಂಡರೆ ಕಾರ್ಯ ನಿರ್ವಹಣೆ ಕಷ್ಟವಾಗಬಹುದು ಎನ್ನುವ ಕಾರಣಕ್ಕೆ ತನ್ನ ನಂಬಿಕಸ್ಥ ಹಾಗೂ ಸಚಿವ ಮನ್ಸುಖ್ ಅವರಿಗೆ ಆರೋಗ್ಯ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.
ಈ ಹಿಂದೆ ಬಂದರು ಸಚಿವರಾಗಿದ್ದ ಮನ್ಸುಖ್ ಅವರು ಗುಜರಾತ್ ಮೂಲದವರಾಗಿದ್ದಾರೆ ಹಾಗೂ ಪ್ರಧಾನಿ ನರೇಂದ್ರ ಮೋದಿಯ ಅತ್ಯಂತ ನಂಬಿಕಸ್ಥ ಸಚಿವ ಎನ್ನಲಾಗುತ್ತಿದೆ. ಕೋವಿಡ್ ನಿರ್ವಹಣೆ ಸಂದರ್ಭದಲ್ಲಿಯೂ ಇವರ ಪಾತ್ರ ಬಹಳ ದೊಡ್ಡದಿತ್ತು ಎನ್ನುವ ಮಾತು ಕೇಳಿಬಂದಿದೆ.
ವಿದೇಶಗಳಿಂದ ಆಮ್ಲಜನಕ ಸಾಂಧ್ರಕಗಳ ಆಮದು ಮತ್ತು ಕೆಲವು ಪ್ರಮುಖ ಔಷಧಿಗಳ ಆಮದಿನ ವಿಚಾರದಲ್ಲಿ ಮನ್ಸುಖ್ ಅವರು ಪ್ರಮುಖ ಪಾತ್ರವಹಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಈಗ ರಾಸಾಯನಿಕ ಇಲಾಖೆಯನ್ನು ಆರೋಗ್ಯ ಇಲಾಖೆಯೊಂದಿಗೆ ಸೇರಿಸಿ ದೊಡ್ಡ ಜವಾಬ್ದಾರಿಯನ್ನು ನೀಡಲಾಗಿದೆ.












Click it and Unblock the Notifications