ಬಿಲಾವಲ್ ಭುಟ್ಟೋ ಹೇಳಿಕೆಗೆ ಖಡಕ್ ತಿರುಗೇಟು ಕೊಟ್ಟ ಭಾರತ
ನವದೆಹಲಿ, ಏಪ್ರಿಲ್ 27: "ಸಿಂಧೂ ನಮ್ಮದು ಮತ್ತು ನಮ್ಮದೇ ಆಗಿರುತ್ತದೆ. ಒಂದೋ ನಮ್ಮ ನೀರು ಅದರ ಮೂಲಕ ಹರಿಯುತ್ತದೆ ಅಥವಾ ಅವರ ರಕ್ತ ಹರಿಯುತ್ತದೆ" ಎಂಬ ಪಿಪಿಪಿ ನಾಯಕ ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. "ನಿಮ್ಮ ಮಾನಸಿಕ ಆರೋಗ್ಯವನ್ನು ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಭಾರತ ಪಾಕಿಸ್ತಾನ ಮಾಜಿ ವಿದೇಶಾಂಗ ಸಚಿವರಿಗೆ ತಿರುಗೇಟು ಕೊಟ್ಟಿದೆ.
ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿಕೆಯನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಸಿಂಗ್ ಪುರಿ ಖಂಡಿಸಿದ್ದಾರೆ. "ಅವರಿಗೆ ತನ್ನ ಮಾನಸಿಕ ಸ್ಥಿತಿಯನ್ನು ಪರೀಕ್ಷೆ ಮಾಡಿಸಿಕೊಳ್ಳಲು ಹೇಳಿ, ಅವರು ನೀಡುತ್ತಿರುವ ಹೇಳಿಕೆಗಳು ಯಾವ ರೀತಿಯವು. ನಾವು ಇದನ್ನು ಇನ್ನಷ್ಟು ಸಹಿಸುವುದಿಲ್ಲ. ಕೆಲವು ದಿನಗಳ ಕಾಲ ಕಾಯಿರಿ" ಎಂದು ಪುರಿ ಹೇಳಿದ್ದಾರೆ.

ಶುಕ್ರವಾರ ಸಿಂಧ್ ಪ್ರಾಂತ್ಯದ ಸುಕೂರ್ ಪ್ರದೇಶದಲ್ಲಿ ಸಮಾವೇಶ ಆಯೋಜನೆ ಮಾಡಲಾಗಿತ್ತು. ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಿಲಾವಲ್ ಭುಟ್ಟೋ ಜರ್ದಾರಿ, "ಸಿಂಧೂ ನದಿ ನೀರು ನಮಗೆ ಸೇರಿದ್ದು, ಅದು ಎಂದೆದಿಗೂ ನಮ್ಮದಾಗಿರುತ್ತದೆ. ನಮ್ಮ ಪಾಲಿನ ನೀರು ಅದರ ಮೂಲಕ ಹರಿಯುವುದೋ ಅಥವ ರಕ್ತ ಹರಿಯುವುದೋ ಎಂಬುದು ಮುಂದೆ ನಿರ್ಧಾರವಾಗಲಿದೆ" ಎಂದು ಹೇಳಿಕೆ ನೀಡಿದ್ದರು.
"ಸಿಂಧೂ ನದಿ ಈ ಪ್ರಾಂತ್ಯದ ಮೂಲಕ ಹರಿಯುತ್ತದೆ ಮತ್ತು ಮೆಹೆಂಜೊ ದಾರೊ ನಾಗರಿಕತೆಯು ಸಿಂಧೂ ನದಿ ಪಾತ್ರದಲ್ಲಿ ಹುಟ್ಟಿಕೊಂಡಿದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ನಾಗರಿಕತೆಯು ಭಾರತಕ್ಕೆ ಸೇರಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ. ಆದರೆ ಈ ನಾಗರೀಕತೆ ಲಡ್ಕಾನಾದ ಮೊಹೆಂಜೊ ದಾರೋದಲ್ಲಿದೆ, ಅದರ ನೈಜ ಮಾಲೀಕರು ನಾವಾಗಿದ್ದೇವೆ" ಎಂದು ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದ್ದರು.
ಪಹಲ್ಗಾಮ್ ಉಗ್ರರ ದಾಳಿ: ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆ, ಪೊಲೀಸರು ಉಗ್ರರು ಮತ್ತು ಅವರ ಬೆಂಬಲಿಗರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಉಗ್ರರ ಮನೆಗಳನ್ನು ಧ್ವಂಸ ಮಾಡುವುದು, ಅವರ ಸುರಕ್ಷಿತ ತಾಣಗಳ ಮೇಲೆ ದಾಳಿ ನಡೆಸುವುದು ಮತ್ತು ಶಂಕಿತರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ನಡೆಸುವುದು, ಬಂಧಿಸುವುದು ಸೇರಿ ಹಲವು ಕ್ರಮಗಳು ಸೇರಿವೆ.
ಈ ನಡುವೆ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಎಲ್ಲಾ ಮಾಧ್ಯಮ ಚಾನೆಲ್‌ಗಳಿಗೆ ರಕ್ಷಣಾ ಕಾರ್ಯಾಚರಣೆಗಳು ಮತ್ತು ಭದ್ರತಾ ಪಡೆಗಳ ಚಲನವಲನಗಳ ಕುರಿತು ನೇರ ಪ್ರಸಾರದ ವರದಿಗಳನ್ನು ಮಾಡಬೇಡಿ ಎಂದು ಸೂಚನೆ ನೀಡಿದೆ. ಈ ಕುರಿತು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್, "ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿ ಪಡೆದ ಮಾರಕ ದಾಳಿಯ ತಟಸ್ಥವಾದ ತನಿಖೆಗೆ ಸಿದ್ಧವಿದ್ದೇವೆ. ಭಾರತವು ಪಾಕಿಸ್ತಾನ ಗಡಿಯಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದೆ. ಪ್ರವಾಸಿಗರ ಮೇಲೆ ನಡೆದ ದಾಳಿಯಲ್ಲಿ ನಾವು ಭಾಗಿಯಾಗಿಲ್ಲ" ಎಂದು ಹೇಳಿದ್ದಾರೆ.












Click it and Unblock the Notifications