ಗುರುದಾಸಪುರ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಭರ್ಜರಿ ಜಯ
ಚಂಡೀಗಢ, ಅಕ್ಟೋಬರ್ 15: ಬಿಜೆಪಿಯ ವಿನೋದ್ ಖನ್ನಾ ಸಾವಿನಿಂದ ತೆರವಾದ ಪಂಜಾಬ್ ನ ಗುರುದಾಸಪುರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಜಾಖರ್ 1,93,219 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸ್ವರಣ್ ಸವಾರಿಯಾರನ್ನು ಸೋಲಿಸಿದ್ದಾರೆ. ದಶಕಗಳ ಕಾಲ ತನ್ನ ಹಿಡಿತದಲ್ಲಿದ್ದ ಕ್ಷೇತ್ರವನ್ನು ಕಳೆದುಕೊಂಡು ಬಿಜೆಪಿ-ಅಕಾಲಿದಳ ಭಾರೀ ಮುಖಭಂಗ ಅನುಭವಿಸಿದೆ.

ಸುನಿಲ್ ಜಾಖರ್ 4,99,752 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಸ್ವರಣ್ 3,06,533 ಮತಗಳನ್ನು ಪಡೆದುಕೊಂಡಿದ್ದಾರೆ. ಎಎಪಿ ಅಭ್ಯರ್ಥಿ ನಿವೃತ್ತ ಮೇಜರ್ ಜನರಲ್ ಸುರೇಶ್ ಖಜೂರಿಯಾ 23,579 ಮತಗಳನ್ನು ಪಡೆದುಕೊಂಡಿದ್ದು ಮೂರನೇ ಸ್ಥಾನ ಗಿಟ್ಟಿಸಿದ್ದಾರೆ.
ಕೇರಳದಲ್ಲೂ ಕಾಂಗ್ರೆಸ್ ಮೈತ್ರಿಕೂಟಕ್ಕೆ ಜಯ
ಇನ್ನು ಕೇರಳದ ವೆಂಗಾರ ವಿಧಾನಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ (ಯುಡಿಎಫ್) ಅಭ್ಯರ್ಥಿ ಕೆ.ಎನ್.ಎ ಖಾದರ್ ಗೆಲುವು ಸಾಧಿಸಿದ್ದಾರೆ. ಅವರು ಆಡಳಿತರೂಢ ಲೆಫ್ಟ್ ಡೆಮಾಕ್ರಾಟಿಕ್ ಫ್ರಂಟ್ (ಎಲ್ ಡಿಎಫ್) ಅಭ್ಯರ್ಥಿ ಪಿ.ಪಿ ಬಶೀರ್ ರನ್ನು 23,310 ಮತಗಳಿಂದ ಸೋಲಿಸಿದ್ದಾರೆ.
ಖಾದರ್ 65,227 ಮತಗಳನ್ನು ಪಡೆದರೆ, ಬಶೀರ್ 41,917 ಮತ ಹಾಗೂ ಎಸ್.ಡಿ.ಪಿ.ಐ ಅಭ್ಯರ್ಥಿ ಕೆ.ಸಿ ನಸೀರ್ 8,648 ಮತಗಳನ್ನು ಪಡೆದಿದ್ದಾರೆ. ಇಲ್ಲೂ ಬಿಜೆಪಿ ಹೀನಾಯ ಫಲಿತಾಂಶ ಪಡೆದಿದ್ದು ಅಭ್ಯರ್ಥಿ ಕೆ ಜನಚಂದ್ರನ್ ಕೇವಲ 5,728 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ.












Click it and Unblock the Notifications