Morbi Bridge Death Toll : ಗುಜರಾತ್ ಮೊರ್ಬಿ ಸೇತುವೆ ದುರಂತ: 100 ಸಾವು, 177 ಮಂದಿ ರಕ್ಷಣೆ
ಅಹಮದಾಬಾದ್, 31: ಗುಜರಾತ್‌ನ ಮೊರ್ಬಿಯಲ್ಲಿ ಬ್ರಿಟಿಷರ ಕಾಲದ ಸೇತುವೆ ನವೀಕರಣಗೊಂಡ ಒಂದು ವಾರದೊಳಗೆ ಕುಸಿದಿದ್ದು, ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ. ದುರಂತದಲ್ಲಿ ನದಿಗೆ ಬಿದ್ದ 100 ಕ್ಕೂ ಹೆಚ್ಚು ಮಂದಿಗಾಗಿ ಶೋಧ ನಡೆಸಲಾಗುತ್ತಿದೆ. 177 ಜನರನ್ನು ರಕ್ಷಿಸಲಾಗಿದೆ. ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ.
ಅಹಮದಾಬಾದ್‌ನಿಂದ 200 ಕಿಮೀ ದೂರದಲ್ಲಿರುವ ತೂಗು ಸೇತುವೆ ಭಾನುವಾರ ಸಂಜೆ 6.42ಕ್ಕೆ ಕುಸಿದು ಬಿದ್ದಿದ್ದು, ಛಾತ್ ಪೂಜೆಯ ಕೆಲವು ಆಚರಣೆಗಳನ್ನು ಮಾಡಲು ಸುಮಾರು 500 ಜನರು ಸೇತುವೆ ಮೇಲೆ ಜಮಾಯಿಸಿದ್ದರು.
ವರದಿಗಳ ಪ್ರಕಾರ, ಮಚ್ಚು ನದಿಯ ನೀರಿನಲ್ಲಿ ಸುಮಾರು 100 ಜನರು ಇನ್ನೂ ಸಿಕ್ಕಿಬಿದ್ದಿದ್ದಾರೆ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಅನೇಕರು ನೀರಿನಿಂದ ಹೊರ ಬರಲು ಪರದಾಡುತ್ತಿರುವುದು ಕಾಣಿಸಿದೆ. ಮೃತಪಟ್ಟ 100 ಮಂದಿಯಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಎಪ್ಪತ್ತು ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕತ್ತಲೆಯಲ್ಲಿ ರಕ್ಷಣಾ ಕಾಮಗಾರಿಗೆ ತೊಂದರೆ: ಅಧಿಕಾರಿಗಳು
ಘಟನೆ ನಡೆದ ತಕ್ಷಣ ರಕ್ಷಣಾ ಕಾರ್ಯವು ಕಾರ್ಯಾಚರಣೆ ಆರಂಭಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಅಥವಾ ಎನ್‌ಡಿಆರ್‌ಎಫ್‌ನ ಐದು ತಂಡಗಳು ಸ್ಥಳಕ್ಕೆ ತಲುಪಿವೆ. ಸೇನೆ, ನೌಕಾಪಡೆ ಮತ್ತು ವಾಯುಸೇನೆಗೂ ಕಾರ್ಯಾಚರಣೆಯಲ್ಲಿ ಸಹಾಯ ಮಾಡುವಂತೆ ಮನವಿ ಮಾಡಲಾಗಿದೆ. ವೈದ್ಯಕೀಯ ತಂಡವೂ ಸ್ಥಳದಲ್ಲಿ ಬೀಡುಬಿಟ್ಟಿದೆ. ಆದರೆ ಬೆಳಕು ಇಲ್ಲದ ಕಾರಣ ರಕ್ಷಣಾ ಕಾರ್ಯಕ್ಕೆ ತೊಂದರೆಯಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಎಳು ತಿಂಗಳಿಂದ ಬಂದ್ ಮಾಡಿದ್ದ ಮೊರ್ಬಿ ಸೇತುವೆ
ಮೊರ್ಬಿಯಲ್ಲಿರುವ ಕೇಬಲ್ ಸೇತುವೆ ಸುಮಾರು 150 ವರ್ಷಗಳಷ್ಟು ಹಳೆಯದು ಮತ್ತು ಜನಪ್ರಿಯ ಪ್ರವಾಸಿ ತಾಣ. ಇದರ ನವೀಕರಣಕ್ಕಾಗಿ ಏಳು ತಿಂಗಳ ಕಾಲ ಮುಚ್ಚಲಾಗಿತ್ತು. ಗುಜರಾತಿ ಹೊಸ ವರ್ಷದ ಅಕ್ಟೋಬರ್ 26 ರಂದು ಇದನ್ನು ಮತ್ತೆ ಸಾರ್ವಜನಿಕರಿಗೆ ತೆರೆಯಲಾಯಿತು. ಸೇತುವೆ ಪ್ರವೇಶಿಸಲು 17 ರೂಪಾಯಿಯ ಟಿಕೆಟ್ ಕೂಡ ತೆಗೆದುಕೊಳ್ಳಬೇಕಿತ್ತು.
"ಸೇತುವೆ ನವೀಕರಣವು ಕಳೆದ ವಾರ ನಡೆದಿದೆ. ನಮಗೂ ಆಘಾತವಾಗಿದೆ. ನಾವು ಘಟನೆಯನ್ನು ಪರಿಶೀಲಿಸುತ್ತಿದ್ದೇವೆ. ಈ ದುರಂತದ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳುತ್ತದೆ" ಎಂದು ಗುಜರಾತ್‌ನ ಕಾರ್ಮಿಕ ಮತ್ತು ಉದ್ಯೋಗ ಸಚಿವ ಬ್ರಿಜೇಶ್ ಮೆರ್ಜಾ ತಿಳಿಸಿದ್ದಾರೆ.
ಸರ್ಕಾರಿ ಟೆಂಡರ್ ಮೂಲಕ ಸೇತುವೆಯನ್ನು ನವೀಕರಿಸಿದ ಒರೆವಾ ಎಂಬ ಖಾಸಗಿ ಟ್ರಸ್ಟ್ ಪುನರಾರಂಭದ ಮೊದಲು ಅಧಿಕಾರಿಗಳಿಂದ ಗುಣಮಟ್ಟ ಪ್ರಮಾಣಪತ್ರವನ್ನು ತೆಗೆದುಕೊಂಡಿಲ್ಲ ಎಂದು ಮೊರ್ಬಿ ಮುನ್ಸಿಪಲ್ ಏಜೆನ್ಸಿ ಮುಖ್ಯಸ್ಥ ಸಂದೀಪ್‌ಸಿನ್ಹ್ ಜಲಾ ತಿಳಿಸಿದ್ದಾರೆ.
"ಒರೆವಾ ಸಮೂಹವು ಸೇತುವೆಯನ್ನು ತೆರೆಯುವ ಮೊದಲು ಅದರ ನವೀಕರಣದ ವಿವರಗಳನ್ನು ನೀಡಬೇಕಾಗಿತ್ತು. ಗುಣಮಟ್ಟ ಪರಿಶೀಲನೆಯ ಪ್ರಮಾಣಪತ್ರ ಪಡೆಯಬೇಕಿತ್ತು. ಆದರೆ ಸಂಸ್ಥೆ ಯಾವುದನ್ನು ಮಾಡಿಲ್ಲ. ಈ ಬಗ್ಗೆ ಸರ್ಕಾರಕ್ಕೆ ತಿಳಿದಿರಲಿಲ್ಲ," ಎಂದು ಆರೋಪಿಸಿದ್ದಾರೆ.

ಮೊರ್ಬಿ ದುರಂತದಲ್ಲಿ ರಾಜಕೀಯ ಪಕ್ಷಗಳ ಕೆಸರೆರಚಾಟ
ಗುಜರಾತ್‌ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ, "ಮೊರ್ಬಿಯಲ್ಲಿ ಸಂಭವಿಸಿದ ದುರಂತದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಈ ಬಗ್ಗೆ ಗುಜರಾತ್ ಮುಖ್ಯಮಂತ್ರಿ ಮತ್ತು ಇತರ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ. ಅಗತ್ಯವಿರುವ ಎಲ್ಲಾ ಸಂತ್ರಸ್ತರಿಗೆ ನೆರವು ನೀಡಲಾಗುತ್ತಿದೆ" ಎಂದಿದ್ದಾರೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಸೇತುವೆ ಕುಸಿದಿದ್ದು, ಕಾಂಗ್ರೆಸ್ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಈ ದುರಂತಕ್ಕೆ ಬಿಜೆಪಿಯನ್ನು ದೂಷಿಸಿದೆ. ಘಟನೆಯ ಸಂಪೂರ್ಣ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ಘೋಷಣೆ
"ಗುಜರಾತ್‌ನ ಕಳ್ಳಭಟ್ಟಿ ದುರಂತದಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಘಟನೆಯಿಂದ ಇದೀಗ ಚೇತರಿಸಿಕೊಂಡಿದೆ. ಇದರ ಬೆನ್ನಲ್ಲೇ ಈಗ ಸೇತುವೆ ಕುಸಿದು ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಗುಜರಾತ್ ಸರ್ಕಾರ ಉತ್ತರಿಸಬೇಕಾಗಿದೆ" ಎಂದು ಎಎಪಿಯ ಅತಿಶಿ ಆಗ್ರಹಿಸಿದ್ದಾರೆ.
ಪ್ರೀತಿಪಾತ್ರರನ್ನು ಕಳೆದುಕೊಂಡ ಪ್ರತಿ ಕುಟುಂಬಕ್ಕೆ ರಾಜ್ಯ ಸರ್ಕಾರ 4 ಲಕ್ಷ ರೂಪಾಯಿ ಪರಿಹಾರ ನೀಡಲಿದೆ. ಗಾಯಗೊಂಡಿರುವ ಪ್ರತಿಯೊಬ್ಬರಿಗೂ 50,000 ರೂಪಾಯಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಟ್ವೀಟ್ ಮಾಡಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿಯನ್ನು ಘೋಷಿಸಲಾಗಿದೆ.












Click it and Unblock the Notifications