ಗುಜರಾತ್: ಆಗ್ಲೇ ಸೋಲೊಪ್ಪಿದ ಕಾಂಗ್ರೆಸ್ ಅಭ್ಯರ್ಥಿ!
ಜಾಮನಗರ್, ಮೇ 2: ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ತಾಯ್ನಾಡಿನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿದ್ದಾರೆ. ಹಾಗಂತ ಅದೇ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಮಾಣ ಮಾಡಿ ಹೇಳಿದ್ದಾರೆ, ಥ್ಯಾಂಕ್ಸ್ ಟು ಮೋದಿ ಹವಾ!
ಹೌದು, ಆತ 2 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಜನಪ್ರಿಯ ಕಾಂಗ್ರೆಸ್ ಸಂಸದ. ಹಾಗಾಗಿಯೇ ಈ ಬಾರಿಯೂ ಜನ ತನ್ನನ್ನು ಸಂಸತ್ತಿಗೆ ಆಯ್ಕೆ ಮಾಡುತ್ತಾರೆ ಎಂದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಆದರೆ ಈ ಮಧ್ಯೆ ಅವರಿಗೆ ಈಗ ಸೋಲಿನ ಭೀತಿ ಕಾಡುತ್ತಿದೆ. ಏಕೆ ಅಂಥಾದ್ದೇನಾನಾಯ್ತು, ಇದ್ದಕ್ಕಿದ್ದ ಹಾಗೆ ಏಕೆ ಈ ವೈರಾಗ್ಯ ಎಂದು ಕೇಳಿ ನೋಡಿದರೆ...
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆ ಬಲವಾಗಿ ರಾಚುತ್ತದೆ. ಸೌರಾಷ್ಟ್ರದ ಜಾಮ್ ನಗರದ ಕಾಂಗ್ರೆಸ್ ಅಭ್ಯರ್ಥಿ, 56 ವರ್ಷದ ಅನುಭವಿ ಸಂಸದ ವಿಕ್ರಂ ಮಾಡಮ್ ಅವರು 'ಮೇ 16ರಂದು ಫಲಿತಾಂಶ ಬರುವವವೆರಗೂ ತಾನು ಕಾಯುವ ಅಗತ್ಯವಿಲ್ಲ. ತನ್ನ ಸೋಲು ಖಚಿತ' ಎಂದು ಬುಧವಾರ ಮತದಾನ ಮಾಡಿದ ಬಳಿಕ ಘೋಷಿಸಿದ್ದಾರೆ.
'ನಾನು ವಾಸ್ತವವಾದಿ. ವಾಸ್ತವತೆಯಿಂದ ಓಡಿಹೋಗುವವನಲ್ಲ ನಾನು' ಎಂದಿರುವ ವಿಕ್ರಂ ಮಾಡಮ್ ಈ ಬಾರಿ ಖಂಡಿತ ತಮ್ಮ ಪರಾಕ್ರಮವೇನೂ ಇರುವುದಿಲ್ಲ ಎಂದು ಒತ್ತಿ ಹೇಳಿದ್ದಾರೆ. ಬನ್ನಿ ಇವರ ವೈರಾಗಕ್ಕೆ ಕಾರಣವೇನು ಎಂಬುದನ್ನು ತಿಳಿಯೋಣ.

30000 ಮತಗಳಿಂದ ಸೋಲು ಖಚಿತ- ವಿಕ್ರಂ ಮಾಡಮ್
ಕುತೂಹಲದ ಸಂಗತಿಯೆಂದರೆ ಅವರು ಸೋಲುತ್ತಿರುವುದು ಬಿಜೆಪಿ ಅಭ್ಯರ್ಥಿ ಪೂನಮ್ ಬೇನ್ ಮಾಡಮ್ ಅವರೆದುರು. ಅಂದಹಾಗೆ ಪೂನಂ, ವಿಕ್ರಂ ಮಾಡಮ್ ಅವರ ಸೋದರ ಸಂಬಂಧಿ. ಗಮನಾರ್ಹವೆಂದರೆ 30,000 ಮತಗಳ ಅಂತರದಿಂದ ತನ್ನ ಸೋಲು ಖಚಿತ ಅನ್ನುತ್ತಿದ್ದಾರೆ ವಿಕ್ರಂ ಮಾಡಮ್. ಹಾಗಾಗಿ ನನ್ನ ಪರ ಯಾರೂ ಬೆಟ್ಟಿಂಗ್ ಕಟ್ಟುವುದು ಬೇಡವೆಂದೂ ಈ ಕಾಂಗ್ರೆಸ್ ಸಂಸದ ತಮ್ಮ ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ!

ಪೂನಮ್ ಮಾಡಮ್ ಈ ಹಿಂದೆ ಕಾಂಗ್ರೆಸ್ ಶಾಸಕಿಯಾಗಿದ್ದವರು
ಮತ್ತೂ ಒಂದು ಕುತೂಹಲದ ಸಂಗತಿಯೆಂದರೆ ವಿಕ್ರಂ ಮಾಡಮ್ ಅವರ ವಿರುದ್ಧ 'ಗೆಲ್ಲುತ್ತಿರುವ' ಅಭ್ಯರ್ಥಿ ಪೂನಮ್ ಬೇನ್ ಮಾಡಮ್ ಅವರು ಈ ಹಿಂದೆ ಕಾಂಗ್ರೆಸ್ ಶಾಸಕಿಯಾಗಿದ್ದರು. 2012ರಲ್ಲಿ, ಗುಜರಾತ್ ಅಸೆಂಬ್ಲಿ ಚುನಾವಣೆಗೂ ಮುನ್ನ ಬಿಜೆಪಿ ಪಕ್ಷವು ಪೂನಂ ಮದಮ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡುಬಿಟ್ಟಿತ್ತು.

ವಿಕ್ರಂ ಸೋಲಿಸುವ ಪಣ ತೊಟ್ಟೇ ಪೂನಮ್ ಬಿಜೆಪಿ ಬಂದಿರುವುದು
ಇನ್ನೂ ಒಂದು ಕುತೂಹಲದ ಸಂಗತಿ ಹೇಳಬೇಕೆಂದರೆ 2004ರಿಂದ ಜಾಮನಗರ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗುತ್ತಾ ಬಂದಿರುವ ವಿಕ್ರಂ ಮಾಡಮ್ ಅವರನ್ನು ಸೋಲಿಸುವ ಪಣ ತೊಟ್ಟೇ ಪೂನಮ್ ಬಿಜೆಪಿ ಅಂಗಳಕ್ಕೆ ಜಿಗಿದಿದ್ದಾರೆ. ಜಾಮನಗರ್ ಕ್ಷೇತ್ರದಲ್ಲಿ ಈ ಬಾರಿ ಶೇ. 58ರಷ್ಟು ಮತದಾನ ನಡೆದಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸುರಕ್ಷಿತ ಕ್ಷೇತ್ರವೆಂದೇ ಹೇಳಲಾಗಿದೆ. ಆದರೂ...

ಹೀಗೂಉಂಠೇ? ಜೈ ಹೋ ವಿಕ್ರಂ ಅಲ್ಲಲ್ಲ ಪೂನಂ...
ಕೊನೆಯದಾಗಿ ಹೀಗೂಉಂಠೇ? ಎಂದು ಪ್ರಶ್ನಿಸುವ ಹಾಗೆ ಕಾಂಗ್ರೆಸ್ಸಿನ ಅನೇಕ ಹಿರಿಯ ನಾಯಕರು ಮತ್ತು ವಿಕ್ರಂ ಮಾಡಮ್ ಅವರ ಕಟ್ಟಾ ಬೆಂಬಲಿಗರೇ ವಿಕ್ರಂ ಸೋಲಲಿ ಎಂದು ಚುನಾವಣೆಯಲ್ಲಿ ಅವಿರತ ಶ್ರಮ ಹಾಕಿದ್ದಾರೆ. ಜೈ ಹೋ ವಿಕ್ರಂ ಅಲ್ಲಲ್ಲ ಪೂನಂ...












Click it and Unblock the Notifications