ಗುಜರಾತ್ ಚುನಾವಣೆ: 552 ಜೋಡಿಗಳ ಸಾಮೂಹಿಕ ವಿವಾಹದಲ್ಲಿ ಮೋದಿ ಭಾಗಿ
ವಲ್ಸಾದ್ ನವೆಂಬರ್ 6: ಗುಜರಾತ್ ವಿಧಾನಸಭೆ ಚುನಾವಣೆಯ ಸಿದ್ಧತೆ ಭರದಿಂದ ಸಾಗಿದೆ. ಬಿಜೆಪಿ ತನ್ನ ಕೋಟೆಯನ್ನು ಭದ್ರಪಡಿಸಿಕೊಳ್ಳಲು ಮತಬೇಟೆ ಶುರುಮಾಡಿದೆ. ಇದರ ಬೆನ್ನಲ್ಲೇ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನಲ್ಲಿ ನಡೆಯಲಿರುವ 552 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಗುಜರಾತ್‌ನ ಭಾವನಗರದಲ್ಲಿ ನಡೆಯಲಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಮೋದಿ ಬಳಿಕ ವಲ್ಸಾದ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
2022ರ ಗುಜರಾತ್ ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯಕ್ಕೆ ಇದು ಮೊದಲ ಭೇಟಿಯಾಗಿದೆ. ಪ್ರಧಾನಿ ಮೋದಿ ಮಧ್ಯಾಹ್ನ 3 ಗಂಟೆಗೆ ವಲ್ಸಾದ್ ಜಿಲ್ಲೆಯ ಕಪ್ರದಾ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಅದರ ನಂತರ ಇಂದು ಸಂಜೆ 5:45 ರ ಸುಮಾರಿಗೆ ಭಾವನಗರದಲ್ಲಿ ನಡೆಯುವ ಸಾಮೂಹಿಕ ವಿವಾಹ ಸಮಾರಂಭ 'ಪಾಪಾ ನಿ ಪರಿ' ಲಗ್ನೋತ್ಸವ 2022 ರಲ್ಲಿ ಭಾಗವಹಿಸಲಿದ್ದಾರೆ. ಈ ಸಾಮೂಹಿಕ ವಿವಾಹದಲ್ಲಿ ತಂದೆ ಇಲ್ಲದ 552 ಹೆಣ್ಣು ಮಕ್ಕಳು ವಿವಾಹವಾಗಲಿದ್ದಾರೆ.

ತಂದೆ ಇಲ್ಲದ ಹೆಣ್ಣು ಮಕ್ಕಳ ಮದುವೆಯಲ್ಲಿ ಮೋದಿ ಭಾಗಿ
ಗುಜರಾತ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಜ್ಜಾಗಿದೆ. ಗುಜರಾತ್‌ನಲ್ಲಿ ಬಿಜೆಪಿಯ ಉನ್ನತ ನಾಯಕರ ರ್‍ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳು ಪ್ರತಿದಿನ ನಡೆಯುತ್ತಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅಕ್ಟೋಬರ್ 13 ರಂದು ಅಹಮದಾಬಾದ್‌ನಲ್ಲಿ "ಗುಜರಾತ್ ಗೌರವ ಯಾತ್ರೆ" ಯನ್ನು ಉದ್ಘಾಟಿಸಿದ್ದರು. "ಗುಜರಾತ್ ಗೌರವ್ ಯಾತ್ರೆ" ಉದ್ಘಾಟನೆಗೆ ಒಂದು ದಿನ ಮುಂಚಿತವಾಗಿ, ಜೆಪಿ ನಡ್ಡಾ ಅವರು ಮೆಹ್ಸಾನಾದಲ್ಲಿ 'ಗುಜರಾತ್ ಗೌರವ್ ಯಾತ್ರೆ'ಗೆ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಇತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

ಗುಜರಾತ್ ಜನತೆಗೆ ಭರವಸೆಯ ಮಹಾಪೂರ
ಇದಕ್ಕೂ ಮುನ್ನ ಅಕ್ಟೋಬರ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್‌ಕೋಟ್ ಜಿಲ್ಲೆಯ ಜಮ್ಕಂದೋರ್ನಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ರ್‍ಯಾಲಿ ಬಳಿಕ ರೋಡ್ ಶೋ ಕೂಡ ನಡೆಸಿದರು. ಮಾತ್ರವಲ್ಲದೆ ಪ್ರಧಾನಿ ಮೋದಿ ಅವರು ಅಮೋದ್ ಮತ್ತು ಭರೂಚ್‌ನಲ್ಲಿ 8,000 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದ್ದಾರೆ. ಜಂಬೂಸರ್‌ನಲ್ಲಿ ಬಲ್ಕ್ ಡ್ರಗ್ ಪಾರ್ಕ್, ದಹೇಜ್‌ನಲ್ಲಿ ಡೀಪ್ ಸೀ ಪೈಪ್‌ಲೈನ್ ಯೋಜನೆ, ಅಂಕಲೇಶ್ವರ ವಿಮಾನ ನಿಲ್ದಾಣದ ಹಂತ 1 ಮತ್ತು ಅಂಕಲೇಶ್ವರ ಮತ್ತು ಪನೋಲಿಯಲ್ಲಿ ಮಲ್ಟಿಲೆವೆಲ್ ಇಂಡಸ್ಟ್ರಿಯಲ್ ಶೆಡ್‌ಗಳ ಅಭಿವೃದ್ಧಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಿದ್ದಾರೆ.

ಗುಜರಾತ್‌ನಲ್ಲಿ ತ್ರಿಕೋನ ಸ್ಪರ್ಧೆ
ಗುಜರಾತ್ ವಿಧಾನಸಭೆಯ ಅವಧಿಯು 18 ಫೆಬ್ರವರಿ 2023 ರಂದು ಕೊನೆಗೊಳ್ಳಲಿದೆ. ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಗುಜರಾತ್‌ನಲ್ಲಿ ಸತತ ಆರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಬಾರಿ ಸಮಾಜವಾದಿ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ತ್ರಿಕೋನ ಸ್ಪರ್ಧೆ ನಡೆಯಲಿದೆ.

ಬಿಜೆಪಿಗೆ ಬೀಳಲಿದೆಯೆ ಹೊಡೆತ?
ಬಿಜೆಪಿಯ ಪ್ರಬಲ ನೆಲೆಯಾಗಿರುವ ಗುಜರಾತ್‌ನಲ್ಲಿನ ಈ ಚುನಾವಣೆ ಸಾಕಷ್ಟು ಕಾವು ಪಡೆದಿದೆ. ಕಳೆದ ಭಾನುವಾರ ಮೊರ್ಬಿಯಲ್ಲಿ 135 ಜನರು ಮೃತಪಟ್ಟ ಸೇತುವೆ ಕುಸಿತ ದುರಂತದ ನಡುವೆ ಚುನಾವಣೆ ಘೋಷಣೆ ಆಡಳಿತಾರೂಢ ಬಿಜೆಪಿಗೆ ಕೊಂಚ ಹಿನ್ನಡೆಯಾಗಲಿದೆ ಎಂದೇ ಹೇಳಲಾಗುತ್ತಿದೆ. ಗುಜರಾತ್ ಚುನಾವಣೆ ಹೈ ವೋಲ್ಟೇಜ್ ಕದನವಾಗಲಿದ್ದು, ಮುಂಬರುವ ಲೋಕಸಭೆ ಚುನಾವಣೆಗೂ ಇದು ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಸುಮಾರು 25 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರಲ್ಲಿರುವ ಬಿಜೆಪಿಗೆ, ಸೇತುವೆ ಕುಸಿತ ಘಟನೆಯಿಂದಾಗಿ ಮುಜುಗರ ಉಂಟಾಗಿದೆ. ಭೂಪೇಂದ್ರ ಪಟೇಲ್ ನೇತೃತ್ವದ ಸರ್ಕಾರವನ್ನು ಈ ಘಟನೆ ಒತ್ತಡಕ್ಕೆ ಸಿಲುಕಿಸಿದೆ. ಪಕ್ಕದ ಪಂಜಾಬ್‌ನಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಬಲಗೊಂಡಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ, ಬಿಜೆಪಿಗೆ ಪ್ರಮುಖ ಎದುರಾಳಿಯಾಗುವ ಸೂಚನೆ ನೀಡಿದೆ. ಗುಜರಾತ್ ರಾಜಕಾರಣದಲ್ಲಿ ಎಎಪಿ ದೊಡ್ಡ ಮಟ್ಟದ ಪ್ರಭಾವ ಬೀರಲಿದೆ ಎಂದು ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಂಜಾಬ್ ಸಿಎಂ ಭಗವಂತ್ ಮಾನ್ ಅವರೊಂದಿಗೆ ಕೇಜ್ರಿವಾಲ್ ನಿರಂತರವಾಗಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.












Click it and Unblock the Notifications