ಬಿಜೆಪಿಗೆ ಎಎಪಿ ಸವಾಲು, ಕಾಂಗ್ರೆಸ್ ಮೌನ: ಗುಜರಾತ್ ರಾಜಕಾರಣದಲ್ಲಿ ಅಚ್ಚರಿಯ ಹೆಜ್ಜೆಗಳು
ಅಹಮದಾಬಾದ್, ಅಕ್ಟೋಬರ್ 15: ಗುಜರಾತ್ ವಿಧಾನಸಭೆ ಚುನಾವಣೆಯು ದೇಶದ ಕುತೂಹಲವನ್ನು ಕೆರಳಿಸಿದೆ. 2017ರಲ್ಲಿ ನಡೆದ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಆದರೆ, ಈ ಬಾರಿ ಗುಜರಾತ್‌ನ ರಾಜಕೀಯ ಅಂಗಳದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸೆಣೆಸಾಡಲು ಸನ್ನದ್ಧವಾಗಿದೆ. ಗುಜರಾತ್‌ನಲ್ಲೀಗ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಕಳೆದ 27 ವರ್ಷಗಳಿಂದ ಗುಜರಾತ್‌ನಲ್ಲಿ ಅಧಿಕಾರದ ಗದ್ದುಗೆಯಲ್ಲಿರುವ ಬಿಜೆಪಿ, ಈ ಬಾರಿಯೂ ಅಧಿಕಾರ ಹೊಂದುವ ಸನ್ನಾಹದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಬಿಜೆಪಿಯಿಂದ ಸಾರ್ವಜನಿಕ ಸಭೆಗಳನ್ನೂ ಆಯೋಜಿಸಲಾಗಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರ ಹೊಂದಿರುವುದು ಮತ್ತು ಗುಜರಾತ್‌ನಲ್ಲಿ ಹಿಂದುತ್ವಕ್ಕೆ ಗಟ್ಟಿ ನೆಲೆ ಇರುವುದು ಬಿಜೆಪಿಗೆ ಹೆಚ್ಚು ಲಾಭ ತಂದುಕೊಡಲಿದೆ. ಪ್ರಧಾನಿ ಮೋದಿ ಅವರ ವರ್ಚಸ್ಸನ್ನು ಬಳಸಿಕೊಳ್ಳುವುದರ ಜೊತೆಗೆ ಗುಜರಾತ್ ಅಸ್ಮಿತೆಯನ್ನು ಮುನ್ನೆಲೆಗೆ ತರುವ ಯತ್ನವನ್ನು ಬಿಜೆಪಿ ಮುಂದುವರಿಸಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕಾಂಗ್ರೆಸ್ ಈಗ ಮೌನಕ್ಕೆ ಜಾರಿದೆ. ಇದರ ಹಿಂದಿನ ತಂತ್ರದ ಬಗ್ಗೆ ಯಾವುದೇ ವಿಶ್ಲೇಷಣೆ ಹೊರಬಂದಿಲ್ಲ. ಆದರೆ, ಪ್ರಧಾನಿ ಮೋದಿ ಕಾಂಗ್ರೆಸ್ ಮೌನದ ಬಗ್ಗೆ ಮಾತನಾಡಿದ್ದು, ಜನರಿಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.

ಮತ್ತೆ 'ಗೌರವ ಯಾತ್ರೆ'ಗೆ ಮೊರೆಹೋದ ಬಿಜೆಪಿ
2002ರಲ್ಲಿ ಗುಜರಾತ್‌ನಾದ್ಯಂತ ಕೋಮುಗಲಭೆಗಳು ನಡೆದವು. ಸಾವಿರಾರು ಜನರ ಪ್ರಾಣಹಾನಿಗಳಾದವು. ಇದರ ಬೆನ್ನಲ್ಲೇ ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ 'ಗುಜರಾತ್ ಗೌರವ ಯಾತ್ರೆ' ಕೈಗೊಂಡಿದ್ದರು. 2017ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ತೀವ್ರ ಪೈಪೋಟಿ ಏರ್ಪಟ್ಟ ಹಿನ್ನೆಲೆಯಲ್ಲಿ ಬಿಜೆಪಿ ಮತ್ತೆ ಗೌರವ ಯಾತ್ರೆಯ ಮೊರೆ ಹೋಗಿತು. ಈಗ ಎಎಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಬಿಜೆಪಿಗೆ ಸವಾಲಾಗಿದೆ. ಆ ಹಿನ್ನೆಲೆಯಲ್ಲಿ ಬಿಜೆಪಿಯು ಮತ್ತೆ ಹಳೆಯ ತಂತ್ರ ಬಳಸಲು ಸಜ್ಜಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಯಾತ್ರೆಗೆ ಚಾಲನೆ ನೀಡಿದ್ದಾರೆ. ಈ ಯಾತ್ರೆಯು ರಾಜ್ಯದ 144 ವಿಧಾನಸಭೆ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಯಾತ್ರೆಯಲ್ಲಿ ಕೇಂದ್ರ ಸಚಿವರು ಹಾಗೂ ಗುಜರಾತ್ ಬಿಜೆಪಿ ನಾಯಕರು ಪಾಲ್ಗೊಳ್ಳಲಿದ್ದಾರೆ.
ಗುಜರಾತ್‌ನಲ್ಲಿ ನೆಲೆ ಕಂಡುಕೊಳ್ಳುವುದೇ ಎಎಪಿ?
ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ದೆಹಲಿ ಹಾಗೂ ಪಂಜಾಬ್‌ನಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರ ಹಿಡಿದಿದೆ. ಈಗಾಗಲೇ ಗುಜರಾತ್‌ಗೆ ಹಲವು ಬಾರಿ ಭೇಟಿ ನೀಡಿರುವ ಕೇಜ್ರಿವಾಲ್ ನಿರುದ್ಯೋಗ, ಬೆಲೆ ಏರಿಕೆ ಹಾಗೂ ಜಿಎಸ್‌ಟಿಯಂತಹ ಪ್ರಮುಖ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಉಚಿತ ಕೊಡುಗೆಗಳ ಭರವಸೆಯನ್ನೂ ನೀಡಿದ್ದಾರೆ. ಗುಜರಾತ್‌ನಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಎಎಪಿಗೆ ನಗರ ಭಾಗದ ಮತಗಳು ಹೆಚ್ಚಾಗಿ ಬರಬಹುದು ಎಂದು ಅಂದಾಜಿಸಲಾಗಿದೆ. ಸೂಮಾರು 40 ರಿಂದ 50 ಸೀಟುಗಳು ಸಿಗಬಹುದು ಎಂದು ಎಎಪಿ ಹೇಳಿಕೊಂಡಿದೆ. ಒಂದು ವೇಳೆ, ಎಎಪಿ ಗುಜರಾತ್‌ನಲ್ಲಿ ನೆಲೆಕಂಡುಕೊಂಡರೆ, ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುವ ಸಾಮರ್ಥ್ಯ ಪಡೆದುಕೊಳ್ಳಲಿದೆ ಎಂಬ ಮಾತುಗಳೂ ಕೇಳಿಬಂದಿದೆ.
ಕಾಂಗ್ರೆಸ್ ಮೌನ: ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ
ಕಾಂಗ್ರೆಸ್ ನಾಯಕರು ಗ್ರಾಮೀಣ ಪ್ರದೇಶಗಳಿಗೆ ಹೋಗಿ ಮತಗಳನ್ನು ಕೇಳುತ್ತಿದ್ದಾರೆ. ಬಿಜೆಪಿ ಹಾಗೂ ತಮ್ಮನ್ನು ಟೀಕಿಸುವ ಹೊರಗುತ್ತಿಗೆಯನ್ನು ಎಎಪಿಗೆ ಕಾಂಗ್ರೆಸ್ ನೀಡಿದೆ ಎಂದು ಮೋದಿ ಹೇಳಿದ್ದಾರೆ. ಮೋದಿ ಹೇಳಿಕೆಗೆ ಇಂಬು ನೀಡುವಂತೆ ಕಾಂಗ್ರೆಸ್‌ನ ಯಾವುದೇ ನಾಯಕರು ಬಿಜೆಪಿ ಹಾಗೂ ಎಎಪಿ ವಿರುದ್ಧ ಟೀಕೆಗಳನ್ನು ಮಾಡಿಲ್ಲ. ಬಿಜೆಪಿ ಹಾಗೂ ಎಎಪಿಯಂತೆ ಅಬ್ಬರದ ಪ್ರಚಾರವನ್ನೂ ಕೈಗೊಂಡಿಲ್ಲ. ಕಾಂಗ್ರೆಸ್ ಉನ್ನತ ನಾಯಕರಾದ ಸೋನಿಯಾ, ರಾಹುಲ್ ಸೇರಿದಂತೆ ಯಾವುದೇ ರಾಷ್ಟ್ರೀಯ ನಾಯಕರು ಗುಜರಾತ್‌ನಲ್ಲಿ ಪ್ರಚಾರ ಕೈಗೊಳ್ಳದೇ ಇರುವುದು ಅಚ್ಚರಿಗೆ ಕಾರಣವಾಗಿದೆ.












Click it and Unblock the Notifications