Breaking: ಗುಜರಾತ್‌ನಲ್ಲಿ ಎನ್‌ಸಿಪಿಗೆ 3 ಕ್ಷೇತ್ರ ಬಿಟ್ಟುಕೊಟ್ಟ ಕಾಂಗ್ರೆಸ್
ಗಾಂಧಿನಗರ, ನವೆಂಬರ್ 11: ಗುಜರಾತ್ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿಯುತ್ತಿದೆ. ಈ ಹಂತದಲ್ಲಿ ಎನ್‌ಸಿಪಿ ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಇಳಿಯುವುದಾಗಿ ತಿಳಿಸಿದೆ.
ಕಳೆದ 2017ರ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಪೋರಬಂದರ್ ಜಿಲ್ಲೆಯ ಕುಟಿಯಾನಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಎನ್‌ಸಿಪಿಯ ಕಂಧಲ್ ಜಡೇಜಾ, ಆ ಪಕ್ಷದಿಂದ ಗೆದ್ದ ಏಕೈಕ ಶಾಸಕರಾಗಿದ್ದರು.
ಕಾಂಗ್ರೆಸ್ ಹಾಗೂ ಎನ್‌ಸಿಪಿ ಮೈತ್ರಿ ಕುರಿತು ಘೋಷಣೆ ಮಾಡಿದ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್, "ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎನ್‌ಸಿಪಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ. ಎನ್‌ಸಿಪಿ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದರು. ಆನಂದ್ ಜಿಲ್ಲೆಯ ಉಮ್ರೇತ್, ಅಹಮದಾಬಾದ್ ಜಿಲ್ಲೆಯ ನರೋಡಾ ಮತ್ತು ದಹೋಡ್ ಜಿಲ್ಲೆಯ ದೇವಗಡ ಬರಿಯಾ ಕ್ಷೇತ್ರದಲ್ಲಿ ಎನ್‌ಸಿಪಿ ಅಭ್ಯರ್ಥಿಳು ಸ್ಪರ್ಧೆಗೆ ಇಳಿಯುತ್ತಾರೆ," ಎಂದು ಹೇಳಿದರು. ಸದ್ಯಕ್ಕೆ ಈ ಮೂರು ಕ್ಷೇತ್ರಗಳಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ಕಾಂಗ್ರೆಸ್ ಮತ್ತು ಎನ್‌ಸಿಪಿ ಒಟ್ಟಿಗೆ ಸ್ಪರ್ಧೆ:
"ನಾವು ಯುಪಿಎ ಒಕ್ಕೂಟದ ಒಂದು ಭಾಗವೇ ಆಗಿದ್ದೇವೆ. ಈ ಹಿಂದೆ ನಾವು ಮಹಾರಾಷ್ಟ್ರದಲ್ಲಿ ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ. ಅದೇ ರೀತಿ ಗುಜರಾತ್‌ನಲ್ಲಿಯೂ ಕಾಂಗ್ರೆಸ್ ಮತ್ತು ಎನ್‌ಸಿಪಿ ಒಟ್ಟಿಗೆ ಸ್ಪರ್ಧಿಸುತ್ತೇವೆ. ನಾವು ನಾಲ್ಕು ಸ್ಥಾನಗಳನ್ನು ಕೇಳಿದ್ದೇವೆ, ಮೂರು ಸ್ಥಾನಗಳನ್ನು ನೀಡುವುದಕ್ಕೆ ಕಾಂಗ್ರೆಸ್ ಈಗಾಗಲೇ ಒಪ್ಪಿಕೊಂಡಿದ್ದು, ಮತ್ತೊಂದು ಸ್ಥಾನದ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ," ಎಂದು ಗುಜರಾತ್ ಎನ್ ಸಿಪಿ ಅಧ್ಯಕ್ಷ ಜಯಂತ್ ಬೋಸ್ಕಿ ಹೇಳಿದ್ದಾರೆ.
ಗುಜರಾತ್ ವಿಧಾನಸಭಾ ಚುನಾವಣೆ ಮಾಹಿತಿ:
ಗುಜರಾತ್‌ನಲ್ಲಿ ಒಟ್ಟು ಎರಡು ಹಂತಗಳಲ್ಲಿ 182 ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 89 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ನವೆಂಬರ್ 5ರಂದು ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 14 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ನವೆಂಬರ್ 15 ನಾಮಪತ್ರ ಪರಿಶೀಲನೆ, ನವೆಂಬರ್ 17 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನಾಂಕವಾಗಿದೆ. ಡಿಸೆಂಬರ್ 1ರಂದು ಮೊದಲ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.
ಅದೇ ರೀತಿ ಗುಜರಾತ್‌ನ 93 ವಿಧಾನಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ನವೆಂಬರ್ 10ರಂದು ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 17ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ನವೆಂಬರ್ 18ರಂದು ನಾಮಪತ್ರ ಪರಿಶೀಲನೆ, ನವೆಂಬರ್ 21ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನಾಂಕವಾಗಿದೆ. ಡಿಸೆಂಬರ್ 5ರಂದು ಎರಡನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ. ಅಂತಿಮವಾಗಿ ಡಿಸೆಂಬರ್ 8ರಂದು 182 ವಿಇಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.












Click it and Unblock the Notifications