
Gujarat Assembly Elections 2022: 2ನೇ ಹಂತದ ಚುನಾವಣೆ ಪ್ರಚಾರಕ್ಕೆ ತೆರೆ
ಗಾಂಧಿನಗರ, ಡಿಸೆಂಬರ್ 03: ಗುಜರಾತ್ ವಿಧಾನಸಭೆಗೆ ಡಿಸೆಂಬರ್ 5ರಂದು ಎರಡನೇ ಹಂತಹ ಮತದಾನ ನಡೆಯಲಿದೆ. ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆಬೀಳಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಎಎಪಿ ಪಕ್ಷಗಳ ಪ್ರಮುಖ ನಾಯಕರು ಶನಿವಾರ ಗುಜರಾತ್‌ಗೆ ಭೇಟಿ ನೀಡಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ನಟ ಮನೋಜ್ ಜೋಶಿ ಅವರು ಬಿಜೆಪಿಗಾಗಿ ರಾಜ್ಯದಲ್ಲಿ ಸಾರ್ವಜನಿಕ ಪ್ರಚಾರ ಸಭೆಗಳನ್ನು ನಡೆಸಿದ್ದಾರೆ.
ಎಎಪಿ ಅಭ್ಯರ್ಥಿಗಳ ಪರವಾಗಿ ಪಂಜಾಬ್ ಸಿಎಂ ಭಗವಂತ್ ಮಾನ್, ಎಎಪಿಯ ಗುಜರಾತ್ ಸಿಎಂ ಅಭ್ಯರ್ಥಿ ಇಸುಧನ್ ಗಾದ್ವಿ ಮತ್ತು ನಾಯಕ ಗೋಪಾಲ್ ಇಟಾಲಿಯಾ ತಮ್ಮ ಪ್ರಚಾರವನ್ನು ಮುಂದುವರಿಸಿದ್ದಾರೆ.
ಕಾಂಗ್ರೆಸ್ ಪರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋಟ್, ಸಂಸದ ಶಕ್ತಿಸಿಂಗ್ ಗೋಹಿಲ್ ಸೇರಿದಂತೆ ಹಲವರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

ಪ್ರಚಾರ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ
ಬಿಜೆಪಿಯ ಸ್ಟಾರ್ ಪ್ರಚಾರಕ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪಕ್ಷದ ಪ್ರಚಾರವನ್ನು ಮುಗಿಸಿದರು. ಅವರು 31 ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಗುಜರಾತ್‌ನಲ್ಲಿ ಮೂರು ದೊಡ್ಡ ರೋಡ್ ಶೋಗಳನ್ನು ಮುನ್ನಡೆಸಿದ್ದಾರೆ.
ಗುರುವಾರ ಅಹಮದಾಬಾದ್‌ನಲ್ಲಿ 50 ಕಿಮೀ ಉದ್ದದ ರೋಡ್ ಶೋ ಮುನ್ನೆಸಿದ್ದಾರೆ. ಇದು ದೇಶದಲ್ಲಿಯೇ ಅತಿ ಉದ್ದದ ರೋಡ್ ಶೋ ಎಂದು ಬಿಜೆಪಿ ಬಣ್ಣಿಸಿದೆ. ಅಹಮದಾಬಾದ್ ನಗರದ 13 ವಿಧಾನಸಭಾ ಕ್ಷೇತ್ರ ಹಾಗೂ ಗಾಂಧಿನಗರದ ಒಂದು ವಿಧಾನಸಭೆ ಕ್ಷೇತ್ರಗಳಲ್ಲಿ ಈ ರೋಡ್ ಶೋ ನಡೆದಿದೆ.

ಗುಜರಾತ್‌ನ 93 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ
ಉತ್ತರ ಗುಜರಾತ್‌ನ 14 ಜಿಲ್ಲೆಗಳ 93 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ. ಇದು ಎಲ್ಲ ಪಕ್ಷಗಳಿಗೂ ಕಠಿಣ ಹೋರಾಟದ ಕಣವಾಗಿ ಪರಿಗಣಿಸಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಜಿಲ್ಲೆಗಳಲ್ಲಿ ಕಳೆದ ಎರಡು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದೆ.
ಈ ಜಿಲ್ಲೆಗಳಲ್ಲಿ ಕಾಂಗ್ರೆಸ್ 32 ಸ್ಥಾನಗಳನ್ನು ಹೊಂದಿದೆ. ಅವುಗಳನ್ನು ಉಳಿಸಿಕೊಳ್ಳಬೇಕೆಂಬುದು ಕಾಂಗ್ರೆಸ್‌ನ ಬಯಕೆಯಾಗಿದೆ. ಈ ಜಿಲ್ಲೆಗಳಲ್ಲಿ ಬಿಜೆಪಿ ಆಂತರಿಕ ಬಂಡಾಯವನ್ನು ಎದುರಿಸುತ್ತಿದೆ. ಗುಜರಾತ್‌ನ 89 ಸ್ಥಾನಗಳಿಗೆ ಡಿಸೆಂಬರ್ 1ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಶೇ.63.14ರಷ್ಟು ಮತದಾನವಾಗಿತ್ತು.

ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ
ಈ ಬಾರಿಯ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ದೆಹಲಿ ಹಾಗೂ ಪಂಜಾಬ್‌ಗಳಲ್ಲಿ ಗೆದ್ದು ಬೀಗುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಗುಜರಾತ್‌ನಲ್ಲಿಯೂ ಜನಬೆಂಬಲ ದೊರೆತಿದೆ. ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್‌ಗೆ ಹಲವು ಬಾರಿ ಭೇಟಿ ನೀಡಿ, ರೋಡ್ ಶೋಗಳನ್ನು ನಡೆಸಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಗುಜರಾತ್‌ನಲ್ಲಿಯೇ ಬೀಡು ಬಿಟ್ಟಿದ್ದಾರೆ. ಪಕ್ಷದ ಅಭ್ಯರ್ಥಿಗಳ ಪರ ಪ್ರತಿದಿನ ಪ್ರಚಾರ ಕೈಗೊಂಡಿದ್ದಾರೆ. ಕಳೆದ ಕೆಲ ದಶಕಗಳಿಂದ ಗುಜರಾತ್‌ನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಆದರೆ, ಈಗ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಎಎಪಿ ಪೈಪೋಟಿ ನೀಡುತ್ತಿದೆ. ಗುಜರಾತ್‌ನಲ್ಲಿ ಎಎಪಿಯಿಂದ ಬಿಜೆಪಿಗೆ ಹೆಚ್ಚು ನಷ್ಟವಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ. ಕಾರಣ, ಬಿಜೆಪಿಯ ನಿಷ್ಠಾವಂತ ಮತದಾರರಾಗಿದ್ದ ನಗರ ಕೇಂದ್ರಿತ ಜನರು, ಎಎಪಿ ಕಡೆ ವಾಲುವ ಲಕ್ಷಣಗಳು ಗೋಚರಿಸಿವೆ.

ಮೌನ ಪ್ರಚಾರದಲ್ಲಿ ತೊಡಗಿದ ಕಾಂಗ್ರೆಸ್
ಬಿಜೆಪಿ ಹಾಗೂ ಎಎಪಿ ಪಕ್ಷಗಳು ಗುಜರಾತ್‌ನಲ್ಲಿ ಅಬ್ಬರದ ಪ್ರಚಾರ ಕೈಗೊಂಡಿವೆ. ಆದರೆ, ಕಾಂಗ್ರೆಸ್ ಮಾತ್ರ ಹಳ್ಳಿಗಳಿಗೆ ಹೋಗಿ ಮೌನ ಪ್ರಚಾರ ಮಾಡುತ್ತಿದೆ. ಕಾಂಗ್ರೆಸ್‌ನ ಈ ತಂತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತ್ರ ಭಾರತ್ ಜೋಡೊ ಯಾತ್ರೆಯಲ್ಲಿ ನಿರತರಾಗಿದ್ದಾರೆ.