ಮದುವೆ ಋತುವಿನಲ್ಲಿ ಗುಜರಾತ್ ಚುನಾವಣೆ: ಮಂಟಪಗಳಲ್ಲಿ ಚುನಾವಣಾ ಪ್ರಚಾರ ಮಾಡುವರೇ ನಾಯಕರು?
ಅಹಮದಾಬಾದ್, ನ. 08: ಈ ವರ್ಷದ ಡಿಸೆಂಬರ್ ಆರಂಭದಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆ ವೇಳೆಯಲ್ಲಿಯೇ ಅತ್ಯಧಿಕ ಮದುವೆ ಶುಭಕಾರ್ಯಗಳು ನಡೆಯಲಿವೆ. ಇವುಗಳನ್ನು ರಾಜಕಾರಣಿಗಳು ಚೆನ್ನಾಗಿಯೇ ಬಳಸಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.
ಮದುವೆಯ ಸಮಾರಂಭಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸುತ್ತಾರೆ ಹೀಗಾಗಿ ಈ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಕೂಡ ಪಾಲ್ಗೊಂಡು ಪ್ರಚಾರ ಪಡೆಯಬಹುದು ಎಂದು ಹಲವು ವಿವಾಹ ಯೋಜಕರು ತಿಳಿಸಿದ್ದಾರೆ.
ರಾಜಕೀಯ ಮುಖಂಡರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸ್ವಲ್ಪ ಸಮಯವನ್ನು ತಮಗೆ, ತಮ್ಮ ಪಕ್ಷಕ್ಕೆ ಮತ ಚಲಾಯಿಸುವಂತೆ ಜನರನ್ನು ಮನವೊಲಿಸಲು ಪ್ರಯತ್ನಿಸುತ್ತಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ವಿವಾಹ ಪಂಡಿತರ ಪ್ರಕಾರ, ಡಿಸೆಂಬರ್ 2, 4 ಮತ್ತು 8 ದಿನಾಂಕಗಳು ಮದುವೆಗಳಿಗೆ ಅತ್ಯಂತ ಮಂಗಳಕರವಾಗಿದ್ದು, ಆ ಸಮಯದಲ್ಲಿ ಹಲವಾರು ವಿವಾಹ ಸಮಾರಂಭಗಳು ನಿಗಧಿಯಾಗಿವೆ.
ಈ ಬಾರಿಯ ಮದುವೆಯ ಋತುವು ನವೆಂಬರ್ 22 ರಿಂದ ಆರಂಭವಾಗುತ್ತದೆ. ಈ ಅವಧಿ ಶುಭ ಕಾರ್ಯಕ್ರಮಗಳನ್ನು ಯೋಜಿಸದ ಡಿಸೆಂಬರ್ 16ರಿಂದ ಆರಂಭವಾಗುವ 'ಕಮೂರ್ತ' ಅವಧಿಯವರೆಗೆ ಇರುತ್ತದೆ ಎಂದು ಕೆಲವು ವಿವಾಹ ಯೋಜಕರು ಹೇಳಿದ್ದಾರೆ.

ವಿವಾಹ ಸಮಾರಂಭಗಳು ಪ್ರಚಾರ ವೇದಿಕೆಗಳಾಗಲಿವೆಯೇ?
ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.
ನವೆಂಬರ್ 22 ಮತ್ತು ಡಿಸೆಂಬರ್ 16 ರ ನಡುವೆ ಹಲವು ವಿವಾಹ ಸಮಾರಂಭಗಳನ್ನು ಆಯೋಜಿಸಲಾಗಿದೆ ಎಂದು ಆಯೋಜಕರು ಹೇಳಿದ್ದಾರೆ. ಮದುವೆಗೆ ಶುಭ ದಿನಗಳೆಂದು ಪರಿಗಣಿಸಲಾಗಿರುವ ಡಿಸೆಂಬರ್ 2, 4 ಮತ್ತು 8 ರ ದಿನಾಂಕಗಳಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿದೆ. ಇದು ಚುನಾವಣಾ ಪ್ರಚಾರದ ಸಮಯವೂ ಆಗಿರುವ ಕಾರಣ ಈ ಸಮಾರಂಭಗಳು ಪ್ರಚಾರದ ವೇದಿಕೆಗಳಾಗಬಹುದು.

ಮದುವೆ ಕಾರ್ಯದಲ್ಲಿ ಅತಿಥಿಗಳ ಸಂಖ್ಯೆಯು ಏರಿಕೆ
ಈ ವರ್ಷ ಯೋಜಿಸಲಾದ ಅದ್ಧೂರಿ ವಿವಾಹಗಳ ಸಂಖ್ಯೆಯು ಕೋವಿಡ್ ನಂತರ ತೀವ್ರವಾಗಿ ಏರಿದೆ. ಕೊರೊನಾ ಪ್ರಕರಣಗಳ ಕುಸಿತದ ನಂತರ ಮದುವೆಗಳಿಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸಹ ತೆಗೆದುಹಾಕಲಾಗಿದೆ.
"ವಿವಾಹ ಸಮಾರಂಭಗಳು ವಿಪರೀತವಾಗಿವೆ. ಈ ಋತುವಿನಲ್ಲಿ ಅಂತಹ ಹೆಚ್ಚಿನ ಸಂಖ್ಯೆಯ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಕೋವಿಡ್ ನಿರ್ಬಂಧಗಳನ್ನು ತೆಗೆದುಹಾಕಿರುವುದರಿಂದ, ಮದುವೆ ಸಮಾರಂಭಗಳಲ್ಲಿ ಅತಿಥಿಗಳ ಸಂಖ್ಯೆಯು 500 ರಿಂದ 1,000 ಜನರಿಗೆ ತೀವ್ರವಾಗಿ ಹೆಚ್ಚುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಪ್ರಮುಖ ವ್ಯತ್ಯಾಸವಾಗಿದೆ" ಎಂದು ವಡೋದರಾ ಮೂಲದ ವಿವಾಹ ಆಯೋಜಕರ ಸಂಸ್ಥೆ ತಿಳಿಸಿದೆ.
"ಚುನಾವಣಾ ವೇಳಾಪಟ್ಟಿಯ ಸುತ್ತ ಮುಹೂರ್ತದ ದಿನಾಂಕಗಳಾದ ನವೆಂಬರ್ 28, 29 ಮತ್ತು ಡಿಸೆಂಬರ್ 2, 4 ಮತ್ತು 8 ರಂದು ಹೆಚ್ಚಿನ ಸಂಖ್ಯೆಯ ವಿವಾಹಗಳನ್ನು ಯೋಜಿಸಲಾಗಿದೆ" ಎಂದಿದ್ದಾರೆ.

'ಮದುವೆ ಸಮಯದಲ್ಲಿ ಕೆಲ ಕಾಲ ಮತದಾನಕ್ಕೆ ಮೀಸಲಿರಿಸಿ'
ವಿವಾಹದ ಸೀಸನ್ ಮತ್ತು ಗುಜರಾತ್ ಚುನಾವಣೆ ಒಟ್ಟಿಗೆ ಬಂದಿರುವ ಕಾರಣ, ರಾಜ್ಯ ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ, "ಜನರು ಈಗಾಗಲೇ ಮದುವೆ ಕಾರ್ಯಕ್ರಮಗಳನ್ನು ನಿಗದಿಪಡಿಸಿದ್ದಾರೆ. ಅವುಗಳನ್ನು ಚುನಾವಣೆ ಕಾರಣಕ್ಕೆ ಮುಂದೂಡಲು ಸಾಧ್ಯವಿಲ್ಲ. ಆದರೂ, ಮತದಾನಕ್ಕಾಗಿ ಸ್ವಲ್ಪ ಸಮಯ ಮೀಸಲಿಡಲು ಅವರ ಮನವೊಲಿಸುತ್ತೇವೆ" ಎಂದಿದ್ದಾರೆ.
ಗುಜರಾತ್ ಆಮ್ ಆದ್ಮಿ ಪಕ್ಷದ (ಎಎಪಿ) ವಕ್ತಾರ ಕರಣ್ ಬರೋಟ್ ಮಾತನಾಡಿ, 'ಒಬ್ಬ ಉತ್ತಮ ಅಭ್ಯರ್ಥಿ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದರೂ ಅವರನ್ನು ಗೆಲ್ಲಿಸುವುದು ಜನರ ಜವಾಬ್ದಾರಿಯಾಗಿದೆ. ಆದ್ದರಿಂದ, ಗುಜರಾತ್ ಜನರು ತಮ್ಮ ನೆಚ್ಚಿನ ಸ್ಥಳೀಯ ನಾಯಕನಿಗೆ ಮತ ಹಾಕಲು ಸ್ವಲ್ಪ ಸಮಯವನ್ನು ಮೀಸಲಿಡಬೇಕು' ಎಂದಿದ್ದಾರೆ.

'ರಾಜಕೀಯ ಪಕ್ಷ ಲೆಕ್ಕಿಸದೇ ಉತ್ತಮ ಅಭ್ಯರ್ಥಿಗೆ ಮತನೀಡಿ'
"ರಾಜಕೀಯ ಪಕ್ಷದ ಪರವಾಗಿ ರಾಜಕೀಯ ನಾಯಕರು ಮದುವೆ ಅಥವಾ ಇತರ ಕಾರ್ಯಕ್ರಮಗಳಿಗೆ ಹಾಜರಾಗಬೇಕಾಗಿದ್ದರೂ, ಅವರು ಪ್ರತಿನಿಧಿಸುವ ರಾಜಕೀಯ ಪಕ್ಷಗಳನ್ನು ಲೆಕ್ಕಿಸದೆ ಉತ್ತಮ ಅಭ್ಯರ್ಥಿಗಳನ್ನು ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದು ನಾವು ಎಲ್ಲರನ್ನು ವಿನಂತಿಸುತ್ತೇವೆ" ಎಂದು ಎಎಪಿ ವಕ್ತಾರ ಕರಣ್ ಬರೋಟ್ ತಿಳಿಸಿದ್ದಾರೆ.
ಡಿಸೆಂಬರ್ ಆರಂಭದಲ್ಲಿ ಗುಜರಾತ್‌ನಲ್ಲಿ ಒಟ್ಟು 182 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಪೈಕಿ 89 ಸ್ಥಾನಗಳಿಗೆ ಡಿಸೆಂಬರ್ 1ರಂದು ಹಾಗೂ 93 ಸ್ಥಾನಗಳಲ್ಲಿ ಡಿಸೆಂಬರ್ 5ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 8ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications