ಮೋರ್ಬಿ ಸೇತುವೆ ದುರಂತ: ಗುಜರಾತ್‌ನ ಸೌರಾಷ್ಟ್ರದಲ್ಲಿ ಬಿಜೆಪಿಗೆ ಸಂಕಷ್ಟ
ಅಹಮದಾಬಾದ್, ನವೆಂಬರ್ 10: ಗುಜರಾತ್ ಚುನಾವಣೆಗೆ ದಿನಾಂಕಗಳು ಪ್ರಕಟಗೊಂಡಿವೆ. ಎರಡು ಹಂತದಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಡಿಸೆಂಬರ್ 1 ಹಾಗೂ 5ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್ 8ರಂದು ಫಲಿತಾಂಶ ಹೊರಬೀಳಲಿದೆ.
ಹಿಂದುತ್ವದ ಪ್ರಯೋಗ ಶಾಲೆಯೆಂದೇ ಕರೆಯಲ್ಪಡುವ ಗುಜರಾತ್‌ನಲ್ಲಿ ಆಡಳಿತಾರೂಢ ಬಿಜೆಪಿಗೆ ಹಲವು ಸಂಕಷ್ಟಗಳು ಎದುರಾಗಿವೆ. ನಿರುದ್ಯೋಗ, ಬೆಲೆ ಏರಿಕೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಂತಹ ಸಮಸ್ಯೆಗಳಿಗೆ ಸಂಬಂಧಿಸಿದ ವಿಚಾರಗಳು ಗುಜರಾತ್‌ನಲ್ಲಿ ಚುನಾವಣೆಯಲ್ಲಿ ಪ್ರಮುಖವಾಗಿ ಕೇಳಿಬಂದಿವೆ.

ಸೇತುವೆ ದುರಂತದಲ್ಲಿ 135ಕ್ಕೂ ಅಧಿಕ ಜನರ ಸಾವು
ಗುಜರಾತ್‌ನ ಮೋರ್ಬಿಯಲ್ಲಿ ಸಂಭವಿಸಿದ ಸೇತುವೆ ದುರಂತದಲ್ಲಿ 135ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಜನರು ಗಾಯಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೋರ್ಬಿ ಸೌರಾಷ್ಟ್ರದಲ್ಲಿ ಬರುವ ನಗರ. ಅದು ಜಿಲ್ಲಾ ಕೇಂದ್ರವೂ ಹೌದು. ಈ ಸಾರಿಯ ಚುನಾವಣೆಯಲ್ಲಿ ಮೋರ್ಬಿ ದುರಂತಕ್ಕೆ ಸಂಬಂಧಿಸಿದ ವಿಚಾರವು ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.
ಮೋರ್ಬಿ ಸೇತುವೆ ದುರಂತದಲ್ಲಿ ಗುಜರಾತ್ ಸರ್ಕಾರ ನಡೆದುಕೊಂಡು ರೀತಿ, ಸೇತುವೆ ಕಾಮಗಾರಿಯಲ್ಲಿ ನಡೆದ ಲೋಪಗಳು, ಜನರ ಸಾವು ನೋವಿನ ವಿಷಯಗಳೀಗ ಹೆಚ್ಚು ಚರ್ಚೆ ಆಗುತ್ತಿವೆ. ಹಿಂದುತ್ವ ಹಾಗೂ ಪ್ರಧಾನಿ ಮೋದಿ ವರ್ಚಸ್ಸಿನ ಮೇಲೆ ಬಿಜೆಪಿ ಪ್ರಚಾರ ಮಾಡುತ್ತಿದೆ. ಆದರೆ, ಪಾಟೀದಾರ್ ಸಮುದಾಯದ ಮತಗಳು ಅಧಿಕವಾಗಿರುವ ಗುಜರಾತ್‌ನ ಸೌರಾಷ್ಟ್ರದಲ್ಲಿ ಮಾತ್ರ ಬಿಜೆಪಿ ಆಡಳಿತದ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ.

ಸೇತುವೆ ದುರಂತಕ್ಕೆ ಸರ್ಕಾರವೇ ಹೊಣೆ
ಮೋರ್ಬಿ ದುರಂತಕ್ಕೆ ಸರ್ಕಾರವೇ ಹೊಣೆ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ. ಸೇತುವೆ ಕಾಮಗಾರಿಯಲ್ಲಿ ಭ್ರಷ್ಟಾಚಾರವಾಗಿದೆ. ನಿಜವಾದ ಆರೋಪಿಗಳ ವಿರುದ್ಧ ಸರ್ಕಾರ ಕ್ರಮ ಜರುಗಿಸಿಲ್ಲ. ಪ್ರಕರಣಕ್ಕೆ ಸಂಬಂಧವಿಲ್ಲದವರ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ. ಪ್ರಧಾನಿ ಮೋದಿ ಭೇಟಿ ಸಂದರ್ಭದಲ್ಲಿ ಆಸ್ಪತ್ರೆಯನ್ನು ದುರಸ್ತಿಗೊಳಿಸಲಾಗಿದೆ. ಸೇತುವೆ ಬಳಿ ಹಾಕಿದ್ದ ಒರೆವಾ ಕಂಪನಿಯ ನಾಮಪಲಕವನ್ನು ಬಟ್ಟೆಯಿಂದ ಮುಚ್ಚಲಾಗಿತ್ತು ಎಂದು ಅಲ್ಲಿನ ಜನರ ಆರೋಪಗಳಾಗಿವೆ.

ಮೋರ್ಬಿ ದುರಂತದ ವಿಚಾರವನ್ನು ಮುನ್ನೆಲೆಗೆ ತಂದು ಎಎಪಿ
48 ಕ್ಷೇತ್ರಗಳನ್ನು ಹೊಂದಿರುವ ಸೌರಾಷ್ಟ್ರದಲ್ಲಿ ಕೊನೆಯ ಸಾರಿ ಬಿಜೆಪಿ ಹಿನ್ನೆಡೆಯಾಗಿತ್ತು. 28 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಬಿಜೆಪಿ ಸಫಲವಾಗಿತ್ತು. ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಪಾಟೀದಾರ್ ಸಮುದಾಯದ ಮತಗಳು ಕಾಂಗ್ರೆಸ್ ಪರ ಚಲಾವಣೆಯಾಗಿದ್ದವು. ಆದರೆ, ಈ ಸಾರಿ ಮೋರ್ಬಿ ದುರಂತ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಎಎಪಿಗೆ ವರವಾಗಿ ಪರಿಣಮಿಸಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಗುಜರಾತ್ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ
ಈ ಸಾರಿಯ ಗುಜರಾತ್ ಚುನಾವಣೆಯಲ್ಲಿ ತ್ರೀಕೋನ ಸ್ಪರ್ಧೆ ಏರ್ಪಟ್ಟಿದೆ. ಕೊನೆಯ ಸಾರಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ದೆಹಲಿ ಹಾಗೂ ಪಂಜಾಬ್‌ನಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಿರುವ ಆಮ್ ಆದ್ಮಿ ಪಕ್ಷವು(ಎಎಪಿ) ಈ ಸಾರಿಯ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದೆ. ಇದು ಬಿಜೆಪಿಗೆ ಸವಾಲಾಗಿ ಪರಿಣಮಿಸಿದೆ.
ಬೆಲೆ ಏರಿಕೆ, ಶಾಲೆ, ಶಿಕ್ಷಣ, ಕುಡಿಯುವ ನೀರು, ವಿದ್ಯುತ್ ಹಾಗೂ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ವಿಚಾರಗಳನ್ನು ಎಎಪಿ ಮುನ್ನೆಲೆಗೆ ತಂದಿದೆ. ಮೋರ್ಬಿ ದುರಂತವನ್ನು ಎಎಪಿ ಚುನಾವಣಾ ಅಸ್ತ್ರವಾಗಿ ಬಳಸುತ್ತಿದೆ. ಈಗಾಗಲೇ ಹಲವು ಉಚಿತ ಕೊಡುಗೆ ನೀಡುವ ಭರವಸೆಗಳನ್ನು ಎಎಪಿ ನೀಡಿದೆ. ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುಜರಾತ್‌ನಲ್ಲಿ ಗೆಲ್ಲುವ ಭರವಸೆ ನೀಡಿದ್ದಾರೆ. ಆದರೆ, ಚುನಾವಣಾ ಸಮೀಕ್ಷೆಗಳ ಪ್ರಕಾರ, ಗುಜರಾತ್‌ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿದುಬಂದಿದೆ.












Click it and Unblock the Notifications