ಗುಜರಾತ್ ಚುನಾವಣೆ: ಶೇ.30ರಷ್ಟು ಹೊಸಬರಿಗೆ ಟಿಕೆಟ್ ನೀಡಲಿದೆಯಾ ಬಿಜೆಪಿ?
ನವದೆಹಲಿ, ಅಕ್ಟೋಬರ್ 25: ದೀಪಾವಳಿ ಬಳಿಕ ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಗುಜರಾತ್‌ನ 182 ಸ್ಥಾನಗಳಿಗೆ ನಡೆಯಲಿರುವ ವಿಧಾನಸಭಾ ಚುನಾವಣೆಯು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ, ಎಎಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸೆಣಸಲಿವೆ.
ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಹಾಗೂ ಹಿಂದುತ್ವಕ್ಕೆ ಬಿಜೆಪಿ ಮಣೆ ಹಾಕಿದರೆ, ಎಎಪಿ ನಾಯಕರು ಶಾಲೆ, ವಿದ್ಯುತ್ ಹಾಗೂ ಕುಡಿಯುವ ನೀರಿನಂತಹ ಮೂಲಭೂತ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ದೊಡ್ಡ ಮಟ್ಟದ ಪ್ರಚಾರ ಮಾಡಲು ಕಾಂಗ್ರೆಸ್ ನಾಯಕರು ಮುಂದೆ ಬರುತ್ತಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ ನಾಯಕರು ಹಳ್ಳಿಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಚುನಾವಣೆಗೆ ಕೆಲ ದಿನಗಳು ಬಾಕಿ ಇರುವಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ವರಿಷ್ಠ ನಾಯಕರು ಕಸರತ್ತು ನಡೆಸುತ್ತಿದ್ದಾರೆ.
ಹೊಸಬರಿಗೆ ಬಿಜೆಪಿ ಟಿಕೆಟ್?
ಆಡಳಿತಾರೂಢ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಕಸರತ್ತು ನಡೆಸುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳಿಂದ ಪಕ್ಷದ ಮುಖಂಡರೊಂದಿಗೆ ಹಲವು ಸಭೆಗಳನ್ನು ನಡೆಸುತ್ತಿದ್ದಾರೆ. ವಡೋದರಾದಲ್ಲಿ ನಡೆದ ಈ ಸಭೆಯೊಂದರ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅಮಿತ್ ಶಾ ಶೇ.30ರಷ್ಟು ಹೊಸಬರಿಗೆ ಟಿಕೆಟ್ ನೀಡುವ ಬಗ್ಗೆ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಗುಜರಾತ್‌ನ 182 ಸ್ಥಾನಗಳ ಪೈಕಿ 6೦ ರಿಂದ 70 ಟಿಕೆಟ್‌ಗಳು (ಶೇ 30ರಿಂದ 40) ಹೊಸಬರ ಪಾಲಾಗುವ ಸಾಧ್ಯತೆ ಇದೆ. ಈಗಿರುವ 99 ಬಿಜೆಪಿ ಶಾಸಕರ ಪೈಕಿ 25 ರಿಂದ 30 ಶಾಸಕರಿಗೆ ಟಿಕೆಟ್ ನಿರಾಕರಿಸಲಾಗುತ್ತದೆ.
ದಕ್ಷಿಣ ಹಾಗೂ ಮಧ್ಯ ಗುಜರಾತ್‌ನ ನಾಯಕರನ್ನು ಭೇಟಿ ಮಾಡಿ ಅಮಿತ್ ಶಾ ಅವರು ಈಗಾಗಲೇ ಸಮಾಲೋಚನೆ ನಡೆಸಿದ್ದಾರೆ. ಸೋಮವಾರ ಉತ್ತರ ಗುಜರಾತ್‌ನ ಪಾಲನ್‌ಪುರದಲ್ಲಿ ಚುನಾವಣೆಗೆ ಸಂಬಂಧಿಸಿದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಸಭೆ ನಡೆಸಿದರು.
'182 ವಿಧಾನಸಭಾ ಸ್ಥಾನಗಳ ಪೈಕಿ 60 ರಿಂದ 70 ಸ್ಥಾನಗಳಿಗೆ ಹೊಸಬರನ್ನು ಅಭ್ಯರ್ಥಿಗಳನ್ನಾಗಿ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಹಿರಿಯ ನಾಯಕರು ಮೂರ್ನಾಲ್ಕು ಬಾರಿ ಗೆದ್ದವರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆಗಳಿವೆ' ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಹಿಂದಿನ ಸಿಎಂ ವಿಜಯ್ ರೂಪಾನಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಹಲವು ಹಿರಿಯ ನಾಯಕರ ಹೆಸರನ್ನು ಅಭ್ಯರ್ಥಿಗಳ ಪಟ್ಟಿಯಿಂದ ತೆಗೆದುಹಾಕಲಾಗುವುದು ಎಂಬುದು ಖಚಿತವಾಗಿದೆ.
ಬಿಜೆಪಿಯು ಇತ್ತೀಚೆಗೆ ನಡೆಸಿದ ಗೌರವ ಯಾತ್ರೆಯು ನಿರೀಕ್ಷೆಗೆ ತಕ್ಕಂತೆ ಯಶಸ್ವಿಯಾಗಿಲ್ಲ. ಜನರನ್ನು ಸೆಳೆಯಲು ಕೆಲ ಬಿಜೆಪಿ ನಾಯಕರು ವಿಫಲವಾಗಿದ್ದಾರೆ. ಇದು ಬಿಜೆಪಿಯ ವರಿಷ್ಠ ನಾಯಕರನ್ನು ಚಿಂತೆಗೀಡುಮಾಡಿದೆ.
ಅಂದಿನ ಮುಖ್ಯಮಂತ್ರಿ ಆಗಿದ್ದ ಪ್ರಧಾನಿ ಮೋದಿ ಅವರು 2002ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಗೌರವ ಯಾತ್ರೆಯನ್ನು ನಡೆಸಿದ್ದರು. ಆ ಯಾತ್ರೆಯು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿತ್ತು. 2017ರಲ್ಲೂ ಗುಜರಾತ್ ಗೌರವ ಯಾತ್ರೆಯನ್ನು ಕೈಗೊಳ್ಳಲಾಗಿತ್ತು.
ಮೋದಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಗೆಲ್ಲುವುದು ಬಿಜೆಪಿಗೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಈಗಾಗಲೇ ಹಲವು ಗುಜರಾತ್‌ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಎಎಪಿ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಎಪಿ ನಾಯಕರನ್ನು ನಗರ ನಕ್ಸಲರು ಎಂದು ಛೇಡಿಸಿದ್ದಾರೆ. ಕಾಂಗ್ರೆಸ್ ಬಗ್ಗೆ ಎಚ್ಚರಿಕೆ ನೀಡಿರುವ ಅವರು,'ಕಾಂಗ್ರೆಸ್ ನಾಯಕರು ಹಳ್ಳಿಗಳಲ್ಲಿ ಮನೆಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಅವರ ಬಗ್ಗೆ ಎಚ್ಚರದಿಂದ ಇರಿ' ಎಂದು ಹೇಳಿದ್ದಾರೆ. ಹಳೆಯ ತಂತ್ರವಾದ 'ಗುಜರಾತ್ ಹಾಗೂ ಗುಜರಾತಿಗಳ ಅಸ್ಮಿತೆ'ಯ ಬಗ್ಗೆ ಮೋದಿ ಮತ್ತೆ ಮಾತನಾಡಿದ್ದಾರೆ.












Click it and Unblock the Notifications