ರೈತರಿಗೆ 56 ಇಂಚಿನ ಎದೆ ತೋರಿಸುವ ಸರ್ಕಾರ, ಚೀನಾಗೆ 0.56 ಇಂಚಿನ ಎದೆ ತೋರಿಸುತ್ತಿದೆ: ಎಎಪಿ ಸಂಸದ
ನವದೆಹಲಿ, ಡಿಸೆಂಬರ್ 21: ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ಕುರಿತು ಸಂಸತ್ತಿನಲ್ಲಿ ಚರ್ಚಿಸದ ಸರಕಾರವನ್ನು ಎಎಪಿ ನಾಯಕ ಸಂಜಯ್ ಸಿಂಗ್ ಬುಧವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ಆಡಳಿತ ವ್ಯವಸ್ಥೆಯು ರೈತರಿಗೆ ತನ್ನ 56 ಇಂಚಿನ ಎದೆಯನ್ನು ತೋರಿಸುತ್ತದೆ. ಆದರೆ, ಚೀನಾ ವಿಷಯ ಬಂದಾಗ 0.56 ಇಂಚಿನ ಎದೆಯನ್ನು ತೋರಿಸುತ್ತಿದೆ ಎಂದು ಟೀಕಿಸಿದ್ದಾರೆ.
ಎಎಪಿ ಮತ್ತು ಕಾಂಗ್ರೆಸ್, ಜನತಾ ದಳ(ಯುನೈಟೆಡ್) ಸೇರಿದಂತೆ ಹಲವು ವಿರೋಧ ಪಕ್ಷಗಳು ಗಡಿ ಉದ್ವಿಗ್ನತೆ ಮತ್ತು ಅರುಣಾಚಲ ಪ್ರದೇಶದಲ್ಲಿ ಚೀನಾದ ಇತ್ತೀಚಿನ ಆಕ್ರಮಣದ ಬಗ್ಗೆ ಚರ್ಚೆಸಲು ಒತ್ತಾಯಿಸಿದವು. ಇದಕ್ಕೆ ಸ್ಪೀಕರ್ ಅವಕಾಶ ನೀಡಲಿಲ್ಲ. ಸದನವನ್ನು ಬಿಟ್ಟು ಹೊರ ನಡೆದ ವಿರೋಧ ಪಕ್ಷಗಳ ಸದಸ್ಯರು ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

'ಎಲ್‌ಎಸಿ (ವಾಸ್ತವ ನಿಯಂತ್ರಣ ರೇಖೆ) ಯಲ್ಲಿನ ಉದ್ವಿಗ್ನತೆಯ ವಿಷಯದ ಬಗ್ಗೆ ಈ ದೇಶದ ಜನರಿಗೆ ಹಾಗೂ ಸಂಸತ್ತಿಗೆ ತಿಳಿಸುವುದು ಸರ್ಕಾರದ ಜವಾಬ್ದಾರಿ ಆಗಿದೆ. ಈ ಸರ್ಕಾರವು ಪ್ರತಿಭಟಿಸುವ ರೈತರ ಮುಂದೆ ತನ್ನ 56-ಇಂಚಿನ ತೋರಿಸುತ್ತದೆ. ಇದರ ಬಗ್ಗೆ ಹೆಮ್ಮೆಯನ್ನೂ ಪಡುತ್ತದೆ. ಆದರೆ, ಚೀನಾ ವಿಷಯ ಬಂದಾಗ 0.56 ಇಂಚು ಎದೆಯನ್ನು ತೋರಿಸುತ್ತದೆ' ಎಂದು ಸಂಜಯ್ ಸಿಂಗ್ ತಿಳಿಸಿದರು.
ಸಂಸತ್ ಭವನದ ಮುಂದೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
'ಚೀನಾದಿಂದ ಆಮದು ಹೆಚ್ಚುತ್ತಿದೆ. ಸರ್ಕಾರ ಯಾಕೆ ಹೀಗೆ ಮಾಡುತ್ತಿದೆ? ಗಡಿ ರಕ್ಷಣೆಗಾಗಿ ನಮ್ಮ ಸೈನಿಕರು ಪ್ರಾಣ ತ್ಯಾಗ ಮಾಡಿದ್ದಾರೆ. ಹಾಗಾದರೆ ಸರ್ಕಾರ ಚೀನಾದೊಂದಿಗೆ ವ್ಯಾಪಾರವನ್ನು ಏಕೆ ಉತ್ತೇಜಿಸುತ್ತಿದೆ?' ಎಂದು ಸಂಜೀವ್ ಸಿಂಗ್ ಪ್ರಶ್ನಿಸಿದರು.
ಡಿಸೆಂಬರ್ 7 ರಂದು ಚಳಿಗಾಲದ ಅಧಿವೇಶನ ಪ್ರಾರಂಭವಾದಾಗಿನಿಂದ, ಪ್ರತಿಪಕ್ಷಗಳು ಭಾರತ-ಚೀನಾ ಗಡಿ ಉದ್ವಿಗ್ನತೆ ಮತ್ತು ಚೀನಾದ ಉಲ್ಲಂಘನೆಗಳ ಬಗ್ಗೆ ಚರ್ಚೆಗೆ ಒತ್ತಾಯಿಸುತ್ತಿವೆ.

ಬುಧವಾರ ಸಂಸತ್ತಿನ ಕಲಾಪ ಪ್ರಾರಂಭವಾಗುವ ಮೊದಲು, ಕಾಂಗ್ರೆಸ್, ಸಿಪಿಐ, ಸಿಪಿಐ-ಎಂ, ಆರ್‌ಜೆಡಿ, ಜೆಡಿಯು, ಶಿವಸೇನೆ, ಡಿಎಂಕೆ ಮತ್ತು ಎನ್‌ಸಿಪಿ ಸೇರಿದಂತೆ 12 ಪ್ರತಿಪಕ್ಷಗಳು ಭಾರತ-ಚೀನಾ ಕುರಿತು ಚರ್ಚೆಗೆ ಒತ್ತಾಯಿಸಿ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದವು.
ಚೀನಾ ದೇಶವು ಭಾರತದ ಗಡಿಯಲ್ಲಿ ಗ್ರಾಮಗಳನ್ನು ನಿರ್ಮಿಸಿದೆ. ಭಾರತದ ದಿಕ್ಕಿಗೆ ಕ್ಷಿಪಣಿ ಹಾಗೂ ಡ್ರೋನ್‌ಗಳನ್ನು ಇರಿಸಿದೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೊಗಳು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ. ಆ ನಂತರ ಚೀನಾ ಹಾಗೂ ಭಾರತದ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿದೆ.












Click it and Unblock the Notifications