ಮಹಿಳಾ ಉದ್ಯೋಗಿಗಳಿಗೆ ಡಬಲ್ ಸಂಬಳ, ರಾತ್ರಿ 7 ಗಂಟೆ ಬಳಿಕ ಕೆಲಸ ಮಾಡಲು ಗ್ರೀನ್‌ಸಿಗ್ನಲ್
ಸಾಮಾನ್ಯವಾಗಿ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಮಹಿಳೆಯರು ಹೆಚ್ಚಾಗಿ ರಾತ್ರಿ ಪಾಳಿಯ ಕೆಲಸ ಮಾಡುತ್ತಾರೆ. ಉಳಿದಂತೆ ಸಾಮಾನ್ಯ ಕಂಪನಿಗಳು, ಫ್ಯಾಕ್ಟರಿಗಳು, ಗಾರ್ಮೆಂಟ್ ಸೇರಿದಂತೆ ಇನ್ನಿತರೆ ಕೆಲಸಗಳಲ್ಲಿ ಮಹಿಳೆಯರಿಗೆ ರಾತ್ರಿ ವೇಳೆ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ. ಮಹಿಳೆಯರು ಭದ್ರತಾ ದೃಷ್ಟಿಯಿಂದ ಬಹುತೇಕ ಕಡೆ ನೈಟ್ ಶಿಫ್ಟ್ ಕೊಡುವುದಿಲ್ಲ. ಆದರೆ ಈಗ ಮಹಿಳೆಯರೂ ರಾತ್ರಿ 7ರಿಂದ ಬೆಳಿಗ್ಗೆ 6ರವರೆಗೆ ಕೆಲಸ ಮಾಡಲು ಸರ್ಕಾರವೇ ಅವಕಾಶ ಕಲ್ಪಿಸಿದೆ. ಇದಕ್ಕೆ ಮಹಿಳೆಯರಿಗೆ ಡಬಲ್ ಸಂಬಳವೂ ಸಿಗಲಿದೆ. ಈ ಸಂಬಂಧ ಸರ್ಕಾರ ಆದೇಶ ಕೂಡ ಹೊರಡಿಸಿದೆ.
ಹೌದು, ಸರ್ಕಾರವೇ ಇಂತದ್ದೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಸರ್ಕಾರದ ಹೊಸ ಆದೇಶದ ಪ್ರಕಾರ, ಮಹಿಳೆಯರು ತಮ್ಮ ಒಪ್ಪಿಗೆ ಮೇರೆಗೆ ರಾತ್ರಿ 7ರಿಂದ ಬೆಳಿಗ್ಗೆ 6ರವರೆಗೆ ಉದ್ಯೋಗ ಮಾಡಬಹುದು. ಉದ್ಯೋಗದಾತರು ಮಹಿಳೆಯರ ಭದ್ರತೆ, ನ್ಯಾಯಯುತ ವೇತನ ಮತ್ತು ಇತರ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.

OT ಅವಧಿಯೂ ಹೆಚ್ಚಳ
ಗೆಜೆಟ್ ಆದೇಶದ ಪ್ರಕಾರ, ಮಹಿಳಾ ಉದ್ಯೋಗಿಗಳು ಡಬಲ್ ವೇತನ, ಸಿಸಿಟಿವಿ ಕಣ್ಗಾವಲು, ಸಾರಿಗೆ ಸೌಲಭ್ಯಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ಪಡೆಯಲಿದ್ದಾರೆ. ಅವರಿಗೆ ವಾರದಲ್ಲಿ ಆರು ದಿನಗಳವರೆಗೆ ಕೆಲಸ ಮಾಡಲು ಅವಕಾಶವಿರುತ್ತದೆ. ಇದಲ್ಲದೆ ಓವರ್‌ಟೈಮ್ ಮಿತಿಯನ್ನು ಪ್ರತಿ ತ್ರೈಮಾಸಿಕಕ್ಕೆ 75 ಗಂಟೆಗಳಿಂದ 144 ಗಂಟೆಗಳವರೆಗೆ ಹೆಚ್ಚಿಸಲಾಗಿದೆ. ಡಬಲ್ ವೇತನ ದರದಲ್ಲಿ ಅವರಿಗೆ ಪಾವತಿ ಮಾಡಲಾಗುತ್ತದೆ ಎಂದು ಉತ್ತರಪ್ರದೇಶ ಸರ್ಕಾರ ತಿಳಿಸಿದೆ.
ಉತ್ತರ ಪ್ರದೇಶದ ಯೋಗಿ ಸರ್ಕಾರ ಮಹಿಳೆಯರ ಪರವಾಗಿ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಆದೇಶವು 29 ವರ್ಗದ ಅಪಾಯಕಾರಿ ಕೈಗಾರಿಕೆಗಳಿಗೂ ಅನ್ವಯಿಸುತ್ತದೆ. ಅಲ್ಲಿ ಮಹಿಳೆಯರಿಗೆ ಈಗ ರಾತ್ರಿ ವೇಳೆ ಕೆಲಸ ಮಾಡಲು ಅನುಮತಿ ಇದೆ. ಯೋಗಿ ಸರ್ಕಾರದ ಈ ಕ್ರಮವು ಕೆಲಸದ ಸ್ಥಳದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.
ಯೋಗಿ ಸರ್ಕಾರದ ಬಗ್ಗೆ ಟೀಕೆ
ಕೆಲವರು ಇದನ್ನು ಸ್ವಾಗತಿಸಿದ್ದರೆ, ಸೋಷಿಯಲ್ ಮೀಡಿಯಾಗಳಲ್ಲಿ ಈ ಆದೇಶಕ್ಕೆ ವಿರೋಧವೂ ಕೇಳಿಬರುತ್ತಿದೆ. ಸಂಜೆ 7 ಗಂಟೆಯ ನಂತರ ಕೆಲಸ ಮಾಡುತ್ತಿದ್ದರೆ ಮಹಿಳೆಯನ್ನು ದುಪ್ಪಟ್ಟು ಹಣಕ್ಕಾಗಿ ಕೆಲಸ ಮಾಡಲು ಕೇಳುವುದು ಇದು ನಿಜಕ್ಕೂ ಮಹಿಳಾ ಸಬಲೀಕರಣವೇ? ಎಂದು ಟೀಕಿಸುತ್ತಿದ್ದಾರೆ. ಕಡಿಮೆ ಬೆಲೆಗೆ ಪುರುಷನಿಂದ ಆ ಕೆಲಸ ಮಾಡಲು ಸಾಧ್ಯವಾದರೆ, ಕಂಪನಿಯು ದುಪ್ಪಟ್ಟು ವೇತನ ನೀಡಲು ಏಕೆ ಬಯಸುತ್ತದೆ? ಈ ಕ್ರಮವು ಪರವಾಗಿಲ್ಲ, ವಾಸ್ತವವಾಗಿ ಇದು ಮಹಿಳಾ ಉದ್ಯೋಗಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತದೆ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications