By-Election 2023: ಉಪಚುನಾವಣೆಗೆ ಸಿದ್ಧತೆ ನಡೆಸಿದ ಬಿಜೆಪಿ, ಸ್ಟಾರ್ ಪ್ರಚಾರಕರು ರೆಡಿ!
ಲಖನೌ: ಉತ್ತರ ಪ್ರದೇಶದ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಭರ್ಜರಿ ಸಿದ್ಧತೆಯನ್ನು ನಡೆಸಿದೆ. ಮವು ಜಿಲ್ಲೆಯ ಘೋಸಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಒಟ್ಟಾರೆ 40 ಸ್ಟಾರ್ ಕ್ಯಾಂಪೇನರ್‌ಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ ಬಿಜೆಪಿ. ಹೀಗೆ ಬೈ-ಎಲೆಕ್ಷನ್ ಅಖಾಡದಲ್ಲಿ ಅಬ್ಬರಿಸಲು ಕಮಲ ಪಾಳಯ ಸನ್ನದ್ಧವಾಗಿ ನಿಂತಿದೆ.
ಇನ್ನು 40 ಸ್ಟಾರ್ ಕ್ಯಾಂಪೇನರ್‌ಗಳ ಪಟ್ಟಿಯನ್ನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಬಿಡುಗಡೆ ಮಾಡಿದ್ದಾರೆ. ಲೋಕಸಭೆ ಚುನಾವಣೆ ಇನ್ನೇನು ಹತ್ತಿರ ಬರ್ತಿದೆ ಹೀಗೆ ಉತ್ತರ ಪ್ರದೇಶ ರಾಜ್ಯ ಬಿಜೆಪಿ ಪಾಲಿಗೆ ಬಹುಮುಖ್ಯ. ಇದೇ ಕಾರಣಕ್ಕೆ ಬೈ-ಎಲೆಕ್ಷನ್ ಗೆಲುವಿಗೆ ಬಿಜೆಪಿ ರಾಷ್ಟ್ರೀಯ ನಾಯಕರು ಅಖಾಡ ಪ್ರವೇಶ ಮಾಡಲಿದ್ದಾರೆ. ಉ.ಪ್ರದೇಶ ಬಿಜೆಪಿ ಪಾಲಿಗೆ ಭದ್ರಕೋಟೆ. ಹೀಗಾಗಿ ಭದ್ರಕೋಟೆಯಲ್ಲಿ ಬಿಜೆಪಿ ಉಪಚುನಾವಣೆಯಲ್ಲಿ ಜಯ ಸಾಧಿಸುವುದು ಸುಲಭ. ಆದ್ರು ರಿಸ್ಕ್ ತೆಗೆದುಕೊಳ್ಳಲು ಕಮಲ ಪಾಳಯ ಸಿದ್ಧವಿಲ್ಲ. ಯಾಕಂದ್ರೆ ಈಗ ಉಪಚುನಾವಣೆ ನಡೆಯಲಿರುವ ಕ್ಷೇತ್ರದಲ್ಲಿ ಎಸ್‌ಪಿ ಸಖತ್ ಸ್ಟ್ರಾಂಗ್.

ಬಿಜೆಪಿ & ಎಸ್‌ಪಿ ಯುದ್ಧಕ್ಕೆ ಸಿದ್ಧತೆ
ಹೌದು, ಘೋಸಿ ವಿಧಾನಸಭೆ ಉಪಚುನಾವಣೆಗೆ ಸೆಪ್ಟೆಂಬರ್ 5ರಂದು ಮತದಾನ ನಡೆಯಲಿದೆ. ಮತ ಎಣಿಕೆಯು ಸೆಪ್ಟೆಂಬರ್ 8ರಂದು ನಡೆಯಲಿದೆ. 2022 ರ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಟಿಕೆಟ್ ಪಡೆದು ಗೆದ್ದಿದ್ದ ದಾರಾ ಸಿಂಗ್ ಚೌಹಾಣ್, ಎಸ್‌ಪಿ ನಾಯಕರಿಗೆ ಕೈಕೊಟ್ಟಿದ್ದರು. ಹಾಗೇ ಬಿಜೆಪಿ ಸೇರಿ ಇದೀಗ ತಮ್ಮದೇ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅಖಾಡ ಪ್ರವೇಶ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಎಸ್‌ಪಿ ಕೂಡ ಈ ಚುನಾವಣೆಯನ್ನ ಪ್ರತಿಷ್ಠೆಯಾಗಿ ಸ್ವೀಕಾರ ಮಾಡಿದೆ. ತಕ್ಷಣ ಬಿಜೆಪಿ ನಾಯಕರು ಅಲರ್ಟ್ ಆಗಿ ಗೆಲುವಿಗಾಗಿ ರಣತಂತ್ರ ರೂಪಿಸಿ, ಸ್ಟಾರ್ ಪ್ರಚಾರಕ ಪಟ್ಟಿ ರೆಡಿ ಮಾಡಿದ್ದಾರೆ.
ಬಿಜೆಪಿಗೆ ಯಾರೆಲ್ಲಾ ಸ್ಟಾರ್ ಪ್ರಚಾರಕರು?
ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮತ ತಂದುಕೊಡಬಲ್ಲ ನಾಯಕ. ಈ ನಾಯಕನ ಜೊತೆಗೆ ರಕ್ಷಣಾ ಸಚಿವ ಸಿಂಗ್, ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ, ಬ್ರಿಜೇಶ್ ಪಾಠಕ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಹಾಗೇ ಕೇಂದ್ರ ಸಚಿವ ಮಹೇಂದ್ರ ನಾಥ್ ಪಾಂಡೆ, ಕೌಶಲ್ ಕಿಶೋರ್, ಪಂಕಜ್ ಚೌಧರಿ ಕೂಡ ಚುನಾವಣಾ ಅಖಾಡದಲ್ಲಿ ಅಬ್ಬರಿಸಿ ಮತದಾರರ ಮನವೊಲಿಸಲು ಸಜ್ಜಾಗಿದ್ದಾರೆ. ಹಾಗೇ ಇವರಷ್ಟೇ ಅಲ್ಲದೆ ಮತ್ತಷ್ಟು ಸ್ಟಾರ್ ಕ್ಯಾಂಪೇನರ್ಸ್ ಕೂಡ ಈ ಪಟ್ಟಿಯಲ್ಲಿದ್ದಾರೆ.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಾಧಾ ಮೋಹನ್ ಸಿಂಗ್, ರಾಜ್ಯಾಧ್ಯಕ್ಷ ಚೌಧರಿ ಭೂಪೇಂದ್ರ ಸಿಂಗ್, ಧರಂಪಾಲ್ ಸಿಂಗ್, ಸೂರ್ಯ ಪ್ರತಾಪ್ ಶಾಹಿ, ಸ್ವತಂತ್ರ ದೇವ್ ಸಿಂಗ್, ಬೇಬಿ ರಾಣಿ ಮೌರ್ಯ, ನಂದ್ ಗೋಪಾಲ್ ಗುಪ್ತಾ 'ನಂದಿ', ಅನಿಲ್ ರಾಜ್‌ಭರ್, ಎ ಕೆ ಶರ್ಮಾ ಮತ್ತು ಅಸೀಮ್ ಅರುಣ್, ಜೆಪಿಎಸ್ ರಾಥೋಡ್, ದಯಾಶಂಕರ್ ಸಿಂಗ್ ಮತ್ತು ದಾನಿಶ್ ಆಜಾದ್ ಅನ್ಸಾರಿ ಕೂಡ ಸ್ಟಾರ್ ಪ್ರಚಾರಕರಾಗಿ ಉಪಚುನಾವಣೆಯಲ್ಲಿ ಅಬ್ಬರಿಸಲಿದ್ದಾರೆ.












Click it and Unblock the Notifications