Gautam Padibhar: ಚಿಂದಿ ಆಯ್ದು ಶಾಲೆ ಓದಿಸಿದ ಕೊಳೆಗೇರಿಯ ತಾಯಿ, ಇಂದು ಐಐಟಿ ಸೇರಿ IFS ಅಧಿಕಾರಿಯಾದ ಮಗ!
ಆ ತಾಯಿ ಶಾಲೆಯ ಮೆಟ್ಟಿಲನ್ನೇ ಹತ್ತಿರಲಿಲ್ಲ. ಆದರೆ ತನ್ನ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂಬ ಕನಸನ್ನು ಮಾತ್ರ ಬಿಟ್ಟುಕೊಡಲಿಲ್ಲ. ಕುಟುಂಬವನ್ನು ಸಾಕಲು ದಿನಗೂಲಿ ಕೆಲಸ ಮಾಡಿದರು. ಬಳಿಕ ಮುಂಬೈನ ಕೊಳೆಗೇರಿಯಲ್ಲಿ ಕಸ ಹೆಕ್ಕುವ ಕೆಲಸವನ್ನೂ ಮಾಡಿದರು. ಹಸಿವು, ಬಡತನ, ಅನಾರೋಗ್ಯ, ಕಷ್ಟ... ಎಲ್ಲವನ್ನೂ ಎದುರಿಸಿದರು.
ಅದೇ ತಾಯಿ ತನ್ನ ಮಗನಿಗೆ ದೊಡ್ಡ ಕನಸು ಕಾಣುವ ಸ್ವಾತಂತ್ರ್ಯ, ಓದು ಕೊಟ್ಟರು. ಆ ಮಗ ಇಂದು ಐಐಟಿ ಮದ್ರಾಸ್‌ನಲ್ಲಿ ಬಿಟೆಕ್ ಮುಗಿಸಿ, ಯುಪಿಎಸ್‌ಸಿ ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ ಅಖಿಲ ಭಾರತ 139ನೇ ರ‍್ಯಾಂಕ್ ಪಡೆದು, ಭಾರತೀಯ ಅರಣ್ಯ ಸೇವೆ ಅಧಿಕಾರಿಯಾಗಿದ್ದಾರೆ. ಇದು ಗೌತಮ್ ಪಡಿಭಾರ್ ಮತ್ತು ಅವರ ತಾಯಿ ಸಾಕುಬಾಯಿ ಅವರ ಕಥೆ.

ಕೊಳೆಗೇರಿಯಿಂದ ಆರಂಭವಾದ ಪಯಣ
ಗೌತಮ್ ಪಡಿಭಾರ್ ಅವರ ಬಾಲ್ಯ ಮುಂಬೈನ ಕೊಳೆಗೇರಿಯಲ್ಲಿ ಕಳೆದಿತ್ತು. ಅವರ ಶೈಕ್ಷಣಿಕ ಪಯಣ ನಂತರ ಮಹಾರಾಷ್ಟ್ರದ ಜಲ್ನಾದ ಜವಾಹರ್ ನವೋದಯ ವಿದ್ಯಾಲಯಕ್ಕೆ ಕರೆದೊಯ್ದಿತು. ಅಲ್ಲಿಂದ ಮುಂದೆ ಅವರು ಐಐಟಿ ಮದ್ರಾಸ್‌ಗೆ ಪ್ರವೇಶ ಪಡೆದರು. ಆದರೆ ಐಐಟಿಗೆ ಹೋಗುವ ಅವರ ದಾರಿ ಸಾಮಾನ್ಯ ವಿದ್ಯಾರ್ಥಿಗಳಂತಿರಲಿಲ್ಲ.
ಪ್ರವೇಶ ಪರೀಕ್ಷೆಗಳಿಗೆ ದೊಡ್ಡ ಮಟ್ಟದ ಕೋಚಿಂಗ್ ಪಡೆಯುವ ಅವಕಾಶ ಅವರಿಗಿರಲಿಲ್ಲ. ಆದರೂ ಅವರು ಯಾವುದೇ ಔಪಚಾರಿಕ ಕೋಚಿಂಗ್ ಇಲ್ಲದೆ ಜೆಇಇ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನಂತರ ದೇಶದ ಪ್ರಮುಖ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಒಂದಾದ ಐಐಟಿ ಮದ್ರಾಸ್‌ನಲ್ಲಿ ಬಿಟೆಕ್ ಪದವಿ ಪೂರ್ಣಗೊಳಿಸಿದರು. ಆದರೆ ಗೌತಮ್ ಅವರ ಈ ಸಾಧನೆಯ ಹಿಂದೆ ಅವರ ತಾಯಿಯ ತ್ಯಾಗದ ದೊಡ್ಡ ಕಥೆಯಿದೆ.
ಶಾಲೆಯನ್ನೇ ನೋಡದ ತಾಯಿ
ಗೌತಮ್ ಅವರ ತಾಯಿ ಸಾಕುಬಾಯಿ ಪಡಿಭಾರ್ ಅವರು ಶಾಲೆಗೆ ಹೋದವರಲ್ಲ. ತಮ್ಮ ಪತಿ ನಿಧನರಾದ ಬಳಿಕ ಕುಟುಂಬದ ಜವಾಬ್ದಾರಿ ಅವರ ಹೆಗಲ ಮೇಲೆ ಬಿತ್ತು. ಮೊದಲು ತಮ್ಮ ಗ್ರಾಮದಲ್ಲಿ ದಿನಗೂಲಿ ಕೆಲಸ ಮಾಡಿದರು. ಬಳಿಕ ಮುಂಬೈನ ಕೊಳೆಗೇರಿಯಲ್ಲಿ ಹಲವು ವರ್ಷಗಳ ಕಾಲ ಕಸ ಹೆಕ್ಕುವ ಕೆಲಸ ಮಾಡಿದರು.
ಬದುಕು ನಡೆಸುವುದೇ ಕಷ್ಟವಾಗಿದ್ದ ಸಂದರ್ಭದಲ್ಲಿ ಕೂಡ ಅವರು ಒಂದು ವಿಷಯವನ್ನು ಮಾತ್ರ ಮರೆಯಲಿಲ್ಲ. ತಮ್ಮ ಮಕ್ಕಳು ಓದಬೇಕು ಎಂಬ ಛಲ, ತಾವು ಪಡೆಯಲಾಗದ ಶಿಕ್ಷಣವನ್ನು ಮಕ್ಕಳಿಗೆ ಕೊಡಬೇಕು ಎಂಬುದು ಅವರ ಆಸೆಯಾಗಿತ್ತು. ಗೌತಮ್ ಹೇಳುವಂತೆ, ಶಿಕ್ಷಣದ ಶಕ್ತಿ ಏನು ಎಂಬುದು ಅವರಿಗೆ ಚೆನ್ನಾಗಿ ತಿಳಿದಿತ್ತು.
ಕುಟುಂಬ ಬಡತನ ಮತ್ತು ಹಸಿವಿನ ದಿನಗಳನ್ನು ಸಾಕಷ್ಟು ಎದುರಿಸಿತು. ಸಾಕುಬಾಯಿ ಗಂಭೀರ ಅಪಘಾತವೊಂದಕ್ಕೆ ಈಡಾಗಿ, ಬದುಕುಳಿದಿದ್ದರು. ಆರೋಗ್ಯ ಸಮಸ್ಯೆಗಳನ್ನೂ ಎದುರಿಸಿದ್ದರು. ಆದರೂ ಕೆಲಸ ನಿಲ್ಲಿಸಲಿಲ್ಲ. ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಕುಟುಂಬದ ಆರ್ಥಿಕ ಜವಾಬ್ದಾರಿ ಹೊತ್ತುಕೊಳ್ಳಬಾರದು. ಅವರು ಓದಬೇಕು, ತಮ್ಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂಬುದೇ ಅವರ ಆದ್ಯತೆಯಾಗಿತ್ತು.
ಮಕ್ಕಳು ಬದುಕಿಗಾಗಿ ಹೋರಾಡುವುದಕ್ಕಿಂತ, ತಮ್ಮ ಕನಸುಗಳಿಗಾಗಿ ಹೋರಾಡಬೇಕು ಎಂಬ ಅವಕಾಶವನ್ನು ಅವರು ಅವರಿಗೆ ನೀಡಿದರು. ಅದಕ್ಕಾಗಿ ಸಾಕುಬಾಯಿ ತಮ್ಮ ಜೀವನದ ಹಲವು ವರ್ಷಗಳನ್ನು ಕಷ್ಟದಲ್ಲಿ ಕಳೆದರು.
ಕೋಚಿಂಗ್ ಇಲ್ಲದೆ ಜೆಇಇ ಪಾಸ್
ಗೌತಮ್ ಅವರ ಐಐಟಿ ಪಯಣ ಕೂಡ ಸುಲಭವಾಗಿರಲಿಲ್ಲ. ಮುಂಬೈನ ಕೊಳೆಗೇರಿಯಿಂದ ಬಂದ ಅವರು ದೊಡ್ಡ ಕೋಚಿಂಗ್ ಸಂಸ್ಥೆಗಳ ನೆರವಿಲ್ಲದೆ ಜೆಇಇ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನಂತರ ಐಐಟಿ ಮದ್ರಾಸ್‌ಗೆ ಪ್ರವೇಶ ಪಡೆದರು. ಐಐಟಿ ಮದ್ರಾಸ್‌ನಲ್ಲಿ ಬಿಟೆಕ್ ಪೂರ್ಣಗೊಳಿಸಿದರು. ತಮ್ಮ ಈ ಸಾಧನೆಯ ಹಿಂದೆ ತಾಯಿಯೇ ದೊಡ್ಡ ಶಕ್ತಿ ಎಂದು ಗೌತಮ್ ಹೇಳಿಕೊಂಡಿದ್ದಾರೆ.
ಐಐಟಿ ಮದ್ರಾಸ್‌ನಿಂದ ಎಂಜಿನಿಯರಿಂಗ್ ಪದವಿ ಪಡೆದ ನಂತರ ಗೌತಮ್ ಅವರ ಪಯಣ ಅಲ್ಲಿಗೆ ನಿಲ್ಲಲಿಲ್ಲ. ಅವರು ನಾಗರಿಕ ಸೇವಾ ಪರೀಕ್ಷೆಯತ್ತ ಮುಖ ಮಾಡಿದರು. 2022ರ ಯುಪಿಎಸ್‌ಸಿ ಭಾರತೀಯ ಅರಣ್ಯ ಸೇವೆ ಪರೀಕ್ಷೆಗೆ ಹಾಜರಾದ ಅವರು ಅಖಿಲ ಭಾರತ 139ನೇ ರ‍್ಯಾಂಕ್ ಪಡೆದರು.
ನಂತರ 2023ರ ಬ್ಯಾಚ್‌ನ ಛತ್ತೀಸ್‌ಗಢ ಕೇಡರ್‌ನ ಭಾರತೀಯ ಅರಣ್ಯ ಸೇವೆಗೆ ಸೇರಿದರು. ಮುಂದೆ ಅವರ ವೃತ್ತಿಜೀವನ ಅವರನ್ನು ಛತ್ತೀಸ್‌ಗಢದ ಜಗದಲ್ಪುರದಲ್ಲಿರುವ ʼಕಾಂಗೇರ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕʼ ಹುದ್ದೆಯವರೆಗೆ ಕರೆದೊಯ್ದಿತು. ಒಮ್ಮೆ ಕುಟುಂಬದ ಹೊಟ್ಟೆ ತುಂಬಿಸಲು ತಾಯಿ ಕಷ್ಟಪಟ್ಟು ದುಡಿಯುತ್ತಿದ್ದರೆ, ಇಂದು ಅವರ ಮಗ ಒಂದು ರಾಷ್ಟ್ರೀಯ ಉದ್ಯಾನವನದ ಜವಾಬ್ದಾರಿ ಹೊತ್ತಿರುವ ಅಧಿಕಾರಿ.
ತಾಯಿ ಮಗನ ಕಚೇರಿಯ ಕುರ್ಚಿಯಲ್ಲಿ ಕುಳಿತಾಗ...
ಗೌತಮ್ ಅವರ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್ ಗಮನ ಸೆಳೆಯಿತು. ಅವರು ಹಂಚಿಕೊಂಡಿದ್ದು ತಮ್ಮ ತಾಯಿ ಅವರ ಕಚೇರಿಗೆ ಭೇಟಿ ನೀಡಿದ ಒಂದು ಕ್ಷಣ. ಗೌತಮ್ ಅವರ ಅಧಿಕೃತ ಕುರ್ಚಿಯಲ್ಲಿ ಅವರ ತಾಯಿ ಸಾಕುಬಾಯಿ ಕುಳಿತಿದ್ದರು. ಹೊರಗಿನಿಂದ ನೋಡಿದರೆ ಅದು ಸಾಮಾನ್ಯವಾದ ಫೋಟೋ. ಆದರೆ ಗೌತಮ್‌ಗೆ ಆ ಕ್ಷಣದ ಹಿಂದೆ ವರ್ಷಗಳ ನೋವು, ಹಸಿವು, ಕಷ್ಟ ಮತ್ತು ತಾಯಿಯ ಪರಿಶ್ರಮ ಕಂಡಂತಿತ್ತು. ಒಂದು ಕಾಲದಲ್ಲಿ ಮಕ್ಕಳ ಭವಿಷ್ಯಕ್ಕಾಗಿ ಕಸ ಹೆಕ್ಕುತ್ತಿದ್ದ ತಾಯಿ, ಇಂದು ತಮ್ಮ ಮಗನ ಅಧಿಕಾರದ ಕುರ್ಚಿಯಲ್ಲಿ ಕುಳಿತಿದ್ದರು. ಆ ಕ್ಷಣವನ್ನು ಗೌತಮ್ ಅಪಾರ ಹೆಮ್ಮೆ ಮತ್ತು ಭಾವನೆಗಳ ಕ್ಷಣ ಎಂದು ಬಣ್ಣಿಸಿದ್ದಾರೆ. ತಾನೀಗ ಆಗಿರುವುದಕ್ಕೆಲ್ಲ ತಾಯಿಯೇ ಕಾರಣ ಎಂದಿದ್ದಾರೆ.


Click it and Unblock the Notifications
