Gautam Adani: ಗೌತಮ್ ಅದಾನಿ ಏಷ್ಯಾದ ಶ್ರೀಮಂತ ವ್ಯಕ್ತಿ, ಮುಖೇಶ್ ಅಂಬಾನಿಗೆ ಹಿನ್ನಡೆ, ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ
Gautam Adani: ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಬಿಡುಗಡೆ ಮಾಡಿರುವ ಇತ್ತೀಚಿನ ಪಟ್ಟಿಯ ಪ್ರಕಾರ, ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ದೊಡ್ಡ ಬದಲಾವಣೆಯಾಗಿದೆ. ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಮತ್ತೆ ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಕಳೆದ ಕೆಲವು ದಿನಗಳ ಷೇರು ಮಾರುಕಟ್ಟೆಯ ಏರಿಳಿತಗಳಿಂದಾಗಿ ಈ ಬದಲಾವಣೆ ಸಂಭವಿಸಿದೆ. ಅದಾನಿ ಗ್ರೂಪ್ ಕಂಪನಿಗಳ ಷೇರು ಬೆಲೆಯಲ್ಲಿನ ಭಾರಿ ಏರಿಕೆಯು ಅವರ ಒಟ್ಟು ಆಸ್ತಿ ಮೌಲ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ಗೌತಮ್ ಅಧಾನಿ ನೇತೃತ್ವದ ಅದಾನಿ ಗ್ರೂಪ್ ಸಂಸ್ಥೆಯು ಮೂಲಸೌಕರ್ಯದಿಂದ ಇಂಧನ ವಲಯದವರೆಗೆ ವ್ಯಾಪಕವಾಗಿ ವಿಸ್ತರಿಸಿದೆ. ಅವರ ಒಟ್ಟು ಆಸ್ತಿ ಮೌಲ್ಯ ಈಗ ಸುಮಾರು 92.6 ಬಿಲಿಯನ್ ಅಮೆರಿಕನ್ ಡಾಲರ್‌ಗಳು (ಸುಮಾರು ₹7,68,580 ಕೋಟಿ) ಎಂದು ಅಂದಾಜಿಸಲಾಗಿದೆ. ಈ ಏರಿಕೆಯೊಂದಿಗೆ ಗೌತಮ್ ಅದಾನಿ ಅವರು ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಈಗ 19ನೇ ಸ್ಥಾನಕ್ಕೆ ಏರಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಷೇರು ಮಾರುಕಟ್ಟೆಯ ಏರಿಳಿತಗಳ ಆಧಾರದ ಮೇಲೆ ವಿಶ್ವದ ಕುಬೇರರ ಸಂಪತ್ತನ್ನು ಪ್ರತಿದಿನ ಟ್ರ್ಯಾಕ್ ಮಾಡುತ್ತದೆ.

ಭಾರತದ ಅತಿದೊಡ್ಡ ಖಾಸಗಿ ವಲಯದ ಸಂಸ್ಥೆಯಾದ ರಿಲಯನ್ಸ್ ಇಂಡಸ್ಟ್ರೀಸ್ (ಟೆಲಿಕಾಂ, ರಿಟೇಲ್ ಮತ್ತು ಇಂಧನ ವಲಯಗಳಲ್ಲಿ ವ್ಯಾಪಿಸಿರುವ ಸಂಸ್ಥೆ) ಅಧ್ಯಕ್ಷ ಮುಖೇಶ್ ಅಂಬಾನಿ ಅವರು, 90.8 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 7,53,640 ಕೋಟಿ ರೂಪಾಯಿ) ಆಸ್ತಿಯೊಂದಿಗೆ ಅದಾನಿ ಅವರಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ ಅವರು ಈಗ 20ನೇ ಸ್ಥಾನದಲ್ಲಿದ್ದಾರೆ. ಉಭಯ ಬಿಲಿಯನೇರ್‌ಗಳ ನಡುವಿನ ಆಸ್ತಿ ಅಂತರವು ಬಹಳ ಕಡಿಮೆಯಿದೆ. ಷೇರು ಮಾರುಕಟ್ಟೆಯ ಸಣ್ಣ ಏರಿಳಿತಗಳು ಸಹ ಇವರ ಸ್ಥಾನಮಾನಗಳಲ್ಲಿ ಕ್ಷಣಾರ್ಧದಲ್ಲಿ ಬದಲಾವಣೆ ತರಬಲ್ಲವು ಎಂಬುದನ್ನು ಇದು ತೋರಿಸುತ್ತದೆ. ಜಾಗತಿಕ ಸಂಪತ್ತಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕಾಗಿ ಭಾರತದ ಇಬ್ಬರು ದೈತ್ಯ ಉದ್ಯಮಿಗಳ ನಡುವೆ ಸದಾ ಪೈಪೋಟಿ ಮುಂದುವರಿಯುತ್ತಿದೆ.
ಈ ವರ್ಷ ಅದಾನಿ ಗ್ರೂಪ್ ಷೇರುಗಳು ಅದ್ಭುತ ಪ್ರದರ್ಶನ ನೀಡಿದ್ದು, ಗೌತಮ್ ಅದಾನಿ ಅವರ ಆಸ್ತಿ ಏರಿಕೆಗೆ ಪ್ರಮುಖ ಕಾರಣವಾಗಿದೆ. ಆದರೆ, ಮುಕೇಶ್ ಅಂಬಾನಿ ಅವರ ಸಂಪತ್ತಿನಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಅದಾನಿ ಗ್ರೂಪ್ ಕಂಪನಿಗಳ ಷೇರು ಮೌಲ್ಯ ಹೆಚ್ಚಾದ ಕಾರಣ, ಈ ವರ್ಷ ಅವರ ಒಟ್ಟು ಆಸ್ತಿಯ ಮೌಲ್ಯಕ್ಕೆ ಸುಮಾರು 8.1 ಬಿಲಿಯನ್ ಡಾಲರ್ (ಅಂದಾಜು 67,230 ಕೋಟಿ ರೂಪಾಯಿ) ಸೇರ್ಪಡೆಯಾಗಿದೆ. ಇದಕ್ಕೆ ವಿರುದ್ಧವಾಗಿ, ಅಂಬಾನಿ ಅವರ ಸಂಪತ್ತು ಸುಮಾರು 16.9 ಬಿಲಿಯನ್ ಡಾಲರ್ (ಅಂದಾಜು 1,40,270 ಕೋಟಿ ರೂಪಾಯಿ) ಇಳಿಕೆಯಾಗಿದೆ.
ಷೇರು ಮಾರುಕಟ್ಟೆಯ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕವಾದ ಬಿಎಸ್ಇ ಸೆನ್ಸೆಕ್ಸ್ 123 ಅಂಕಗಳ ಕುಸಿತ ಕಂಡಿದೆ. ಆದರೂ ಸಹ, ಅದಾನಿ ಗ್ರೂಪ್ ಹಲವು ಕಂಪನಿಗಳ ಷೇರುಗಳು ಏರಿಕೆಯಾಗಿವೆ. ಇದು ಗೌತಮ್ ಅದಾನಿ ಅವರ ಸಂಪತ್ತಿನ ಮೇಲೆ ಭಾರಿ ಧನಾತ್ಮಕ ಪರಿಣಾಮ ಬೀರಿದೆ. ಕೇವಲ ಒಂದೇ ದಿನದ ವಹಿವಾಟಿನಲ್ಲಿ ಅದಾನಿ ಅವರ ಆಸ್ತಿ ಮೌಲ್ಯ ಸುಮಾರು 3.56 ಬಿಲಿಯನ್ ಡಾಲರ್ (ಅಂದಾಜು 29,550 ಕೋಟಿ ರೂಪಾಯಿ) ಹೆಚ್ಚಾಗಿದೆ. ಮಾರುಕಟ್ಟೆ ಕುಸಿದಿದ್ದರೂ ಅದಾನಿ ಗ್ರೂಪ್ ಷೇರುಗಳು ಲಾಭ ತಂದುಕೊಟ್ಟಿರುವುದು ವಿಶೇಷ. ಇದೇ ಅವಧಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಹೆಚ್ಚಿನ ಏರಿಳಿತ ಕಾಣದೆ ಸ್ಥಿರವಾಗಿದ್ದವು. ಆದ್ದರಿಂದ ಅಂಬಾನಿ ಅವರ ಸಂಪತ್ತಿನಲ್ಲಿ ಕೇವಲ 76.7 ಮಿಲಿಯನ್ ಡಾಲರ್ (ಅಂದಾಜು 636 ಕೋಟಿ ರೂಪಾಯಿ) ಅಲ್ಪ ಏರಿಕೆ ಕಂಡುಬಂದಿದೆ.
ಜಾಗತಿಕವಾಗಿ ಅತಿದೊಡ್ಡ ಕುಬೇರರ ಸಂಪತ್ತಿನಲ್ಲಿ ಉಂಟಾಗುತ್ತಿರುವ ನಿರಂತರ ಏರಿಳಿತಗಳ ನಡುವೆಯೇ ಈ ಬದಲಾವಣೆ ಸಂಭವಿಸಿದೆ. ಕೇವಲ ಭಾರತ ಮಾತ್ರವಲ್ಲದೆ, ವಿಶ್ವದಾದ್ಯಂತ ಹಲವು ಪ್ರಮುಖ ಉದ್ಯಮಿಗಳ ಸಂಪತ್ತು ಈ ವರ್ಷ ಇಳಿಕೆ ಕಂಡಿದೆ. ಆಯಾ ಉದ್ಯಮ ಕ್ಷೇತ್ರಗಳಿಗೆ ಸಂಬಂಧಿಸಿದ ನಿರ್ದಿಷ್ಟ ಸವಾಲುಗಳು ಉದ್ಯಮಿಗಳ ಆಸ್ತಿ ಮೌಲ್ಯದ ಮೇಲೆ ಪ್ರಭಾವ ಬೀರುತ್ತಿವೆ. ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಅನಿಶ್ಚಿತತೆ ಮತ್ತು ಚಂಚಲತೆಯು ಅಲ್ಪಾವಧಿಯಲ್ಲಿಯೇ ಕೋಟ್ಯಧಿಪತಿಗಳ ಸಂಪತ್ತಿನಲ್ಲಿ ಭಾರಿ ವ್ಯತ್ಯಾಸ ಉಂಟುಮಾಡುತ್ತಿದೆ. ಜಾಗತಿಕ ಆರ್ಥಿಕ ನೀತಿಗಳಲ್ಲಿನ ಬದಲಾವಣೆಗಳು ಮತ್ತು ಹೂಡಿಕೆದಾರರ ಮನಸ್ಥಿತಿಯು ಈ ಶ್ರೀಮಂತರ ಒಟ್ಟು ಆಸ್ತಿ ಮೌಲ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
ಐಷಾರಾಮಿ ಉತ್ಪನ್ನಗಳ ದೈತ್ಯ ಸಂಸ್ಥೆ 'LVMH' ಮುಖ್ಯಸ್ಥರಾದ ಬರ್ನಾರ್ಡ್ ಅರ್ನಾಲ್ಟ್ ಅವರು 2026ರಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಇವರ ಒಟ್ಟು ಸಂಪತ್ತು ಸುಮಾರು 44 ಬಿಲಿಯನ್ ಡಾಲರ್ (ಅಂದಾಜು 3.65 ಲಕ್ಷ ಕೋಟಿ ರೂ.) ಇಳಿಕೆಯಾಗಿದೆ. ಮೈಕ್ರೋಸಾಫ್ಟ್ ಸಂಸ್ಥೆಯ ಮಾಜಿ ಸಿಇಒ ಆಗಿರುವ ಸ್ಲೀವ್ ಬಾಲ್ಮರ್ ಅವರ ಸಂಪತ್ತು ಕೂಡ ಇಳಿಕೆ ಕಂಡಿದೆ. ಅಲ್ಲದೆ, ಆರಾಕಲ್ ಸಂಸ್ಥೆಯ ಸಹ-ಸ್ಥಾಪಕ ಲ್ಯಾರಿ ಎಲಿಸನ್, ಮೈಕ್ರೋಸಾಫ್ಟ್‌ನ ಸಹ-ಸ್ಥಾಪಕ ಹಾಗೂ ಬಿಲ್ ಗೇಟ್ಸ್ ಅವರು 2026ರ ಆರಂಭದಿಂದ ಇದುವರೆಗೆ ಸುಮಾರು 15.6 ಬಿಲಿಯನ್ ಡಾಲರ್ ಸಂಪತ್ತನ್ನು ಕಳೆದುಕೊಂಡಿದ್ದಾರೆ. ಹೂಡಿಕೆ ಲೋಕದ ಮಾಂತ್ರಿಕ ಹಾಗೂ ಬರ್ಕ್‌ಶೈರ್ ಹ್ಯಾಥ್‌ವೇ ಅಧ್ಯಕ್ಷ ವಾರೆನ್ ಬಫೆಟ್, ಖ್ಯಾತ ಫ್ಯಾಷನ್ ಬ್ರ್ಯಾಂಡ್ 'ಜಾರಾ' ಒಡೆತನದ ಇಂಡಿಟೆಕ್ಸ್ ಸಮೂಹದ ಸ್ಥಾಪಕರಾದ ಅಮಾನ್ಸಿಯೊ ಒರ್ಟೆಗಾ ಕೂಡ ಈ ಪಟ್ಟಿಯಲ್ಲಿದ್ದಾರೆ.












Click it and Unblock the Notifications