ಶರದ್ ಪವಾರ್ & ಗೌತಮ್ ಅದಾನಿ ಮಹತ್ವದ ಭೇಟಿ!
ಮುಂಬೈ, ಏಪ್ರಿಲ್ 20: ಉದ್ಯಮಿ ಅದಾನಿ ಮತ್ತು ಹಿಂಡನ್‌ಬರ್ಗ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಅದಾನಿ ಸಮೂಹದ ವಿರುದ್ಧ ಹಿಂಡನ್‌ಬರ್ಗ್ ಆರೋಪದ ಬಗ್ಗೆ ತನಿಖೆ ನಡೆಸಲು ಜಂಟಿ ಸಂಸದೀಯ ಮಂಡಳಿ ರಚಿಸಲು ಒತ್ತಾಯ ಕೇಳಿಬರುತ್ತಿರುವ ಸಂದರ್ಭದಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ. ಗೌತಮ್ ಅದಾನಿ (adani) ಶರದ್ ಪವಾರ್ (sharad pawar) ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಅದಾನಿ ಪರ ಪವಾರ್ ಬ್ಯಾಟ್!
ಗೌತಮ್ ಅದಾನಿ ದಿಢೀರ್ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಜೊತೆ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ದಕ್ಷಿಣ ಮುಂಬೈನ ಶರದ್ ಪವಾರ್ ನಿವಾಸಕ್ಕೆ ಭೇಟಿ ನೀಡಿದ ಅದಾನಿ ಸಮೂಹದ ಅಧ್ಯಕ್ಷರೂ ಆಗಿರುವ ಗೌತಮ್ ಅದಾನಿ, 2 ಗಂಟೆ ಕಾಲ ಪವಾರ್ ಜೊತೆ ಚರ್ಚೆ ನಡೆಸಿದ್ದಾರೆ. ಈ ಮೂಲಕ ಇಬ್ಬರ ಭೇಟಿ ವಿಷಯ ಟ್ರೆಂಡ್ ಕ್ರಿಯೇಟ್ ಮಾಡಿದೆ. ಹಿಂದೆ ಸಂದರ್ಶನವೊಂದರಲ್ಲಿ ಅದಾನಿ ಪರ ಪವಾರ್ ಮಾತನಾಡಿದ್ದರು. ಹಿಂಡನ್‌ಬರ್ಗ್ ವರದಿ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಪವಾರ್, 'ಒಬ್ಬ ವ್ಯಕ್ತಿಯನ್ನು ಗುರಿ ಮಾಡಿಕೊಂಡು ವರದಿ ಬಿಡುಗಡೆ ಮಾಡಿದ ಹಾಗಿದೆ' ಎಂದಿದ್ದರು. ಶರದ್ ಹೇಳಿಕೆಗೆ ವಿಪಕ್ಷ ನಾಯಕರಿಂದ ಬೇಸರ ವ್ಯಕ್ತವಾಗಿತ್ತು.

ಸುಪ್ರೀಂ ಸಮಿತಿ ತನಿಖೆಗೆ ಒತ್ತಾಯ
ಮತ್ತೊಂದು ಕಡೆ 'ಅದಾನಿ ಗ್ರೂಪ್ ಮೇಲಿರುವ ತನಿಖೆಯನ್ನು ಸಂಸದೀಯ ಮಂಡಳಿಗೆ ವಹಿಸುವ ಬದಲಾಗಿ ಸುಪ್ರೀಂಕೋರ್ಟ್ ಸಮಿತಿಗೆ ವಹಿಸುವುದು ಸೂಕ್ತ' ಎಂದು ಶರದ್ ಪವಾರ್ ಅಭಿಪ್ರಾಯಪಟ್ಟಿದ್ದರು. 'ಯಾಕೆಂದರೆ ಸಂಸತ್ತಿನ ಜಂಟಿ ಸಂಸದೀಯ ಮಂಡಳಿಯಲ್ಲಿರುವ ಹೆಚ್ಚಿನವರು ಬಿಜೆಪಿಯವರೇ ಆಗಿದ್ದು ಸಂಸದೀಯ ಮಂಡಳಿ ತನಿಖೆ ನಡೆಸಿದರೆ ಅನುಮಾನ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಸುಪ್ರೀಂಕೋರ್ಟ್ ಸಮಿತಿ ತನಿಖೆ ನಡೆಸುವುದೇ ಸೂಕ್ತ' ಎಂದಿದ್ದರು ಪವಾರ್. ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ ಗೌತಮ್ ಅದಾನಿ ಹಾಗೂ ಶರದ್ ಪವಾರ್ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.
ಅದಾನಿ ವಿಚಾರದಲ್ಲಿ ಪವಾರ್ ಸದ್ದು
ಅಂದಹಾಗೆ ಅದಾನಿ ಸಮೂಹ ಸಂಸ್ಥೆಗಳ ವಿಚಾರದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷಗಳ ಜತೆ ಭಿನ್ನ ನಿಲುವು ಹೊಂದಿರುವ ಶರದ್ ಪವಾರ್, ಆತ್ಮಚರಿತ್ರೆಯಲ್ಲಿ ಗೌತಮ್ ಅದಾನಿಯನ್ನ ಹಾಡಿ ಹೊಗಳಿದ್ದರು. ಈ ವಿಚಾರ ಕಾಂಗ್ರೆಸ್ ನಾಯಕರಿಗೆ ಮುಜುಗರ ತರಿಸಿತ್ತು. ಮರಾಠಿ ಭಾಷೆಯಲ್ಲಿ ಬಿಡುಗಡೆಯಾಗಿರುವ ಶರದ್ ಪವಾರ್ ಆತ್ಮಚರಿತ್ರೆ 'ಲೋಕ್ ಮಜೆ ಸಂಗತಿ'ಯಲ್ಲಿ ಗೌತಮ್ ಅದಾನಿ ಕಠಿಣ ಪರಿಶ್ರಮಿ, ಸರಳ ಹಾಗೂ ಸಹಜ ವ್ಯಕ್ತಿ ಎಂದು ಬಣ್ಣಿಸಿದ್ದರು ಶರದ್ ಪವಾರ್.
ಪವಾರ್ ಮಾತು ಕೇಳಿದ್ದರಾ ಅದಾನಿ?
ವಜ್ರದ ಉದ್ಯಮದಲ್ಲಿಅದಾನಿ ಉತ್ತಮ ಸಂಪಾದನೆ ಮಾಡುತ್ತಿದ್ದರು. ಆದರೆ, ಮೂಲಸೌಕರ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹದಾಸೆ ಹೊಂದಿದ್ದರು. ಮುಂದ್ರಾದಲ್ಲಿ ಬಂದರು ಅಭಿವೃದ್ಧಿಪಡಿಸಲು ಅದಾನಿ ಶ್ರಮಪಟ್ಟರು. ನಂತರ ಕಲ್ಲಿದ್ದಲು ಕ್ಷೇತ್ರಕ್ಕೆ ಕಾಲಿಟ್ಟ ಗೌತಮ್ ಅದಾನಿ ಅವರು, ನನ್ನ ಸಲಹೆ ಮೇರೆಗೆ ಶಾಖೋತ್ಪನ್ನ ವಲಯ ಪ್ರವೇಶ ಮಾಡಿದರು. ಭಂಡಾರಾದಲ್ಲಿ 3,000 ಮೆಗಾವಾಟ್ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸುವ ಮೂಲಕ ನನ್ನ ಸಲಹೆಯನ್ನು ಪಾಲಿಸಿದರು ಎಂದು ಎನ್‌ಸಿಪಿ ಮುಖ್ಯಸ್ಥ ಪವಾರ್ ಬರೆದುಕೊಂಡಿದ್ದರು.

ಕಳೆದ ವಾರವಷ್ಟೇ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಭೇಟಿ ಮಾಡಿದ್ದರು. ಸಂಸತ್ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರಣತಂತ್ರ ಹೆಣೆಯಲಾಗುತ್ತಿದೆ. ಹೀಗಾಗಿ ಸಮಾನ ಮನಸ್ಕ ವಿರೋಧ ಪಕ್ಷಗಳು ಒಂದೇ ವೇದಿಕೆಯಲ್ಲಿ ಒಗ್ಗೂಡಬೇಕು ಎಂಬ ವಿಷಯ ಮೊದಲಿನಿಂದಲೂ ಚರ್ಚೆಯಲ್ಲಿತ್ತು. ಹೀಗಾಗಿಯೇ ಶರದ್ ಪವಾರ್ ಮತ್ತು ರಾಹುಲ್ ಗಾಂಧಿ ನಡುವೆ ಮಹತ್ವದ ಚರ್ಚೆ ನಡೆದಿತ್ತು. ಈ ಬೆಳವಣಿಗೆ ನಡೆದು ಕೆಲವೇ ದಿನದಲ್ಲಿ ಉದ್ಯಮಿ ಗೌತಮ್ ಅದಾನಿ ಕೂಡ ಪವಾರ್ ಜೊತೆ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.












Click it and Unblock the Notifications