Manmohan Singh: ಉದ್ಯಮಿ ಗೌತಮ್ ಅದಾನಿ ಸೇರಿ ರಾಜ್ಯ ರಾಜಕೀಯ ಗಣ್ಯರಿಂದ ಸಂತಾಪ
ಬೆಂಗಳೂರು, ಡಿಸೆಂಬರ್ 27: ಭಾರತದಲ್ಲಿ ಎರಡು ಭಾರಿ ಪ್ರಧಾನಿಯಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಮನಮೋಹನ್ ಸಿಂಗ್ (92) ಅವರು (Manmohan Singh) ವಯೋಸಹಜ ಕಾಯಿಂದಾಗಿ ಗುರುವಾರ ರಾತ್ರಿ ನಿಧನರಾದರು. ಅವರ ನಿಧನಕ್ಕೆ ಅನೇಕ ಗಣ್ಯರು ಕಂಪನಿ ಮಿಡಿದಿದ್ದಾರೆ. ದೇಶದ ಖ್ಯಾತ ಉದ್ಯಮಿ ಗೌತಮ್ ಅದಾನಿ ಅವರು ಸಹ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿದ್ದಾರೆ.
ಮನಮೋಹನ್ ಸಿಂಗ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಭಾರತವನ್ನು ಮರುರೂಪಿಸಿದ ಮತ್ತು ಜಗತ್ತಿಗೆ ದೇಶದ ಬಾಗಿಲು ತೆರೆಯುವಂತೆ ಮಾಡಿದ ಪರಿವರ್ತಕ 1991ರ ಸುಧಾರಣೆಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಕಾರ್ಯಗಳನ್ನು, ಆ ಇತಿಹಾಸವನ್ನು ಗೌರವಿಸುತ್ತೇವೆ. ಮೃದು ಸ್ವಭಾವದ ವ್ಯಕ್ತಿಯಾಗಿದ್ದ ಅವರು, ಅಪರೂಪದ ನಾಯಕ.

ಮನಮೋಹನ್ ಸಿಂಗ್ ಅವರು ತಮ್ಮ ಕಾರ್ಯಗಳ ಮೂಲಕ ಸದ್ದು ಮಾಡಿದ್ದ ಸಿಂಗ್ ಅವರ ಜೀವನ, ನಾಯಕತ್ವ, ನಮ್ರತೆ ಮತ್ತು ರಾಷ್ಟ್ರದ ಸೇವೆಯು ಚಿರಸ್ಥಾಯಿಯಾಗಿ ಉಳಿದಿದೆ. ಅದು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಉದ್ಯಮಿ ಗೌತಮ್ ಅದಾನಿ ಸಂತಾಪ ಸೂಚಿಸಿದ್ದಾರೆ.
ಬಿವೈ ವಿಜಯೇಂದ್ರ ಸಂತಾಪ
ದೇಶದ ಅರ್ಥ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರವಹಿಸಿ, ಆರ್ಥಿಕ ಉದಾರೀಕರಣದ ರೂವಾರಿಯಾಗಿ ಭಾರತದ ಬೆಳವಣಿಗೆಗೆ ಅಮೋಘ ಕೊಡುಗೆ ನೀಡಿದ್ದ ವಿಶ್ವ ಕಂಡ ಶ್ರೇಷ್ಠ ಆರ್ಥಿಕ ತಜ್ಞರೂ ಆದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುವೆ. ಅವರ ಸರಳತೆ, ಸಜ್ಜನಿಕೆಯಿಂದಾಗಿ ಅಪರೂಪದ ವಿನಯವಂತ ಪಾಂಡಿತ್ಯ ಮೂರ್ತಿಯನ್ನು ಅವರಲ್ಲಿ ಕಾಣುವಂತಾಗಿತ್ತು. ಪಕ್ಷಾತೀತವಾಗಿ ಎಲ್ಲರ ಹೃದಯದಲ್ಲೂ ಸ್ನೇಹದ ಬಾಂಧವ್ಯ ಬೆಸೆದಿದ್ದ ಅವರು ಅಕ್ಷರಶಃ ಅಜಾತಶತ್ರುವಾಗಿದ್ದರು.
ಯಾರೊಂದಿಗೂ ವಿರಸ ಕಟ್ಟಿಕೊಳ್ಳದೇ ಒಬ್ಬ ಶಿಸ್ತು ಬದ್ಧ ಆರ್ಥಿಕ ಸಲಹೆಗಾರರಾಗಿ, ಸರಳತೆಯ ರಾಜಕಾರಣಿಯಾಗಿದ್ದರು. ಪ್ರಧಾನಿಯಾಗಿ ಹತ್ತು ವರ್ಷಗಳ ಸುದೀರ್ಘ ಸೇವೆ ಮಹತ್ವದ ಮೈಲಿಗಲ್ಲು. ಭಾರತೀಯ ರಿಸರ್ವ್ ಬ್ಯಾಂಕ್'ನ ಗವರ್ನರ್ ಆಗಿ, ದೇಶದ ವಿತ್ತ ಸಚಿವರಾಗಿ ಅವರು ಇಟ್ಟ ಹೆಜ್ಜೆಗಳು ಆರ್ಥಿಕ ಸುಧಾರಣೆ ತಂದಿದ್ದಾರೆ.
ಜನಸಾಮಾನ್ಯರು, ಕಡು ಬಡವರು ಆರ್ಥಿಕ ಚೇತನ ಹೊಂದುವಂತಾಗಲು ಎಲ್ಲಾ ಹಂತದಲ್ಲೂ ದೇಶಕ್ಕೆ ಬಂಡವಾಳ ಹರಿದುಬರುವಂತಾಗಲು ಮನಮೋಹನ್ ಸಿಂಗ್ ಅವರು ತೋರಿಸಿದ ಆರ್ಥಿಕ ಜಾಣ್ಮೆಯಿಂದಾಗಿ ಭಾರತದ ಕೈಗಾರಿಕೆ, ಕೃಷಿ, ಶಿಕ್ಷಣ, ವಾಣಿಜ್ಯ ಸೇರಿದಂತೆ ಇತರ ಕ್ಷೇತ್ರಗಳು ಚೈತನ್ಯ ತುಂಬಿಕೊಳ್ಳಲು ಕಾರಣವಾಯಿತು.
ಮನಮೋಹನ್ ಸಿಂಗ್ ಅವರ ಅಗಲಿಕೆಯಿಂದ ಒಬ್ಬ ಸಜ್ಜನಿಕೆಯ ಆಡಳಿತಗಾರರನ್ನಷ್ಟೇ ದೇಶ ಕಳೆದುಕೊಂಡಿಲ್ಲ, ಮೃದು ಭಾಷೆಯ ಒಬ್ಬ ಮಹಾನ್ ಶ್ರೇಷ್ಠ ಆರ್ಥಿಕ ತಜ್ಞನನ್ನು ಕಳೆದುಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗೂ ಭಾರತದ ಇತಿಹಾಸದಲ್ಲಿ ಮನಮೋಹನ್ ಸಿಂಗ್ ಅವರ ವ್ಯಕ್ತಿತ್ವ, ಕೊಡುಗೆ ಹಾಗೂ ಸಾಧನೆಗಳು ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ. ಅಗಲಿದ ಮಹಾನ್ ಚೇತನಕ್ಕೆ ಗೌರವಪೂರ್ವಕ ನಮನಗಳು ಎಂದು ವಿಜಯೇಂದ್ರ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಪ್ರಚಾರ ರಾಜಕಾರಣ ಮಾಡಲಿಲ್ಲ: ಬಸವರಾಜ ಬೊಮ್ಮಾಯಿ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ನಿಧನ ಹೊಂದಿರುವ ಸುದ್ದಿ ಕೇಳಿ ಅತ್ಯಂತ ದುಖ ಉಂಟು ಮಾಡಿದೆ. ಆರ್ಥಿಕ ತಜ್ಞರಾಗಿ, ಪ್ರಧಾನಮಂತ್ರಿಯಾಗಿ ಹತ್ತು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದರು. ದೇಶದ ಆರ್ಥಿಕತೆಗೆ ದೊಡ್ಡ ಬದಲಾವಣೆ ತಂದಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಮನಮೋಹನ್ ಸಿಂಗ್ ಅವರು ಅಂತಾರಾಷ್ಟ್ರೀಯ ಸಂಸ್ಥೆಗಳಾದ ವಿಶ್ವ ಸಂಸ್ಥೆ, ಐಎಂಎಫ್ ನಲ್ಲಿ ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದರಿಂದ ಈ ದೇಶವನ್ನು ಉಳಿಸಲು ಸಾಧ್ಯವಾಯಿತು. ರಿಸರ್ವ್ ಬ್ಯಾಂಕ್ ಗೌರ್ನರ್ ಆಗಿ ಕೆಲಸ ಮಾಡಿದ್ದಾರೆ. ಈ ದೇಶದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರಲು ಕಾರಣವಾಗಿದೆ. ದೇಶ ಆರ್ಥಿಕವಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಮನಮೋಹನ್ ಸಿಂಗ್ ಭದ್ರ ಬುನಾದಿ ಹಾಕಿದ್ದಾರೆ ಎಂದರು.
ಮನಮೋಹನ್ ಸಿಂಗ್ ಅವರು ಅತ್ಯಂತ ಸಜ್ಜನ ರಾಜಕಾರಣಿ ಆಗಿದ್ದರು. ಒಬ್ಬ ಮುತ್ಸದ್ದಿ ರಾಜಕಾರಣಿಯನ್ನು ದೇಶ ಕಳೆದುಕೊಂಡಿದೆ. ಅವರು ದೇಶಕ್ಕಾಗಿ ಸದಾ ಚಿಂತನೆ ಮಾಡುತ್ತಿದ್ದರು. ಹಲವಾರು ದೂರದೃಷ್ಟಿಯ ನಿರ್ಣಯಗಳನ್ನು ತೆಗೆದುಕೊಂಡಿದ್ದರು. ಅದರ ಲಾಭ ಈಗ ದೇಶಕ್ಕೆ ಆಗುತ್ತಿದೆ.
ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಹಾಗೂ ಅವರ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪದಲ್ಲಿ ತಿಳಿಸಿದರು.












Click it and Unblock the Notifications