ಉತ್ತರ ಪ್ರದೇಶ: ಎನ್‌ಕೌಂಟರ್‌ನಲ್ಲಿ ದರೋಡೆಕೋರ ಅನಿಲ್ ದುಜಾನಾ ಹತ್ಯೆ
ಮೀರತ್, ಮೇ 4: ಉತ್ತರಪ್ರದೇಶದ ವಿಶೇಷ ಕಾರ್ಯಪಡೆ ಮೀರತ್ ಜಿಲ್ಲೆಯಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಅನಿಲ್ ದುಜಾನಾ ಎಂಬ ದರೋಡೆಕೋರ ಗುರುವಾರ ಕೊಲ್ಲಲ್ಪಟ್ಟಿದ್ದಾನೆ.
ಪಶ್ಚಿಮ ಯುಪಿಯ ಕುಖ್ಯಾತ ಕ್ರಿಮಿನಲ್ ಅನಿಲ್ ದುಜಾನಾನನ್ನು 2021ರಲ್ಲಿ ದೆಹಲಿ ಪೊಲೀಸರ ಕ್ರೈಂ ಬ್ರಾಂಚ್ ಬಂಧಿಸಿತ್ತು. ದುಜಾನಾ ವಿರುದ್ಧ 18 ಕೊಲೆಗಳು, ಸುಲಿಗೆ, ಲೂಟಿ, ಭೂಕಬಳಿಕೆ ಮತ್ತು ಇತರವು ಸೇರಿದಂತೆ 62 ಪ್ರಕರಣಗಳು ದಾಖಲಾಗಿವೆ.

ಅನಿಲ್ ದುಜಾನಾ ಸುಳಿವು ನೀಡಿದ್ದವರಿಗೆ ಬುಲಂದ್‌ಶಹರ್ ಪೊಲೀಸರು 25,000 ರೂಪಾಯಿಗಳ ಬಹುಮಾನವನ್ನು ಘೋಷಿಸಿದ್ದರು. ನೋಯ್ಡಾ ಪೊಲೀಸರು ಕೂಡ 50,000 ರೂಪಾಯಿಗಳ ಬಹುಮಾನವನ್ನು ಘೋಷಿಸಿದ್ದರು. ಅನಿಲ್ ದುಜಾನಾ 2012 ರಿಂದ ಜೈಲಿನಲ್ಲಿದ್ದನು. ಬಳಿಕ 2021 ರಲ್ಲಿ ಆತನಿಗೆ ಜಾಮೀನು ಸಿಕ್ಕಿತ್ತು. ನಂತರ, ಹಳೆಯ ಪ್ರಕರಣಗಳಲ್ಲಿ ಹಾಜರಾಗದ ಕಾರಣ ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಅನ್ನು ಹೊರಡಿಸಿತು.
ದರೋಡೆಕೋರ ಅನಿಲ್ ದುಜಾನಾ ಉತ್ತರ ಪ್ರದೇಶದ ಗೌತಮ ಬುದ್ಧ ಜಿಲ್ಲೆಯ ದುಜಾನಾ ಗ್ರಾಮದವನು. ಈಗ ಎನ್‌ಕೌಂಟರ್‌ನಲ್ಲಿ ಹತನಾದ ಆತ ಪಶ್ಚಿಮ ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಜನರ ಸುಲಿಗೆ ಮಾಡುವುದು ಮಾತ್ರವಲ್ಲದೆ, ಸಂಘಟಿತ ಕ್ರಿಮಿನಲ್ ಗ್ಯಾಂಗ್ ಕೂಡ ಹೊಂದಿದ್ದ. ಅತೀಕ್ ಅಹ್ಮದ್‌ನ ಪುತ್ರ ಅಸಾದ್‌ನನ್ನು ಜಾನ್ಸಿಯಲ್ಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಬಳಿಕ ಉತ್ತರ ಪ್ರದೇಶ ಎಸ್‌ಟಿಎಫ್‌ನ 2ನೇ ದೊಡ್ಡ ಬೇಟೆ ಇದಾಗಿದೆ.
ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಅಸಾದ್ ಪ್ರಮುಖ ಆರೋಪಿಯಾಗಿದ್ದ. ಹಾಡಹಗಲಲ್ಲೇ ಉಮೇಶ್ ಪಾಲ್ ಮೇಲೆ ಅಸಾದ್ ಗುಂಡು ಹಾರಿಸಿ ಕೊಂದಿದ್ದ. 2022ರ ಡಿಸೆಂಬರ್‌ನಲ್ಲಿ ದೆಹಲಿ ಪೊಲೀಸ್ ಮಯೂರ್ ವಿಹಾರ್ ಪ್ರದೇಶದದಿಂದ ಅನಿಲ್ ದುಜಾನನ್ನು ಬಂಧಿಸಿದ್ದರು. ಈತನನ್ನು ಹಿಡಿದುಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನವನ್ನೂ ಘೋಷಣೆ ಮಾಡಲಾಗಿತ್ತು. ಅದಲ್ಲದೆ, ಉತ್ತರ ಪ್ರದೇಶದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳ ಪಟ್ಟಿಯಲ್ಲಿ ಅನಿಲ್ ದುಜಾನಾನ ಹೆಸರು ಕೂಡ ಸೇರಿತ್ತು.
ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್‌ಎಸ್‌ಎ), ಗೂಂಡಾ ಕಾಯಿದೆ ಸೇರಿದಂತೆ ಹಲವು ಆರೋಪಗಳಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಹಲವು ಪ್ರಕರಣಗಳಲ್ಲಿ ಹಾಜರಾಗದ ಕಾರಣ ನ್ಯಾಯಾಲಯ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ಬಾದಲ್ಪುರ ನ್ಯಾಯಾಲಯವು ದುಜಾನಾಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.












Click it and Unblock the Notifications