ಎಕ್ಕಡದಿಂದ ಕಲ್ಲಿದ್ದಲು:ಜಯಲಲಿತಾಗೆ ಕಾಡಿದ 9ವಿವಾದಗಳು
ಚೆನ್ನೈ, ಅ 1: ವರ್ಣರಂಜಿತ ರಾಜಕಾರಣಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಪ್ರಸಕ್ತ ಪರಪ್ಪನ ಅಗ್ರಹಾರದ ಜೈಲು ಹಕ್ಕಿ ಜಯಲಲಿತಾ ತನ್ನ ರಾಜಕೀಯ ಜೀವನದುದ್ದಕ್ಕೂ ವಿವಾದಗಳನ್ನು ಜೊತೆಗೂಡಿಸಿಕೊಂಡು ಬಂದವರು.
ತನ್ನ ಮೇಲಿದ್ದ ಹನ್ನೆರಡಕ್ಕೂ ಹೆಚ್ಚು ಕೇಸುಗಳಿಂದ ಕ್ಲೀನ್ ಚಿಟ್ ಪಡೆದು ಹೊರಬಂದಿರುವ ಜಯಾ, ಕೆಲವು ದಿನಗಳ ಹಿಂದೆ ಅಕ್ರಮ ಗಳಿಕೆ ಆರೋಪದಡಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನ ವಿಐಪಿ ಸೆಲ್ ಸೇರಿಕೊಂಡಿದ್ದಾರೆ.
ಜಯಲಲಿತಾ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. ತಮ್ಮದೇ ಪಕ್ಷಕ್ಕೆ ಬಹುಮತವಿದ್ದರೂ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಾಗದ ಸ್ಥಿತಿಗೂ ಜಯಲಲಿತಾ ಹಿಂದೊಮ್ಮೆ ಹೋಗಿದ್ದರು. (ಜಯಲಲಿತಾ ಜೈಲು ಶಿಕ್ಷೆಯ ಹಿಂದೆ ಕರ್ನಾಟಕದ ಪಿತೂರಿ)
ಗ್ಲಾಮರ್, ವಿವಾದ ಮತ್ತು ಹಗರಣಗಳನ್ನು ತನ್ನ ಜೀವನದುದ್ದಕ್ಕೂ ಜೊತೆಯಾಗಿ ಕರೆದುಕೊಂಡು ಬರುತ್ತಿರುವ ಜಯಾ ರಾಜಕೀಯ ಜೀವನದ ಪ್ರಮುಖ ಒಂಬತ್ತು ಹಗರಣ/ವಿವಾದಗಳನ್ನು ಮುಂದೆ ನೀಡಲಾಗಿದೆ.
ಬಣ್ಣದ ಟಿವಿಯ ಕೇಸ್
1996ರಲ್ಲಿ ಗ್ರಾಮಸ್ಥರಿಗಾಗಿ ಸರಕಾರೀ ಲೆಕ್ಕದಲ್ಲಿ ಖರೀದಿಸಿದ ಕಲರ್ ಟಿವಿ ಕೇಸು ತಮಿಳುನಾಡು ರಾಜಕೀಯದಲ್ಲಿ ಭಾರೀ ತಲ್ಲಣವನ್ನು ಎಬ್ಬಿಸಿತ್ತು. ಶೈಕ್ಷಣಿಕ ಮತ್ತು ಮನೋರಂಜನಾ ಕೋಟಾದಡಿ ಮಂಜೂರು ಮಾಡಿಸಿಕೊಂಡಿದ್ದ ಈ ಯೋಜನೆಯಲ್ಲಿ ಜಯಾ ಕಿಕ್ ಬ್ಯಾಕ್ ಪಡೆದಿದ್ದರು ಎನ್ನುವುದು ಗುರುತರ ಆರೋಪವಾಗಿತ್ತು. ಈ ಕೋಟಾದಡಿಯ ಫಲಾನುಭವಿಗಳು ಬೆಂಗಳೂರು ಹೊಸೂರು ರಸ್ತೆಯಲ್ಲಿ ಟಿವಿಯನ್ನು ಮಾರಿ ಐನೂರು ರೂಪಾಯಿ 'ಕಿಕ್ ಬ್ಯಾಕ್' ಪಡೆಯುತ್ತಿದ್ದದ್ದು ಗುಪ್ತವಾಗಿ ಉಳಿದಿರಲಿಲ್ಲ.
ಮುಂದಿ ಓದಿ..

ಜಯ ಮನೆಯಲ್ಲಿ ಎಕ್ಕಡವೋ ಎಕ್ಕಡ
1996ರಲ್ಲಿ ಜಯಾ ಬಂಧನವಾದಾಗ ಅವರ ನಿವಾಸದಲ್ಲಿ 64 ಪೌಂಡ್ ಬಂಗಾರ, 750 ಜೊತೆ ಪಾದರಕ್ಷೆ, 91 ವಿವಿಧ ವಿನ್ಯಾಸದ ಕೈಗಡಿಯಾರ, ಸಾವಿರಕ್ಕೂ ಹೆಚ್ಚು ಜರತಾರಿ ಸೀರೆಗಳು. ಹೀಗೆ ಹಲವು ವಸ್ತುಗಳನ್ನು ಜಫ್ತಿ ಮಾಡಲಾಗಿತ್ತು.

ತಾನ್ಸಿ ಭೂಹಗರಣ
ರಾಜ್ಯ ಸರಕಾರೀ ಸ್ವಾಮ್ಯದ ಕಂಪೆನಿಯೊಂದರೆ ಜಮೀನನ್ನು ಜಯಾ ಪಬ್ಲಿಕೇಶನ್ ಹೆಸರಿನಲ್ಲಿ ಖರೀದಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಸಂಸ್ಥೆಗೆ ಜಯಲಲಿತಾ ಮತ್ತು ಶಶಿಕಲಾ ಪಾಲುದಾರರು.

ಜಯಲಲಿತಾ ಮತ್ತು ಅವರ ಖಜಾಂಜಿ
53 ವರ್ಷದ ಜಯಾ ಖಜಾಂಜಿಯಾಗಿದ್ದ ರಾಜಶೇಖರನ್ ಅವರನ್ನು ತನ್ನ ಮನೆಗೆ ಕರೆಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪ ಕೂಡಾ ಜಯಲಲಿತಾ ಮತ್ತು ಶಶಿಕಲಾ ಮೇಲೆ ಇತ್ತು. ರಾಜಶೇಖರನ್ ಮೇಲೆ ಶೂನಿಂದ ಹೊಡೆದು, ಜಯಾ ಮತ್ತು ಎಐಡಿಎಂಕೆ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಅಲ್ಲದೇ ಇವರಿಂದ ಜಯಾ ಎರಡು ಪತ್ರಗಳಿಗೆ ಮತ್ತು ಐವತ್ತು ಲಕ್ಷ ರೂಪಾಯಿಯ ಪ್ರಾಮಿಸರಿ ನೋಟಿಗೆ ಬಲವಂತವಾಗಿ ಸಹಿಹಾಕಿಸಿ ಕೊಂಡಿದ್ದರು ಎನ್ನುವುದು ವಿವಾದವಾಗಿತ್ತು,

ದತ್ತುಪುತ್ರನ ಮದುವೆ
ದತ್ತುಪುತ್ರ ಸುಧಾಕರನ್ ಅವರ ಮದುವೆಯನ್ನು ನಭೂತೋ ನಭವಿಷ್ಯತಿ ಎನ್ನುವಂತೆ ಅದ್ದೂರಿಯಾಗಿ ನಡೆಸಿದ್ದು ವ್ಯಾಪಕವಾಗಿ ಭಾರೀ ಟೀಕೆಗೆ ಗುರಿಯಾಗಿತ್ತು. ಕೋಟಿ ಕೋಟಿ ರೂಪಾಯಿ ವ್ಯಯಿಸಿದ ಈ ಅದ್ದೂರಿಯ ಮದುವೆಯಿಂದ ಜಯಲಲಿತಾ ನಂತರದ ದಿನಗಳಲ್ಲಿ ಮುಖಭಂಗಕ್ಕೊಳಗಾಗದರು.

ಕೊಡೈಕನೆಲ್ ರಿಸಾರ್ಟ್
ನಿಯಮಗಳನ್ನು ಗಾಳಿಗೆ ತೂರಿ ಕೊಡೈಕನೆಲ್ ನಲ್ಲಿ ಏಳು ಅಂತಸ್ತಿನ 'ಪ್ಲೆಸೆಂಟ್ ಸ್ಟೇ' ಹೋಟೇಲ್ ಕಟ್ಟಿಸಿ ಜಯಾ 2000 ಇಸವಿಯಲ್ಲಿ ಮತ್ತೆ ವಿವಾದಕ್ಕೀಡಾದರು. ಈ ಸಂಬಂಧ ಜಯಾ ವಿರುದ್ದ ಕೇಸು ದಾಖಲಾಗಿತ್ತು, ಡಿಸೆಂಬರ್ 2001ರಲ್ಲಿ ಜಯಾಗೆ ಈ ಕೇಸಿನಲ್ಲಿ ಮದರಾಸು ಹೈಕೋರ್ಟ್ ಕ್ಲೀನ್ ಚಿಟ್ ನೀಡಿತ್ತು.

ಕಲ್ಲಿದ್ದಲು ಹಗರಣ
1999ರಲ್ಲಿ ತಮಿಳುನಾಡು ವಿದ್ಯುತ್ ಕಂಪೆನಿಗೆ ಆಮದು ಮಾಡಿಕೊಂಡಿದ್ದ ಕಲ್ಲಿದ್ದಲಿನಲ್ಲಿ ಸುಮಾರು 7 ಬಿಲಿಯನ್ ಹಗರಣ ನಡೆದಿತ್ತು ಎಂದು ಜನತಾ ಪಾರ್ಟಿಯ ಸುಬ್ರಮಣಿಯನ್ ಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಎಪ್ರಿಲ್ 1997ರಲ್ಲಿ ಜಯಾ ವಿರುದ್ದ ಕೇಸು ದಾಖಲಾಗಿತ್ತು.

ಸೆಪ್ಟಂಬರ್ 2001ರಲ್ಲಿ ಪದವಿ ಕಳೆದುಕೊಂಡ ಜಯಾ
ತಾನ್ಸಿ ಭೂಹಗರಣದ ವಿಚಾರದಲ್ಲಿ ಸುಪ್ರೀಂಕೋರ್ಟಿನ ತೀರ್ಪಿನ ನಂತರ ಜಯಲಲಿತಾ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅಲ್ಲದೇ ಚುನಾವಣೆಯಲ್ಲಿ ಸ್ಪರ್ಧಿಸಲೂ ಜಯಾ ಕಾನೂನು ತೊಡಕಾಗಿತ್ತು.

ಅಕ್ರಮಗಳಿಗೆ ಜಯಾ ಬಂಧನ
ಇದಾದ ನಂತರ ಕಳೆದ ವಾರ (Sep 2014) ಅಕ್ರಮ ಆಸ್ತಿಗಳಿಗೆ ಆರೋಪದಡಿ ಜಯಾ ಬಂಧನವಾಗಿತ್ತು. ಹುದ್ದೆಯಲ್ಲಿದ್ದಾಗಲೇ ಮುಖ್ಯಮಂತ್ರಿಯೊಬ್ಬರು ಬಂಧನಕ್ಕೊಳಗಾಗಿದ್ದು ದೇಶದ ಇತಿಹಾಸದಲ್ಲಿ ಇದೇ ಮೊದಲು.












Click it and Unblock the Notifications