Gujarat Assembly Elections 2022: ಪ್ರಮುಖ ಪಾತ್ರ ವಹಿಸುವ ಅಂಶಗಳು ಇಲ್ಲಿವೆ
ನವದೆಹಲಿ, ನವೆಂಬರ್ 3: ಗುಜರಾತ್ ವಿಧಾನಸಭೆಯ ಚುನಾವಣಾ ದಿನಾಂಕಗಳು ಇಂದು ಪ್ರಕಟಗೊಂಡಿದೆ. ಕೇಂದ್ರ ಚುನಾವಣಾ ಆಯೋಗವು ಎರಡು ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಸುವ ನಿರ್ಧಾರ ಕೈಗೊಂಡಿದೆ. ಡಿಸೆಂಬರ್ 1 ಹಾಗೂ 5ರಂದು ಚುನಾವಣೆಗಳು ನಡೆಯಲಿವೆ. ಡಿಸೆಂಬರ್ 8ರಂದು ಫಲಿತಾಂಶ ಹೊರಬರಲಿದೆ. 182 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಂಶಗಳು ಇಲ್ಲಿವೆ...
ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ
2001 ರಿಂದ 2014 ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ಮೋದಿ ಗುಜರಾತ್ ರಾಜಕಾರಣದ ಮೇಲೆ ತಮ್ಮ ಹಿಡಿತವನ್ನು ಹೊಂದಿದ್ದಾರೆ. ಮುಖ್ಯಮಂತ್ರಿ ಹುದ್ದೆ ತ್ಯಜಿಸಿ ಎಂಟು ವರ್ಷಗಳು ಕಳೆದರೂ, ಮೋದಿಯವರಿಗೆ ಕೋಟ್ಯಂತರ ಬೆಂಬಲಿಗರು, ಅಭಿಮಾನಿಗಳು ಇದ್ದಾರೆ. ಮೋದಿಯವರ ಜನಪ್ರಿಯತೆ ಹಾಗೂ ವರ್ಚಸ್ಸು ಈ ಚುನಾವಣೆಯಲ್ಲಿ ನಿರ್ಣಾಯಕ ಅಂಶವಾಗಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆ
ಗುಜರಾತ್ ಅನ್ನು ಹಿಂದುತ್ವದ ಪ್ರಯೋಗ ಶಾಲೆ ಎಂದು ಕರೆಯಲಾಗುತ್ತದೆ. ಅದರ ಭಾಗವಾಗಿ ಬಿಲ್ಕಿಸ್ ಬಾನೊ ಅತ್ಯಾಚಾರಿಗಳನ್ನು ಅಲ್ಲಿನ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದೆ. 2002ರಲ್ಲಿ ನಡೆದ ಗುಜರಾತ್ ಕೋಮುಗಲಭೆಯಲ್ಲಿ ಬಿಸ್ಕಿತ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಕೆಯ ಕುಟಂಬ ಸದಸ್ಯರನ್ನು ಕೊಲ್ಲಲಾಗಿತ್ತು. ಈ ಪ್ರಕರಣದ ಅಪರಾಧಿಗಳನ್ನು ಸನ್ನಡತೆಯ ಆಧಾರದ ಮೇಲೆ ಗುಜರಾತ್ ಸರ್ಕಾರ ಬಿಡುಗಡೆ ಮಾಡಿದೆ. ಇದು ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಗುಜರಾತ್‌ನ ಅಲ್ಪಸಂಖ್ಯಾತರು, ಕೆಳ ಸಮುದಾಯಗಳ ಆಕ್ರೋಶಕ್ಕೆ ಗುಜರಾತ್ ಸರ್ಕಾರದ ತೀರ್ಮಾನ ಕಾರಣವಾಗಿದೆ. ಆದರೆ, ಹಿಂದುತ್ವವಾದಿಗಳು ಈ ತೀರ್ಮಾನದ ಪರ ಇದ್ದಾರೆ ಎಂದು ಹೇಳಲಾಗುತ್ತಿದೆ.

ಆಡಳಿತ ವಿರೋಧಿ ಅಲೆ
1998 ರಿಂದ ಬಿಜೆಪಿಯು ಗುಜರಾತ್‌ನಲ್ಲಿ ನಡೆಸುತ್ತಿದೆ. 24 ವರ್ಷಗಳ ಬಿಜೆಪಿ ಆಡಳಿತವು ಜನರಲ್ಲಿ ಅಸಮಾಧಾನವನ್ನು ತಂದಿದೆ ಎಂದು ತಜ್ಞರು ಹೇಳಿದ್ದಾರೆ. ಬಿಜೆಪಿ ಆಡಳಿತ ನಡೆಸಿದ ಹಲವು ವರ್ಷಗಳ ನಂತರವೂ ಹಣದುಬ್ಬರ, ನಿರುದ್ಯೋಗ ಮತ್ತು ಮೂಲಭೂತ ಸಮಸ್ಯೆಗಳು ಬಗೆಹರಿದಿಲ್ಲ ಎಂದು ಜನರು ಹೇಳುತ್ತಿದ್ದಾರೆ.
ಮೊರ್ಬಿ ಸೇತುವೆ ದುರಂತ
ಅಕ್ಟೋಬರ್ 30 ರಂದು ಮೊರ್ಬಿಯಲ್ಲಿ ನಡೆದ ಸೇತುವೆ ದುರಂತವು 135 ಜನರ ಪ್ರಾಣವನ್ನು ಬಲಿ ಪಡೆದುಕೊಂಡಿದೆ. ಆಡಳಿತ ಸರ್ಕಾರ ಮತ್ತು ಶ್ರೀಮಂತ ಉದ್ಯಮಿಗಳ ನಡುವಿನ ಸಂಬಂಧದ ಕುರಿತು ಈ ಪ್ರಕರಣವು ಬೆಳಕು ಚೆಲ್ಲಿದೆ. ಇದು ಗುಜರಾತ್‌ನ ಸಾಮಾನ್ಯ ನಾಗರಿಕರ ಮನಸ್ಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಿವೆ.
ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆಗಳ ಮುಂದೂಡಿಕೆ
ಗುಜರಾತ್‌ನಲ್ಲಿ ಪದೇ ಪದೇ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳು ನಡೆದಿವೆ. ಇದರಿಂದ ಸರ್ಕಾರಿ ನೇಮಕಾತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇದು ಸರ್ಕಾರಿ ಉದ್ಯೋಗ ಪಡೆಯಲು ಶ್ರಮಿಸುತ್ತಿರುವ ಯುವಕರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಈ ಪ್ರಕರಣಗಳು ಯುವಕರ ಅಸಮಾಧಾನಕ್ಕೆ ಕಾರಣವಾಗಿದೆ.

ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ಕೊರತೆ
ಗುಜರಾತ್‌ನ ಗ್ರಾಮೀಣ ಪ್ರದೇಶಗಳಲ್ಲಿ ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿಲ್ಲ. ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಇದು ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ವೈದ್ಯರ ಕೊರತೆಯು ಗ್ರಾಮೀಣ ಭಾಗಗಳಲ್ಲಿ ವಿಪರೀತವಾಗಿದೆ.
ರೈತರ ಸಮಸ್ಯೆಗಳು
ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಹೆಚ್ಚಾಗಿದೆ. ಸರ್ಕಾರವು ಬೆಳೆ ನಷ್ಟಕ್ಕೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ರೈತರು ಧರಣಿ ನಡೆಸುತ್ತಿದ್ದಾರೆ.
ಹದಗೆಟ್ಟ ರಸ್ತೆಗಳು
ಗುಜರಾತ್ ಹಿಂದೆ ಉತ್ತಮ ರಸ್ತೆಗಳಿಗೆ ಹೆಸರುವಾಸಿಯಾಗಿತ್ತು. ಆದರೆ, ಕಳೆದ ಐದಾರು ವರ್ಷಗಳಲ್ಲಿ ರಾಜ್ಯ ಸರಕಾರ ಹಾಗೂ ನಗರ ಪಾಲಿಕೆಗಳು ಉತ್ತಮ ರಸ್ತೆಗಳ ನಿರ್ಮಾಣ ಮಾಡಿಲ್ಲ. ಹಳೆಯ ರಸ್ತೆಗಳ ನಿರ್ವಹಣೆಯಲ್ಲೂ ಸರ್ಕಾರ ವಿಫಲಗೊಂಡಿದೆ.
ವಿದ್ಯುತ್ ದರಗಳಲ್ಲಿ ಏರಿಕೆ
ದೇಶದಲ್ಲೇ ಅತಿ ಹೆಚ್ಚು ವಿದ್ಯುತ್ ದರವನ್ನು ಗುಜರಾತ್ ಹೊಂದಿದೆ. ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ತಿಂಗಳಿಗೆ 300 ಯೂನಿಟ್‌ಗಳನ್ನು ಉಚಿತವಾಗಿ ನೀಡುವ ಭರವಸೆ ನೀಡಿವೆ.
ಭೂಸ್ವಾಧೀನ ಪ್ರಕ್ರಿಯೆ
ವಿವಿಧ ಯೋಜನೆಗಳಿಗೆ ಭೂಮಿ ಸ್ವಾಧೀನಪಡಿಸಿಕೊಳ್ಳುತ್ತಿರುವ ಸರ್ಕಾರದ ಕ್ರಮವು ರೈತರು ಮತ್ತು ಭೂಮಾಲೀಕರ ಅಸಮಾಧಾನಕ್ಕೆ ಕಾರಣವಾಗಿದೆ.












Click it and Unblock the Notifications