Breaking: ಲೋಕಸಭೆಯಿಂದ 4 ಕಾಂಗ್ರೆಸ್ ಸಂಸದರ ಅಮಾನತು
ನವದೆಹಲಿ, ಜುಲೈ 25: ಬೆಲೆ ಏರಿಕೆ ಖಂಡಿಸಿ ಸದನದೊಳಗೆ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ ನಾಲ್ವರು ಕಾಂಗ್ರೆಸ್ ಸಂಸದರನ್ನು ಅಮಾನತು ಮಾಡಲಾಗಿದೆ. ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಸಂಸದರು ಪಾಲ್ಗೊಳ್ಳುವಂತಿಲ್ಲ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಪ್ರತಿಭಟನೆ ನಡೆಸಲು ಬಯಸಿದರೆ ಸದನದ ಹೊರಗೆ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸುವಂತೆ ಎಚ್ಚರಿಕೆ ನೀಡಿದ್ದರು. ಆದರೂ ಸದನದಲ್ಲಿ ಪ್ರತಿಭಟನೆ ನಡೆಸಿದ ಸಂಸದರನ್ನು ಅಮಾನತು ಮಾಡಲಾಗಿದೆ.
ಕಾಂಗ್ರೆಸ್ ಸಂಸದರಾದ ಮಾಣಿಕಂ ಟ್ಯಾಗೋರ್, ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಟಿಎನ್ ಪ್ರತಾಪನ್ ಅಮಾನತುಗೊಂಡವರು. ಸ್ಪೀಕರ್ ಕ್ರಮದ ನಂತರ ನಾಲ್ವರು ಸಂಸತ್ ಭವನದ ಹೊರಗಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ತೆರಳಿ ಘೋಷಣೆಗಳನ್ನು ಕೂಗಿದರು.

ವಿಪಕ್ಷಗಳ ವರ್ತನೆಯಿಂದ ಅಸಮಾಧಾನಗೊಂಡ ಸ್ಪೀಕರ್ ಸೋಮವಾರ ಮಧ್ಯಾಹ್ನ 3 ಗಂಟೆಯ ನಂತರ ಚರ್ಚೆಗೆ ಸಿದ್ಧ. ಆದರೆ ಸದನದೊಳಗೆ ಯಾವುದೇ ಪ್ರತಿಭಟನೆಯನ್ನು ಸಹಿಸುವುದಿಲ್ಲ ಎಂದು ವಿರೋಧ ಪಕ್ಷದ ಸಂಸದರಿಗೆ ಎಚ್ಚರಿಕೆ ನೀಡಿದ್ದರು.
"ನೀವು ಫಲಕಗಳನ್ನು ಹಿಡಿದು ಪ್ರತಿಭಟಿಸಲು ಬಯಸಿದರೆ, ಅದನ್ನು ಸದನದ ಹೊರಗೆ ಮಾಡಿ. ನಾನು ಚರ್ಚೆಗೆ ಸಿದ್ಧನಿದ್ದೇನೆ, ಆದರೆ ನನ್ನ ಮೃದು ಸ್ವಭಾವವನ್ನು ದೌರ್ಬಲ್ಯ ಎಂದು ಭಾವಿಸಬೇಡಿ" ಎಂದು ಸ್ಪೀಕರ್ ಹೇಳಿದರು.
ಮಧ್ಯಾಹ್ನ 3 ಗಂಟೆಯ ನಂತರ ಅಧಿವೇಶನ ಪುನರಾರಂಭವಾದಾಗ ಮತ್ತೆ ಕಲಾಪವನ್ನು 20 ನಿಮಿಷ ಮುಂದೂಡಲಾಯಿತು. ಸ್ಪೀಕರ್ ಎಚ್ಚರಿಕೆಯ ನಡುವೆಯೂ ವಿರೋಧ ಪಕ್ಷದ ಸಂಸದರು ಭಿತ್ತಿಪತ್ರಗಳೊಂದಿಗೆ ಮರಳಿದ್ದರು.
ಭಿತ್ತಿಪತ್ರಗಳು ಮತ್ತು ಬ್ಯಾನರ್‌ಗಳನ್ನು ಹಿಡಿದು, ವಿರೋಧ ಪಕ್ಷದ ಸಂಸದರು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿಗೆ ಬಂದು ಹೆಚ್ಚುತ್ತಿರುವ ಹಣದುಬ್ಬರ, ಸರಕು ಮತ್ತು ಸೇವಾ ತೆರಿಗೆ, ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹೆಚ್ಚಳದ ಬಗ್ಗೆ ತಮ್ಮ ಮಾತನಾಡಬೇಕು ಎಂದು ಒತ್ತಾಯಿಸಿದ್ದರು. ಬಳಿಕ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
"ಸಂಸತ್ತಿನಲ್ಲಿ ಜನರ ಪರ ಧ್ವನಿ ಎತ್ತಿದ್ದಕ್ಕಾಗಿ ನಮ್ಮನ್ನು ಸದನದಿಂದ ಅಮಾನತುಗೊಳಿಸಲಾಗಿದೆ. ದೇಶದ ಜನರಿಗಾಗಿ ಹೋರಾಟ ಮುಂದುವರಿಸುತ್ತೇವೆ. ಸಂಸತ್ತಿನಲ್ಲಿ ನೂರು ವಿಷಯಗಳಿಗೆ ಅವಕಾಶವಿಲ್ಲ, ಮೋದಿ ಮತ್ತು ಅಮಿತ್ ಶಾ ಅವರನ್ನು ಹೊಗಳಲು ಮಾತ್ರ ಅವಕಾಶ" ಎಂದು ಅಮಾನತುಗೊಂಡ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಆಕ್ರೋಶ ಹೊರಹಾಕಿದ್ದಾರೆ.
Recommended Video
ಪ್ರತಿಪಕ್ಷಗಳು ಬೆಲೆ ಏರಿಕೆ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಒತ್ತಾಯಿಸುತ್ತಿವೆ. ಜುಲೈ 18 ರಂದು ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ ಉಭಯ ಸದನಗಳಲ್ಲಿ ಕಲಾಪಗಳನ್ನು ಪದೇ ಪದೇ ಮುಂದೂಡಲಾಗುತ್ತಿದೆ.












Click it and Unblock the Notifications