ಜೈಲಿನಲ್ಲಿ ಕುಸಿದುಬಿದ್ದ ಎಎಪಿ ಮಾಜಿ ಸಚಿವ ಸತ್ಯೇಂದ್ರ ಜೈನ್ ಸ್ಥಿತಿ ಗಂಭೀರ: ಆಮ್ಲಜನಕದ ಆಸರೆ
ನವದೆಹಲಿ, ಮೇ 25: ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನ ವಾಶ್ ರೂಂನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅವರನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಕಳೆದ ರಾತ್ರಿ (ಬುಧವಾರ, ಮೇ 24) ತಿಹಾರ್ ಜೈಲಿನ ಬಾತ್ ರೂಂನಲ್ಲಿ ಕಾಲು ಜಾರಿ ಬಿದ್ದ ಸತ್ಯೇಂದ್ರ ಜೈನ್ ಅವರನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಹಾರ್ ಜೈಲು ಆಡಳಿತ ತಿಳಿಸಿದೆ.

ಸಚಿವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಪಾಸಣೆಗಾಗಿ ಕರೆತರಲಾಗಿದೆ ಎಂದು ತಿಹಾರ್ ಜೈಲು ಆಡಳಿತ ತಿಳಿಸಿದೆ.
ಏತನ್ಮಧ್ಯೆ ಸತ್ಯೇಂದ್ರ ಜೈನ್ ಅವರು ಸ್ನಾನಗೃಹದಲ್ಲಿ ಬಿದ್ದಿದ್ದಾರೆ. ಅವರಿಗೆ ಆಮ್ಲಜನಕದ ಸಹಾಯವನ್ನು ಒದಗಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ, ಆರೋಗ್ಯ ಸಮಸ್ಯೆಗಳಿಂದಾಗಿ ಎಎಪಿ ನಾಯಕ ಆಸ್ಪತ್ರೆಗೆ ದಾಖಲಾಗಿರುವುದು ವಾರದಲ್ಲಿ ಇದು ಎರಡನೇ ಬಾರಿಗೆ. ಪ್ರಸ್ತುತ, ಸತ್ಯೇಂದ್ರ ಜೈನ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ.

ಸತ್ಯೇಂದ್ರ ಜೈನ್ ಅವರ ವಕೀಲರ ಪ್ರಕಾರ, ಬಂಧನದಲ್ಲಿದ್ದಾಗ ಅವರು ಸುಮಾರು 35 ಕಿಲೋಗ್ರಾಂಗಳಷ್ಟು ತೂಕವನ್ನು ಕಳೆದುಕೊಂಡಿದ್ದಾರೆ.
ಈ ಹಿಂದೆ, ಸತ್ಯೇಂದ್ರ ಜೈನ್ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಅನಾರೋಗ್ಯದ ಬಗ್ಗೆ ದೂರು ನೀಡಿದ ನಂತರ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸಹೋದ್ಯೋಗಿಗಾಗಿ ಪ್ರಾರ್ಥನೆ ಸಲ್ಲಿಸಿದ್ದರು.
ದೇವರು ನೋಡುತ್ತಿದ್ದಾನೆ ಎಂದ ಅರವಿಂದ್ ಕೇಜ್ರಿವಾಲ್
ತಿಹಾರ್ ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದ್ರ ಜೈನ್ ಅವರು ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿರುವ ಕೆಲವೇ ಗಂಟೆಗಳ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
'ಒಬ್ಬ ಸರ್ವಾಧಿಕಾರಿ ಆ ಒಳ್ಳೆಯ ವ್ಯಕ್ತಿಯನ್ನು ಕೊಲ್ಲಲು ಮುಂದಾಗಿದ್ದಾನೆ' ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಜೈನ್ ಅವರನ್ನು ಆಮ್ಲಜನಕದ ಬೆಂಬಲದಲ್ಲಿ ಇರಿಸಲಾಗಿದೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಲೋಕನಾಯಕ ಜೈ ಪ್ರಕಾಶ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
'ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ಮತ್ತು ಉತ್ತಮ ಆರೋಗ್ಯವನ್ನು ಒದಗಿಸಲು ಹಗಲಿರುಳು ಶ್ರಮಿಸುತ್ತಿದ್ದ ವ್ಯಕ್ತಿಯಾಗಿದ್ದರು ಸತ್ಯೇಂದ್ರ ಜೈನ್. ಇಂದು ಒಬ್ಬ ಸರ್ವಾಧಿಕಾರಿ ಆ ಒಳ್ಳೆಯ ವ್ಯಕ್ತಿಯನ್ನು ಕೊಲ್ಲಲು ಮುಂದಾಗಿದ್ದಾನೆ. ಆ ಸರ್ವಾಧಿಕಾರಿಗೆ ಒಂದೇ ಒಂದು ಆಲೋಚನೆ ಇದೆ - ಎಲ್ಲರನ್ನು ಮುಗಿಸುವುದು. ಅವರು ಕೇವಲ 'ನಾನು' ನಲ್ಲಿ ವಾಸಿಸುತ್ತಾರೆ. ಅವನು ತನ್ನನ್ನು ಮಾತ್ರ ನೋಡಲು ಬಯಸುತ್ತಾನೆ' ಎಂದು ಕೇಜ್ರಿವಾಲ್ ಉಗ್ರವಾಗಿ ಟ್ವೀಟ್ ಮಾಡಿದ್ದಾರೆ.
ದೇವರು ಎಲ್ಲರನ್ನೂ ನೋಡುತ್ತಿದ್ದಾನೆ, ಎಲ್ಲರಿಗೂ ನ್ಯಾಯ ಕೊಡಿಸುತ್ತಾನೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಮಾಜಿ ಸಹೋದ್ಯೋಗಿಯು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಪ್ರಾರ್ಥಿಸಿದ್ದಾರೆ. 'ಈ ಪ್ರತಿಕೂಲ ಪರಿಸ್ಥಿತಿಗಳ ವಿರುದ್ಧ ಹೋರಾಡಲು ದೇವರು ಅವರಿಗೆ ಶಕ್ತಿಯನ್ನು ನೀಡಲಿ' ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications