ಸುಪ್ರೀಂಕೋರ್ಟ್‌ನಲ್ಲಿ ವಿದೇಶಿ ದೇಣಿಗೆ ಸಂಗ್ರಹಕ್ಕೆ ಅನುಮತಿ ಕೋರಿ ಎನ್‌ಜಿಒ ಅರ್ಜಿ
ನವದೆಹಲಿ, ಜನವರಿ 24: ಭಾರತದಲ್ಲಿನ ಸರ್ಕಾರೇತರ ಸಂಸ್ಥೆಗಳು(NGO) ವಿದೇಶದಿಂದ ದೇಣಿಗೆ ಸಂಗ್ರಹ ಮಾಡುವುದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಈ ಹಿನ್ನೆಲೆ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯು ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ.
ಭಾರತವು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯ ವಿರುದ್ಧ ಹೋರಾಡುತ್ತಿರುವುದರ ಮಧ್ಯೆ ವಿದೇಶಿ ನಿಧಿ ಸಂಗ್ರಹದ ಪರವಾನಗಿಗಳ ರದ್ದುಗೊಳಿಸಲಾಗಿದೆ. ಇದು COVID-19 ಪರಿಹಾರ ಕಾರ್ಯಗಳಿಗೆ ಹಿನ್ನಡೆ ಉಂಟು ಮಾಡುತ್ತದೆ ಎಂದು ಯುಎಸ್ ಮೂಲದ ಸರ್ಕಾರೇತರ ಸಂಸ್ಥೆ ಆಗಿರುವ ಗ್ಲೋಬಲ್ ಪೀಸ್ ಇನಿಶಿಯೇಟಿವ್ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಭಾರತದಲ್ಲಿ ಕೇಂದ್ರ ಸರ್ಕಾರವು ಗೊತ್ತುಪಡಿಸಿರುವ COVID-19 ರಾಷ್ಟ್ರೀಯ ವಿಪತ್ತು ಜಾರಿಯಲ್ಲಿ ಇರುವವರೆಗೆ ಆದರೂ ಈ ಎನ್‌ಜಿಒಗಳ ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ ಅಥವಾ ಎಫ್‌ಸಿಆರ್‌ಎ ಪರವಾನಗಿಗಳ ವಿಸ್ತರಣೆ ಮಾಡುವಂತೆ ಮನವಿ ಸಲ್ಲಿಸಲಾಗಿದೆ.

ಭಾರತೀಯರ ಹಕ್ಕುಗಳ ಉಲ್ಲಂಘನೆ:
"ಭಾರತದಲ್ಲಿ ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ ಮೂಲಕ ಏಕಾಏಕಿ ಸಾವಿರಾರು ಎನ್‌ಜಿಒಗಳ ಎಫ್‌ಸಿಆರ್‌ಎ ನೋಂದಣಿಯ ಹಠಾತ್ ಮತ್ತು ಅನಿಯಂತ್ರಿತ ರದ್ದತಿಯು ಸರಿಯಾದ ಕ್ರಮವಲ್ಲ. ಇದರಿಂದ ಸಂಸ್ಥೆಗಳು, ಅದರ ಉದ್ಯೋಗಿಗಳು ಮತ್ತು ಅವರು ಸೇವೆ ಸಲ್ಲಿಸುವ ಲಕ್ಷಾಂತರ ಭಾರತೀಯರ ಹಕ್ಕುಗಳನ್ನು ಉಲ್ಲಂಘಿಸಿದಂತೆ ಆಗುತ್ತದೆ," ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಕೊವಿಡ್-19 ಪರಿಹಾರ ಕಾರ್ಯಗಳಿಗೆ ಅಡ್ಡಿ:
"ದೇಶವು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯಿಂದ ತತ್ತರಿಸಿ ಹೋಗುತ್ತಿದೆ. ಇಂಥ ಸಮಯದಲ್ಲಿ ಸರ್ಕಾರೇತರ ಸಂಸ್ಥೆಗಳ ಮೇಲೆ ವಿದೇಶಿ ನಿಧಿ ಸಂಗ್ರಹವು ಪ್ರಸ್ತುತ ಎನಿಸುತ್ತದೆ. ಈ ಹಂತದಲ್ಲಿ ಸುಮಾರು 6000ಕ್ಕೂ ಹೆಚ್ಚು NGO ಪರವಾನಗಿಗಳನ್ನು ರದ್ದುಗೊಳಿಸುವುದರಿಂದ ಪರಿಹಾರ ಕಾರ್ಯಗಳಿಗೆ ಅಡ್ಡಿ ಆಗುತ್ತದೆ. ಇದರಿಂದ ಸಂಕಷ್ಟದಲ್ಲಿ ಇರುವ ನಾಗರಿಕರಿಗೆ ಸಹಾಯಕ್ಕೂ ನಿರಾಕರಿಸಿದಂತೆ ಆಗುತ್ತದೆ," ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇದರ ಜೊತೆಗೆ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಹಾಯ ಮಾಡುವಲ್ಲಿ NGO ಪಾತ್ರವನ್ನು ಸ್ವತಃ ಕೇಂದ್ರ ಸರ್ಕಾರ, NITI ಆಯೋಗ ಮತ್ತು ಪ್ರಧಾನಿ ನರೇಂದ್ರ ಮೋದಿ ಕಚೇರಿ ಒಪ್ಪಿಕೊಂಡಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ವಿದೇಶಿ ನಿಯಂತ್ರಣ ಕಾಯ್ದೆಯಡಿ(FCRA) ನೋಂದಣಿ ಅವಧಿ ಮುಕ್ತಾಯ:
ಕಳೆದ ಜನವರಿ 1ರಂದು, ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಯ ಪರವಾನಗಿಯನ್ನು ನವೀಕರಿಸದಿರುವ ವಿವಾದದ ನಂತರ, 12,000ಕ್ಕೂ ಹೆಚ್ಚು ಎನ್‌ಜಿಒಗಳು ಮತ್ತು ಇತರ ಸಂಸ್ಥೆಗಳ ವಿದೇಶಿ ನಿಯಂತ್ರಣ ಕಾಯ್ದೆಯಡಿ(FCRA) ನೋಂದಣಿ ಪರವಾನಗಿ ಅವಧಿ ಮುಗಿದಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿತ್ತು. ಈ ಸಂಸ್ಥೆಗಳಲ್ಲಿ ಅರ್ಧದಷ್ಟು ಸಂಸ್ಥೆಗಳು ತಮ್ಮ ಪರವಾನಗಿಗಳ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿಲ್ಲ ಎಂದು ತಿಳಿದು ಬಂದಿತ್ತು. ಆದಾಗ್ಯೂ, ಮದರ್ ತೆರೇಸಾ ಅವರ ಚಾರಿಟಿಗಾಗಿ ಪರವಾನಗಿಯನ್ನು ಜನವರಿ 6ರಂದು ನವೀಕರಿಸಲಾಗಿದ್ದು, 2026ರವರೆಗೆ ಮಾನ್ಯ ಮಾಡಲಾಗಿದೆ.
ಭಾರತದಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಎನ್‌ಜಿಒಗಳು:
ದೇಶದಲ್ಲಿ ಪ್ರಸ್ತುತ ಸುಮಾರು 22,400 ಎನ್‌ಜಿಒಗಳಿದ್ದು, ಎಫ್‌ಸಿಆರ್‌ಎ ಅಡಿಯಲ್ಲಿ ನೋಂದಾಯಿಸಲಾದ ಸರ್ಕಾರೇತರ ಸಂಸ್ಥೆಗಳು 58,000 ಕೋಟಿಗೂ ಹೆಚ್ಚು ವಿದೇಶಿ ಹಣವನ್ನು ಸ್ವೀಕರಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ವಿದೇಶಿ ದೇಣಿಗೆ ಕುರಿತಂತೆ ಇರುವ ಕಾನೂನಿನ ತಿದ್ದುಪಡಿ ವಿದೇಶಿ ನಿಯಂತ್ರಣ ಕಾಯ್ದೆಯಡಿ ನೋಂದಣಿ ವೆಚ್ಚ 3,000 ರು ನಿಂದ 5,000ರುಗಳಿಗೆ ಏರಿಕೆ ಮಾಡಲಾಗಿದೆ.
ಪರವಾನಗಿ ಕಳೆದುಕೊಂಡಿರುವ ಎನ್‌ಜಿಒಗಳ ಪಟ್ಟಿ ಹೀಗಿದೆ:
ದೇಶದಲ್ಲಿ ಸದ್ಯಕ್ಕೆ ಎಫ್‌ಸಿಆರ್‌ಎ ಪರವಾನಗಿ ಇಲ್ಲದ ಎನ್‌ಜಿಒಗಳ ಪಟ್ಟಿಯಲ್ಲಿ ಹಲವು ಸಂಸ್ಥೆಗಳು ಸೇರಿಕೊಂಡಿವೆ. ಈ ಪೈಕಿ ಆಕ್ಸ್‌ಫ್ಯಾಮ್ ಇಂಡಿಯಾ ಮತ್ತು ಆಕ್ಸ್‌ಫ್ಯಾಮ್ ಇಂಡಿಯಾ ಟ್ರಸ್ಟ್, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಭಾರತೀಯ ವೈದ್ಯಕೀಯ ಸಂಘ, ಲೆಪ್ರಸಿ ಮಿಷನ್, ಕ್ಷಯರೋಗ ಅಸೋಸಿಯೇಷನ್ ಆಫ್ ಇಂಡಿಯಾ, ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್, ಮತ್ತು ಇಂಡಿಯಾ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಕೂಡಾ ಇದೆ.












Click it and Unblock the Notifications