Jammu and Kashmir: ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಮತ್ತೆ ತರ್ತೀವಿ ಎಂದ ಫಾರೂಕ್ ಅಬ್ದುಲ್ಲಾ
ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ಕಾವು ಹೆಚ್ಚುತ್ತಿದೆ. ಎಲ್ಲಾ ಪಕ್ಷಗಳು ಈಗಾಗಲೇ ಚುನಾವಣಾ ಅಖಾಡಕ್ಕೆ ಧುಮುಕಿದ್ದು ವಿವಿಧ ಭರವಸೆಗಳನ್ನು ಮತದಾರರಿಗೆ ನೀಡುತ್ತಿವೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಕೂಡ ಇದೀಗ ರಾಜ್ಯದ ಜನತೆಗೆ ಮತ್ತೊಂದು ಭರವಸೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಮತ್ತೆ ಆರ್ಟಿಕಲ್ 370 ಸ್ಥಾಪಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಆರ್ಟಿಕಲ್ 370 ಜಮ್ಮು ಮತ್ತು ಕಾಶ್ಮೀರದ ಹೃದಯ ಬಡಿತ ಎಂದು ಕರೆದಿರುವ ಅವರು, ರಾಜ್ಯಕ್ಕಿರುವ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲು ಬಿಜೆಪಿ ದಶಕಗಳ ಕಾಲ ತೆಗೆದುಕೊಂಡರೆ. ಅದನ್ನು ಮರಳಿ ತರಲು ತಮ್ಮ ಪಕ್ಷವು ನಿರ್ಧಾರ ಮಾಡುತ್ತದೆ ಎಂದು ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ.

370ನೇ ವಿಧಿಯನ್ನು ರದ್ದು ಮಾಡಲು ಬಿಜೆಪಿ 31 ವರ್ಷಗಳ ಕಾಲ ತೆಗೆದುಕೊಂಡರೆ, ನಾವು ಅದನ್ನು ಮರಳಿ ತರಲು ಸಿದ್ಧರಿದ್ದೇವೆ. ಆರ್ಟಿಕಲ್ 370 ಮತ್ತು 35-ಎ ಕಣಿವೆ ರಾಜ್ಯದ ಜನರ ಹೃದಯ ಬಡಿತವಾಗಿದೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ಉಲ್ಲೇಖಿಸಿದೆ.
ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇತ್ತೀಚೆಗೆ ಬಿಜೆಪಿ ಅಧಿಕಾರದಲ್ಲಿ ಇರುವವರೆಗೆ 370 ನೇ ವಿಧಿಯನ್ನು ಮತ್ತೆ ಜಾರಿ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಫಾರೂಕ್ ಅಬ್ದುಲ್ಲಾ ಹೇಳಿಕೆ ಬಂದಿದೆ. ರಾಜ್ಯದಲ್ಲಿ 370ನೇ ವಿಧಿಯನ್ನು ಮರುಸ್ಥಾಪನೆ ಮಾಡಲು ಹಲವು ವರ್ಷಗಳು ಬೇಕಾಗಬಹುದು ಆದರೆ ನಾವು ಅದನ್ನು ಮಾಡುತ್ತೇವೆ ಎಂದು ಹೇಳಿದರು.
ಜಮ್ಮುವಿನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ಕೃತ್ಯಗಳ ಬಗ್ಗೆ ಮಾತನಾಡಿರುವ ಅವರು, 370ನೇ ವಿಧಿ ಭಯೋತ್ಪಾದನೆಗೆ ಮೂಲ ಕಾರಣ ಎಂದು ಬಿಜೆಪಿ ಹೇಳಿತ್ತು, ಈಗ 370ನೇ ವಿಧಿಯನ್ನು ರದ್ದು ಮಾಡಿದ ಬಳಿಕವೂ ಭಯೋತ್ಪಾದಕ ಕೃತ್ಯಗಳು ಏಕೆ ನಡೆಯುತ್ತಿವೆ ಎಂದು ಪ್ರಶ್ನೆ ಮಾಡಿದರು. ರಾಜಕಾರಣಿ ಜಮ್ಮು ಮತ್ತು ಕಾಶ್ಮೀರದ ಪ್ರಸ್ತುತ ಪರಿಸ್ಥಿತಿಗೆ ಕೇಂದ್ರ ಸರ್ಕಾರವೇ ಹೊಣೆ ಎಂದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 90 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 1 ರವರೆಗೆ 3 ಹಂತಗಳಲ್ಲಿ ಮತದಾನ ನಡೆಯಲಿದೆ. ಅಕ್ಟೋಬರ್ 8ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications