Farmers Protest: ಗಡಿಗಳು ಬಂದ್, ಸೆಕ್ಷನ್ 144 ಜಾರಿ... ರೈತರ ಪ್ರತಿಭಟನೆ ತಡೆಯಲು ಸರ್ಕಾರದಿಂದ ನಾನಾ ಪ್ರಯತ್ನ
ನವದೆಹಲಿ, ಫೆಬ್ರವರಿ.12: ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಕಾನೂನು ಜಾರಿಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ದೇಶದ ರೈತರು ಫೆಬ್ರವರಿ 13 ರಂದು ದೆಹಲಿ ರ‍್ಯಾಲಿಗೆ ನಡೆಸಲಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ 200 ಕ್ಕೂ ಹೆಚ್ಚು ರೈತ ಸಂಘಗಳು 'ದೆಹಲಿ ಚಲೋ'ಗೆ ಕರೆ ನೀಡಿವೆ. ಈ ರ‍್ಯಾಲಿಗೆ ಮುನ್ನೆಚ್ಚರಿಕೆಯಾಗಿ ಸರ್ಕಾರ ಹಲವು ತಡೆಗಳನ್ನು ಒಡ್ಡುತ್ತಿದೆ. ರೈತರು ದೆಹಲಿ ತಲುಪದಂತೆ ತಡೆಯಲು ದೆಹಲಿ, ಪಂಜಾಬ್ ಮತ್ತು ಹರಿಯಾಣ ಗಡಿಗಳನ್ನು ಮುಚ್ಚಲಾಗುತ್ತಿದೆ.

ದೆಹಲಿ ಚಲೋ ನಿಲ್ಲಿಸಲು ಸರ್ಕಾರದ ಹರಸಾಹಸ!
ದೇಶಾದ್ಯಂತ 200 ಕ್ಕೂ ಹೆಚ್ಚು ರೈತ ಸಂಘಗಳು 'ದೆಹಲಿ ಚಲೋ' ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಹರಿಯಾಣ ಮತ್ತು ದೆಹಲಿಯ ಅಧಿಕಾರಿಗಳು ತಮ್ಮ ನೆರೆಯ ರಾಜ್ಯಗಳ ಗಡಿಗಳನ್ನು ಕಾಂಕ್ರೀಟ್ ಬ್ಲಾಕ್‌ಗಳು, ರಸ್ತೆ ಸ್ಪೈಕ್ ತಡೆಗಳು ಮತ್ತು ಮುಳ್ಳುತಂತಿಗಳನ್ನು ಹಾಕುವ ಮೂಲಕ ವಾಹನಗಳ ಪ್ರವೇಶವನ್ನು ತಡೆಯುತ್ತಿವೆ. ನಿಷೇಧಾಜ್ಞೆಗಳನ್ನು ಹೇರುವುದು, ಸಾವಿರಾರು ಪೊಲೀಸರನ್ನು ನಿಯೋಜಿಸಿ ತಮ್ಮ ಗಡಿಯನ್ನು ಭದ್ರಪಡಿಸಿದ್ದಾರೆ.
ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್ ಸೇರಿದಂತೆ ನೆರೆಯ ರಾಜ್ಯಗಳ ರೈತರು ಫೆಬ್ರವರಿ 13 ರಂದು ತಮ್ಮ ಉದ್ದೇಶಿತ 'ದೆಹಲಿ ಚಲೋ ಮಾರ್ಚ್' ನಂತರ ದೆಹಲಿ ಪ್ರವೇಶಿಸುವ ನಿರೀಕ್ಷೆಯಿದೆ. ಕಳೆದ ಬಾರಿ ಸರ್ಕಾರ ಮಾತು ಕೊಟ್ಟಂತೆ ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಖಾತರಿಪಡಿಸುವ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ರೈತರ 'ಚಲೋ ದೆಹಲಿ' ಮೆರವಣಿಗೆಯನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ಪೊಲೀಸರು ಭಾನುವಾರ ಸಂಚಾರ ಸಲಹೆಯನ್ನು ನೀಡಿದ್ದಾರೆ. ರಾಷ್ಟ್ರ ರಾಜಧಾನಿಯ ಮೂರು ಗಡಿಗಳಲ್ಲಿ ವಾಹನಗಳ ಚಲನೆಯ ಮೇಲಿನ ನಿರ್ಬಂಧಗಳನ್ನು ವಿಧಿಸಲಾಗಿದೆ. ಸಿಂಘು ಬಾರ್ಡರ್‌ನಲ್ಲಿ ವಾಣಿಜ್ಯ ವಾಹನಗಳಿಗೆ ಮತ್ತು ಮಂಗಳವಾರದಿಂದ ಎಲ್ಲಾ ರೀತಿಯ ವಾಹನಗಳಿಗೆ ಸಂಚಾರ ನಿರ್ಬಂಧಗಳು ಅಥವಾ ತಿರುವುಗಳನ್ನು ವಿಧಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.
ಮೂವರು ಕೇಂದ್ರ ಸಚಿವರಾದ ಕಿರಿಯ ಕೃಷಿ ಸಚಿವ ಅರ್ಜುನ್ ಮುಂಡಾ, ಕಿರಿಯ ಗೃಹ ಸಚಿವ ನಿತ್ಯಾನಂದ ರೈ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಫೆಬ್ರವರಿ 12 ರಂ ಸೋಮವಾರ ರೈತ ಸಂಘಟನೆಗಳ ಮುಖಂಡರನ್ನು ಭೇಟಿ ಮಾಡಲಿದ್ದಾರೆ. ಮೊದಲ ಸುತ್ತಿನ ಸಭೆ ಗುರುವಾರ ನಡೆದಿತ್ತು. ತಮ್ಮ ಬೇಡಿಕೆಗಳ ಕುರಿತು ಚರ್ಚಿಸಲು ಕೇಂದ್ರವು ಸಭೆಗೆ ಆಹ್ವಾನಿಸಿದೆ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಶನಿವಾರ ತಿಳಿಸಿದ್ದಾರೆ. ಇಂದಿನ ಸಭೆಯಲ್ಲಿ ಏನು ತೀರ್ಮಾನವಾಗಲಿದೆಯೋ ತಿಳಿಯಬೇಕಿದೆ.
ಹರಿಯಾಣ ಸರ್ಕಾರವು ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಒಂದೆಡೆ ಸಭೆ ಸೇರುವುದನ್ನು ನಿಷೇಧಿಸಿದೆ. ಪಂಜಾಬ್‌ನೊಂದಿಗಿನ ರಾಜ್ಯದ ಗಡಿಯನ್ನು ಅಂಬಾಲಾ, ಜಿಂದ್ ಮತ್ತು ಫತೇಹಾಬಾದ್ ಜಿಲ್ಲೆಗಳಲ್ಲಿ ಕಾಂಕ್ರೀಟ್ ಬ್ಲಾಕ್‌ಗಳು, ರಸ್ತೆ ಸ್ಪೈಕ್ ತಡೆಗೋಡೆಗಳು ಮತ್ತು ಮುಳ್ಳುತಂತಿಗಳಿಂದ ಮುಚ್ಚಿದ್ದಾರೆ. ಅಂಬಾಲಾದ ಸೆಕ್ಟರ್ 10 ರಲ್ಲಿನ ರಾಜೀವ್ ಗಾಂಧಿ ಸ್ಪೋರ್ಟ್ಸ್ ಸ್ಟೇಡಿಯಂ ಅನ್ನು ತಾತ್ಕಾಲಿಕ ಬಂಧನ ಕೇಂದ್ರವೆಂದು ಘೋಷಿಸಲಾಗಿದೆ ಎಂದು ಅಂಬಾಲಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications