ಎಂಎಸ್‌ಪಿ ಖಾತ್ರಿ ಕಾನೂನು ಜಾರಿಗೆ ಆಗ್ರಹಿಸಿ ಮತ್ತೆ ರೈತರಿಂದ ಬೃಹತ್ ಹೋರಾಟ
ಭಾರತದಲ್ಲಿ ಎಂಎಸ್‌ಪಿ ಖಾತ್ರಿ ಕಾನೂನು ಜಾರಿ ಮಾಡುವ ವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಘೋಷಣೆ ಮಾಡಿದೆ. ದೇಶದ ಪ್ರಮುಖ ಕೃಷಿ ಪ್ರಧಾನ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಈ ವಿಷಯ ಇದೀಗ ಕಾವು ಪಡೆದುಕೊಂಡಿದೆ. ಲೋಕಸಭೆ ಚುನಾವಣೆಯ ಸಮಯದಲ್ಲಿ ರೈತರು ಸಂಘಟನಾತ್ಮಕ ಹೋರಾಟವನ್ನು ನಡೆಸುವ ಮೂಲಕ ಎಂಎಸ್‌ಪಿ ಕಡ್ಡಾಯ ಜಾರಿಗೆ ಆಗ್ರಹಿಸಿದ್ದರು. ಆ ಸಮಯದಲ್ಲಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತಾದರೂ ಕಾರ್ಯರೂಪಕ್ಕೆ ತಂದಿರಲಿಲ್ಲ. ಇದೀಗ ಮತ್ತೆ ಹರಿಯಾಣ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಹರಿಯಾಣ ಚುನಾವಣೆ ಹಿನ್ನಲೆಯಲ್ಲಿ ಕಿಸಾನ್ ಮಹಾಪಂಚಾಯತ್ ಸಮಾವೇಶ ನಡೆಸಲು ಸಾಧ್ಯವಿಲ್ಲ ಎಂದು ಅಲ್ಲಿನ ಪೊಲೀಸರು ರೈತರಿಗೆ ಎಚ್ಚರಿಸಿದ್ದರು. ಅಲ್ಲದೇ ಸಮಾವೇಶದ ಸ್ಥಳದಲ್ಲಿ ಹಾಕಲಾಗಿದ್ದ ಶಾಮಿಯಾನ ಮೈಕ್‌ಗಳನ್ನು ಕಿತ್ತುಹೊಯ್ದರು ಇದನ್ನು ರೈತ ಮುಖಂಡರು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ಸಂದೇಶ ನೀಡಿದ್ದಾರೆ ಎಂದು ದಕ್ಷಿಣ ಭಾರತ ರಾಜ್ಯಗಳ ಸಂಚಾಲಕ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕುರುಬೂರ್ ಶಾಂತಕುಮಾರ್ ಹೇಳಿದ್ದಾರೆ.

ಎಂಎಸ್‌ಪಿ ಖಾತ್ರಿ ಕಾನೂನು ಜಾರಿಗೆ ಉತ್ತರ ಭಾರತದ ರಾಜ್ಯಗಳಲ್ಲಿ ತೀವ್ರ ಹೋರಾಟ ನಡೆಯುತ್ತಿದೆ. ಅಲ್ಲಿ ಯಾವ ರೀತಿ ಪ್ರತಿಭಟನೆ ನಡೆಯುತ್ತಿದೆ ಎನ್ನುವುದನ್ನು ಕುರುಬೂರ್ ಶಾಂತಕುಮಾರ್ ಅವರು ವಿವರಿಸಿದ್ದಾರೆ. ಹರಿಯಾಣದಲ್ಲಿ ಸಮಾವೇಶ ನಡೆಸಲು ಹಾಕಿದ್ದ ಟೆಂಟುಗಳನ್ನ ಕಿತ್ತಾಕಿ ಮೈಕ್‌ಗಳನ್ನು ಕಿತ್ತೆಸೆದ ಪೊಲೀಸರು ಬೆಳಿಗ್ಗೆ 9ರ ಒಳಗೆ ಮಾತ್ರ ಸಮಾವೇಶ ನಡೆಸಲು ಅವಕಾಶ ನೀಡದಿದ್ದರೆ. ರೈತರು ರಾಜ್ಯದಾದ್ಯಂತ ಎಲ್ಲ ರಸ್ತೆಗಳನ್ನ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಸಮಾವೇಶ ನಡೆಸಲು ಅವಕಾಶ ಕಲ್ಪಿಸಿತ್ತು. ಆದರೆ, ಪಕ್ಕದ ರಾಜ್ಯದ ಪಂಜಾಬ್ ರೈತರಿಗೆ ಸಮಾವೇಶಕ್ಕೆ ಬರಲು ಅವಕಾಶ ನೀಡಲಿಲ್ಲ. ಆಗ ಮತ್ತಷ್ಟು ಸಂಖ್ಯೆಯ ರೈತರು ತಂಡೋಪ ತಂಡವಾಗಿ ಸಮಾವೇಶ ಸ್ಥಳಕ್ಕೆ ಬಂದರು. ಇದರಿಂದ ರೈತಶಕ್ತಿ ಇಮ್ಮಡಿಗೊಂಡಿತು ಎಂದು ಹೇಳಿದ್ದಾರೆ.
ರೈತರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ, ಕೇಂದ್ರ ಸರ್ಕಾರಕ್ಕೆ ರೈತರ ಕೂಗು ಕೇಳುತ್ತಿಲ್ಲ.ಅದರೆ, ಶ್ರೀಮಂತರು ಬಂಡವಾಳ ಶಾಹಿಗಳು ಕಣ್ಣು ಸನ್ನೆಯಲ್ಲಿ ಸೂಚನೆ ನೀಡಿದರೆ ಸಾಕು ಕಾನೂನುಗಳು ಜಾರಿಯಾಗುತ್ತವೆ. ಸಾಲಮನ್ನ ಮಾಡಲಾಗುತ್ತದೆ. ಇದು ಪ್ರಜಾ ಪ್ರಭುತ್ವ ಸರ್ಕಾರ ಎನ್ನುವುದು ನಾಚಿಕೆ ತರುವಂತ ವಿಚಾರ. ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸರ್ಕಾರಕ್ಕೆ ರೈತರು ಸ್ವಲ್ಪ ಬಿಸಿ ಮುಟ್ಟಿಸಿದರು ಎಚ್ಚೆತ್ತಿಲ್ಲ. ಈಗ ಹರಿಯಾಣ ಚುನಾವಣೆಯಲ್ಲಿ ಸರಿಯಾದ ಪಾಠವನ್ನೇ ಕಲಿಸಬೇಕಾಗಿದೆ. ಪಂಜಾಬ್ ಹರಿಯಾಣ ರೈತರ ರೀತಿಯಲ್ಲಿ ಎಲ್ಲಾ ರಾಜ್ಯಗಳಲ್ಲಿಯೂ ಹೋರಾಟ ನಡೆದರೆ, ರೈತ ದ್ರೋಹಿ ನೀತಿಗಳನ್ನು ಬದಲಾಯಿಸಬಹುದು. ಇಲ್ಲದಿದ್ದರೆ ರೈತ ಕುಲವೇ ನಾಶವಾಗುತ್ತದೆ ಎಂದರು.
ಸಮಾವೇಶದಲ್ಲಿ ಸಂಯುಕ್ತ ಕಿಸಾನ್ ಮೋರ್ಚ (ರಾಜಕೀಯೆತರ) ಸಂಘಟನೆಯ ಮುಖ್ಯಸ್ಥ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಮಾತನಾಡಿ, ಇಂದಿನ ಸಮಾವೇಶವನ್ನು ತಪ್ಪಿಸಲು ಚುನಾವಣಾ ನೆಪದಲ್ಲಿ ಪೊಲೀಸರ ಬಲ ಪ್ರಯೋಗ ನಡೆಯಿತು. ರೈತಶಕ್ತಿ ಸರ್ಕಾರಕ್ಕೆ ತಕ್ಕ ಉತ್ತರ ನೀಡಿ ಸಮಾವೇಶ ನಡೆಸುತ್ತಿದ್ದೇವೆ. ಇಡೀ ದೇಶದ ರೈತರು ನಮ್ಮ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಹರಿಯಾಣದ ನಡೆದ ರಾಷ್ಟ್ರೀಯ ರೈತ ಸಮಾವೇಶದಲ್ಲಿ ಲಕ್ಷಾಂತರ ರೈತರು ಭಾಗವಹಿಸಿದ್ದರು. ಹರಿಯಾಣ ರೈತ ಮುಖಂಡ ಅಭಿಮನ್ಯುಕೊಹಾರ್, ಕ್ವೀನ್ದರ್ ಸಿಂಗ್ ಮಾತನಾಡಿ, ಚಳುವಳಿಯನ್ನ ಹತ್ತಿಕುವ ಪ್ರಯತ್ನ ಕೇಂದ್ರ ಸರ್ಕಾರ ನಡೆಸುತ್ತಿದ್ದೆ. ಈ ರೈತ ಸಮಾವೇಶಕ್ಕೆ ಬರಲು ಪಂಜಾಬ್ ರೈತರನ್ನು ತಡೆ ಒಡ್ಡಿದ ಹರಿಯಾಣ ಸರ್ಕಾರದ ವಿರುದ್ಧ ಚುನಾವಣೆಯಲ್ಲಿ ರೈತರು ಬುದ್ದಿ ಕಲಿಸಬೇಕು ಎಂದು ರೈತರಿಗೆ ಕರೆ ನೀಡಲಾಯಿತು ಎಂದು ಹೇಳಿದ್ದಾರೆ.
ರೈತರ ಪ್ರಮುಖ ಬೇಡಿಕೆಗಳು
* ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಜಾರಿ ಮಾಡಬೇಕು.
* ರೈತರ ಸಂಪೂರ್ಣ ಸಾಲಮನ್ನಾ ಹಾಗೂ ಡಾ. ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು.
* ಬೆಳೆ ವಿಮೆ ಪದ್ಧತಿ ತಿದ್ದುಪಡಿ ಆಗಬೇಕು.
* 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎನ್ನುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications