Farmers protest: ಬೇಡಿಕೆ ಈಡೇರುವವರೆಗೆ ಕದಲುವುದಿಲ್ಲ ಎಂದು ರೈತರ ಪ್ರತಿಜ್ಞೆ, ದೆಹಲಿ ಗಡಿಯಲ್ಲಿ ಭದ್ರತೆ ಸಡಿಲ!
ನವದೆಹಲಿ , ಫೆಬ್ರವರಿ.25: ಪಂಜಾಬ್-ಹರಿಯಾಣ ಗಡಿಯಲ್ಲಿ ರೈತರ 'ದಿಲ್ಲಿ ಚಲೋ' ಮೆರವಣಿಗೆ ಮುಂದುವರೆದಿದ್ದು, ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೆ ಪ್ರತಿಭಟನೆ ನಡೆಸುವುದಾಗಿ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಮಾಹಿತಿ ನೀಡಿದ್ದಾರೆ. ದೇಶದಲ್ಲಿ ರೈತರಿಗೆ ಏನಾಗುತ್ತಿದೆ ಎಂಬುದರ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕು ಎಂದು ರೈತ ಮುಖಂಡ ಒತ್ತಾಯಿಸಿದ್ದಾರೆ.
ರೈತ ಮುಖಂಡರು ಇಂದು ಮೊಂಬತ್ತಿ ಮಾರ್ಚ್ ನಡೆಸಲಿದ್ದಾರೆ. ಫೆಬ್ರವರಿ 25 ರಂದು ರೈತರ ಸಮಸ್ಯೆಗಳ ಕುರಿತು ವಿಚಾರ ಸಂಕಿರಣಗಳು ನಡೆಯಲಿವೆ ಮತ್ತು ಫೆಬ್ರವರಿ 26 ರಂದು ವಿಶ್ವ ವಾಣಿಜ್ಯ ಸಂಸ್ಥೆ ಮತ್ತು ಕೇಂದ್ರದ ಪ್ರತಿಕೃತಿಗಳನ್ನು ದಹಿಸಲಾಗುವುದು. ಈ ಬಗ್ಗೆ ಎಸ್‌ಕೆಎಂ (ರಾಜಕೀಯೇತರ) ಮತ್ತು ಕೆಎಂಎಂನ ಹಲವಾರು ಸಭೆಗಳು ಮುಂದಿನ ಎರಡು ದಿನಗಳಲ್ಲಿ ನಡೆಯಲಿವೆ.

ಫೆಬ್ರವರಿ 29 ರವರೆಗೆ ರೈತರು ತಮ್ಮ 'ದಿಲ್ಲಿ ಚಲೋ' ಮೆರವಣಿಗೆಯನ್ನು ಸ್ಥಗಿತಗೊಳಿಸಿದ್ದಾರೆ. ಶಂಭು ಮತ್ತು ಖಾನೌರಿ ಗಡಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ನಡೆದ ಹೋರಾಟದ ವೇಳೆ ಹುತಾತ್ಮರಾದ ರೈತನ ಸಾವಿಗೆ ಸಂತಾಪ ಸೂಚಿಸಿ ಶನಿವಾರ ಪ್ರತಿಭಟನಾ ಸ್ಥಳದಲ್ಲಿ ಕ್ಯಾಂಡಲ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಇನ್ನು, ಫೆಬ್ರವರಿ 13 ರಂದು ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಭಾಗಶಃ ಮುಚ್ಚಲಾಗಿದ್ದ ಮಾಡಲಾದ ದೆಹಲಿ ಮತ್ತು ಹರಿಯಾಣ ನಡುವಿನ ಸಿಂಘು ಮತ್ತು ಟಿಕ್ರಿ ಗಡಿಗಳನ್ನು ಭಾಗಶಃ ಪುನಃ ತೆರೆಯುವ ಪ್ರಕ್ರಿಯೆಯನ್ನು ಅಧಿಕಾರಿಗಳು ಪ್ರಾರಂಭಿಸಿದ್ದಾರೆ. ಹೀಗಾಗಿ ಗಡಿಯಲ್ಲಿ ವಾಹನ ಸಂಚಾರ ನಡೆಯುತ್ತಿದೆ. ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.
ಕೇಂದ್ರ ಸರ್ಕಾರವು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಪ್ರತಿಭಟನೆ ಮುಂದುವರಿಯುತ್ತದೆ ಮತ್ತು ದಿಲ್ಲಿ ಚಲೋ ಮೆರವಣಿಗೆಯನ್ನು ಡಿಸೆಂಬರ್ 29 ರಂದು ಮುಂದುವರೆಸಲಾಗುವುದು ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಭಾನುವಾರ ಹೇಳಿದ್ದಾರೆ. ಅಲ್ಲಿಯವರೆಗೆ, ಪಂಜಾಬ್-ಹರಿಯಾಣ ಗಡಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
"ಇಂದು ಶಂಭು ಮತ್ತು ಖಾನೌರಿಯಲ್ಲಿ ಮೋರ್ಚಾಗಳ 13 ನೇ ದಿನವಾಗಿದೆ, ಇಂದು ನಾವು ವಿಶ್ವ ವ್ಯಾಪಾರ ಸಂಘಟನೆಯ ಬಗ್ಗೆ ಚರ್ಚೆ ನಡೆಸುವುದರಿಂದ ನಾವು ಎರಡೂ ಗಡಿಗಳಲ್ಲಿ ಸಮಾವೇಶವನ್ನು ನಡೆಸುತ್ತೇವೆ. ಕೃಷಿ ವಲಯವನ್ನು ಡಬ್ಲ್ಯುಟಿಒದಿಂದ ಹೊರತರಬೇಕು ಎಂದು ನಾವು ಒತ್ತಾಯಿಸಿದ್ದೇವೆ. ಸಂಜೆ ಸುದ್ದಿಗೋಷ್ಠಿ ನಡೆಸುತ್ತೇವೆ. ರೈತರೊಂದಿಗೆ ಏನೇ ಆಗಲಿ ಒಮ್ಮೆ ಮಾತನಾಡಲಿ ಎಂದು ಪ್ರಧಾನಿ ಮೋದಿಯವರನ್ನು ಒತ್ತಾಯಿಸುತ್ತಿದ್ದೇವೆ" ಎಂದಿದ್ದಾರೆ.

ಫೆಬ್ರವರಿ 21 ರಂದು ಖಾನೌರಿಯಲ್ಲಿ ನಡೆದ ಘರ್ಷಣೆಯಲ್ಲಿ 21 ವರ್ಷದ ಶುಭಕರನ್ ಎಂಬ ಯುವ ರೈತ ಮೃತಪಟ್ಟಿದ್ದಾರೆ. ಅವರ ಸಾವಿಗೆ ಕಾರಣರಾದವರ ವಿರುದ್ಧ ಎಫ್‌ಐಆರ್ ದಾಖಲಿಸಲು ಪಂಜಾಬ್ ಸರ್ಕಾರ ಆದೇಶಿಸಬೇಕು ಎಂದು ರೈತ ಮುಖಂಡರು ಹಠ ತೊಟ್ಟಿದ್ದು, ಅವರ ಅಂತ್ಯಕ್ರಿಯೆ ಇನ್ನೂ ನಡೆದಿಲ್ಲ.
ಇತ್ತ, ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಅವರು ಚರ್ಚೆಗೆ ಸರ್ಕಾರ ರೈತರ ಜೊತೆಗೆ ಮುಕ್ತ ಮಾತುಕತೆಗೆ ಸಿದ್ಧವಿದ್ದು, ಪರಿಹಾರವನ್ನು ಕಂಡುಕೊಳ್ಳಲು ಮಾತುಕತೆಗೆ ಒತ್ತಾಯಿಸಿದ್ದಾರೆ. ಏಕೆಂದರೆ ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರವೂ ಪ್ರತಿಭಟನೆ ಮುಂದುವರಿಯುವ ಸಾಧ್ಯತೆಯ ಬಗ್ಗೆ ರೈತರು ಸುಳಿವು ನೀಡಿದ್ದಾರೆ.












Click it and Unblock the Notifications