Nitin Nabin: ಬಿಜೆಪಿಗೆ ನೂತನ ಸಾರಥಿ, ನಿತಿನ್ ನಬಿನ್ ನಡೆದುಬಂದ ಹಾದಿ
ಭಾರತದ ರಾಜಕೀಯದಲ್ಲಿ 2014 ತನಕ ಒಂದು ಲೆಕ್ಕ, 2014 ಲೋಕಸಭೆ ಚುನಾವಣೆ ನಂತರ ಒಂದು ಲೆಕ್ಕ ಎನ್ನಬಹುದು. ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಒಕ್ಕೂಟ ಯಾವಾಗ ಭರ್ಜರಿ ಬಹುಮತ ಪಡೆದು ಗೆದ್ದು ಬಂದು ಅಧಿಕಾರ ಹಿಡಿದಿತ್ತೋ, ಅಲ್ಲಿಂದ ಮುಂದೆ ಭಾರಿ ದೊಡ್ಡ ಸಂಚಲನ ಸೃಷ್ಟಿಯಾಗಿತ್ತು. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸಾಲು ಸಾಲು ಸೋಲು ಕಾಣುತ್ತಾ ಬಂದವು. ಬಿಜೆಪಿ ಪ್ರತಿ ಚುನಾವಣೆಗೂ ಮತ್ತಷ್ಟು ಬಲಿಷ್ಠವಾಗುತ್ತಾ ಬಂದಿತ್ತು, ಹೀಗೆ ಸತತ 3 ಬಾರಿ ಲೋಕಸಭಾ ಚುನಾವಣೆ ಗೆದ್ದು ಬಿಜೆಪಿ ಅಧಿಕಾರ ನಡೆಸುತ್ತಿದೆ. ಇಂತಿಪ್ಪ ಬಿಜೆಪಿಗೆ ನೂತನ ಸಾರಥಿ ಆಗಮನವಾಗಿದ್ದು, ನಿತಿನ್ ನಬಿನ್ ಅವರ ರಾಜಕೀಯ ಜೀವನ ರೋಚಕವಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಆಗಿರುವ ನಿತಿನ್ ನಬಿನ್ ಈ ಹುದ್ದೆಯನ್ನು ಅಲಂಕರಿಸಲಿರುವ ಅತಿ ಚಿಕ್ಕ ವಯಸ್ಸಿನ ನಾಯಕ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ನಿತಿನ್ ನಬಿನ್ 26ನೇ ವಯಸ್ಸಿಗೆ ಶಾಸಕರಾಗಿ ಆಯ್ಕೆಯಾದವರು. ಅಲ್ಪ ಅವಧಿಯಲ್ಲಿಯೇ ಏಳಿಗೆ ಸಾಧಿಸಿ ರಾಷ್ಟ್ರೀಯ ನಾಯಕರ ಗಮನ ಸೆಳೆದು ಹಂತ ಹಂತವಾಗಿ ಮೇಲೆ ಬಂದರು. ಸುಮಾರು ಒಂದು ತಿಂಗಳ ಹಿಂದೆ, ಎಂದರೆ 2025 ಡಿಸೆಂಬರ್ 14ಕ್ಕೆ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು ಇವರನ್ನು. ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದಾರೆ.

ಆರ್‌ಎಸ್‌ಎಸ್ ಜೊತೆಗೆ ಉತ್ತಮ ಬಾಂಧವ್ಯ
ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ತಂದೆ ನಬಿನ್ ಕಿಶೋರ್ ಸಿನ್ಹಾ ಅವರು ಆರ್‌ಎಸ್‌ಎಸ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದವರು. ತಂದೆ ನಿಧನದ ನಂತರ 2006ರಲ್ಲಿ ಪಟ್ನಾ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಖಾಡ ಪ್ರವೇಶ ಮಾಡುವ ಮೂಲಕ, ರಾಜಕೀಯ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದರು. 26ನೇ ವಯಸ್ಸಿಗೆ ಶಾಸಕರಾಗಿ ಆಯ್ಕೆಯಾಗಿ ರಾಷ್ಟ್ರದ ಗಮನ ಸೆಳೆದಿದ್ದರು. ಆ ನಂತರ ನಿತಿನ್ ನಬಿನ್ ಅವರನ್ನು ಗುರುತಿಸಲು ಶುರು ಮಾಡಿದ ಬಿಜೆಪಿಯ ರಾಷ್ಟ್ರೀಯ ನಾಯಕರು, ಹಂತ ಹಂತವಾಗಿ ಉನ್ನತ ಹುದ್ದೆಗಳನ್ನು ನೀಡುತ್ತಾ ಬಂದರು.
ನಿತಿನ್ ನಬಿನ್ ಚುನಾವಣಾ ಸಾಧನೆಗಳು
2023 ನವೆಂಬರ್‌ನಲ್ಲಿ ನಡೆದ ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಸಹ ಉಸ್ತುವಾರಿಯಾಗಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ಸು ಕಂಡಿದ್ದರು. 2024ರ ಲೋಕಸಭಾ ಚುನಾವಣೆಯಲ್ಲೂ ನಿತಿನ್ ನಬಿನ್ ಅವರ ಸಾಧನೆ ದೊಡ್ಡದಾಗಿತ್ತು, ಛತ್ತೀಸ್‌ಗಢದ 11 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿಗೆ 10 ಸ್ಥಾನ ಸಿಗುವಲ್ಲಿ ನಿತಿನ್ ನಬಿನ್ ಕಾರ್ಯತಂತ್ರ ಫಲ ನೀಡಿತ್ತು. ಇದನ್ನು ಗಮನಿಸಿ ನಿತಿನ್ ನಬಿನ್ ಅವರನ್ನು ಕಳೆದ ತಿಂಗಳು ಎಂದರೆ 2025 ಡಿಸೆಂಬರ್ 14ಕ್ಕೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಇದೀಗ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ ಮಾಡಿ ಬಿಜೆಪಿ ನಾಯಕರು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ.












Click it and Unblock the Notifications