ಬಿಜೆಪಿ VS ಕಾಂಗ್ರೆಸ್: ಚುನಾವಣೆಯಲ್ಲಿ ಯಾರೂ ಬೇಡ ಎಂದ ಮತದಾರ!
ಇಂದು ಹೊರಬಿದ್ದ 4 ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಗೆಲುವನ್ನ ದಾಖಲಿಸಿದೆ. ಮಧ್ಯಪ್ರದೇಶ ರಾಜ್ಯದಲ್ಲಿ 160ಕ್ಕೂ ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿ ಅಧಿಕಾರ ಗದ್ದುಗೆಗೆ ಏರಲು ಸಿದ್ಧವಾಗಿದೆ. ರಾಜಸ್ಥಾನದಲ್ಲಿ 115 ಸ್ಥಾನ ಪಡೆದು ಛತ್ತೀಸ್‌ಗಢ ರಾಜ್ಯದಲ್ಲಿ 54 ಸ್ಥಾನ ಪಡೆದಿದೆ ಬಿಜೆಪಿ. ಹೀಗೆ 3 ರಾಜ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ ಬಿಜೆಪಿ. ಕಾಂಗ್ರೆಸ್ ತೆಲಂಗಾಣದಲ್ಲಿ ಗೆದ್ದು ಬೀಗಿದ್ದು, ಈ 4 ರಾಜ್ಯದಲ್ಲಿ ಯಾವ ಪಕ್ಷಕ್ಕೂ ವೋಟ್ ಹಾಕದಿರುವ ಮತದಾರರ ಸಂಖ್ಯೆ ಎಷ್ಟು ಗೊತ್ತಾ?
ಒಂದು ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಅಥವಾ ಯಾವುದೇ ಅಭ್ಯರ್ಥಿಗೂ ಮತವನ್ನ ಹಾಕದೇ ಇರುವವರು, ನೋಟಾ ಮತ ಚಲಾವಣೆ ಮಾಡಬಹುದು. ಹೀಗೆ ನೋಟಾ ಬಗ್ಗೆ ಈ ಹಿಂದೆ ಸಾಕಷ್ಟು ಜ್ಞಾನದ ಕೊರತೆ ಇತ್ತು. ಆದರೆ ಆಧುನಿಕ ಭಾರತದಲ್ಲಿ 'ನೋಟಾ'ಗೆ ಸಾಕಷ್ಟು ಮತದಾರರು ಒಲವು ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಕೂಡ ಸಾಕಷ್ಟು ಮತದಾರರು 'ನೋಟಾ'ಗೆ ವೋಟ್ ಹಾಕಿದ್ದರು. ಇದೀಗ 4 ರಾಜ್ಯ ಚುನಾವಣೆಯಲ್ಲಿ ನೋಟಾ ಪರ ಮತ ಚಲಾವಣೆ ಮಾಡಿರುವ ಮತದಾರರ ಸಂಖ್ಯೆ ಎಷ್ಟು ಗೊತ್ತಾ?

'ನೋಟಾ' ಮತದಾರರ ಸಂಪೂರ್ಣ ವಿವರ!
ಇಂದು ಹೊರಬಿದ್ದಿರುವ 4 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ 'ನೋಟಾ' ಅಬ್ಬರ ಜೋರಾಗಿದೆ. ಈಗ ಅಖಾಡದಲ್ಲಿ ಇದ್ದ ಎಲ್ಲ ಪಕ್ಷದ & ಸ್ವತಂತ್ರ ಅಭ್ಯರ್ಥಿಗಳನ್ನ ಮತದಾರರು ನೋಟಾ ಆಯ್ಕೆ ಮೂಲಕ ತಿರಸ್ಕರಿಸಿದ್ದಾರೆ. ಛತ್ತೀಸ್‌ಗಢ ರಾಜ್ಯದಲ್ಲಿ ಒಟ್ಟು ಶೇಕಡಾ 1.28 ರಷ್ಟು ಜನ 'ನೋಟಾ' ಪರವಾಗಿ ಮತ ಚಲಾವಣೆ ಮಾಡಿದ್ದಾರೆ. ಹಾಗೂ ಮಧ್ಯಪ್ರದೇಶ ರಾಜ್ಯದಲ್ಲಿ ಶೇಕಡಾ 0.99 ರಷ್ಟು ಮತದಾರರು, ರಾಜಸ್ಥಾನದಲ್ಲಿ ಶೇಕಡಾ 0.97 ರಷ್ಟು, ತೆಲಂಗಾಣ ರಾಜ್ಯದಲ್ಲಿ ಶೇಕಡಾ 0.73 ರಷ್ಟು ಮತದಾರರು ನೋಟಾ ಪರ ಮತ ಹಾಕಿದ್ದಾರೆ.
ಹೊಸ ಬದಲಾವಣೆಯತ್ತ ದೇಶ?
ಒಟ್ನಲ್ಲಿ ದೇಶದಲ್ಲಿ ಈಗ ನೋಟಾ ಮತ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ದೇಶ ನೋಟಾ ಮತದಾನದ ಬಗ್ಗೆ ಜಾಗೃತವಾಗುತ್ತಿದೆ ಎನ್ನುವ ಮಾತು ಕೂಡ ಕೇಳಿಬಂದಿದೆ. ಈ ಮೂಲಕ, ಮುಂಬರುವ ದಿನಗಳಲ್ಲಿ ಮತದಾನದಲ್ಲಿ ಮತ್ತಷ್ಟು ಸುಧಾರಣೆ ಸಾಧ್ಯ ಅಂತಾ ಹೇಳಬಹುದು. ಹಾಗೆ ಹಲವು ರಾಜ್ಯಗಳಲ್ಲಿ ಮತದಾನದ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಅದರಲ್ಲೂ ಉತ್ತರ ಭಾರತದ ರಾಜ್ಯಗಳಲ್ಲಿ, ಮತದಾನದ ಪ್ರಮಾಣ ಹೆಚ್ಚಾಗುತ್ತಿರುವುದು ಈಗ ಹೊಸ ಬದಲಾವಣೆಯ ಸಂಕೇತ ಎನ್ನಬಹುದು.












Click it and Unblock the Notifications