ಲಾಕ್‌ಡೌನ್: ಅಧ್ಯಯನದಲ್ಲಿ ಕೊನೆಗೂ ಬಹಿರಂಗವಾದ ಸತ್ಯಾಂಶ!
ಕೊರೊನಾ ಮೂರನೇ ಅಲೆ/ಓಮಿಕ್ರಾನ್ ಕಾಟದಿಂದ ದೇಶ ನಿಧಾನವಾಗಿ ಹೊರ ಬರುತ್ತಿದೆ. ಬಹುತೇಕ ಹೆಚ್ಚಿನ ರಾಜ್ಯಗಳು ಕೋವಿಡ್ ಮಾರ್ಗಸೂಚಿಯಲ್ಲಿದ್ದ ನಿರ್ಬಂಧವನ್ನು ಸಡಿಲಿಸುತ್ತಿದೆ. ಕಾಟಾಚಾರಕ್ಕೆ ಮಾತ್ರ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಲಾ,ಕಾಲೇಜನ್ನೂ ತೆರೆಯಲಾಗಿದೆ ಮತ್ತು ಜನಜೀವನ ಮತ್ತೆ ಹಳಿಗೆ ಬರುತ್ತಿದೆ. ಕೋವಿಡ್ ಮೊದಲನೇ ಮತ್ತು ಎರಡನೇ ಅಲೆಯ ತೀವ್ರತೆಯ ವೇಳೆ ವಿಧಿಸಲಾಗಿದ್ದ ದೇಶವ್ಯಾಪಿ/ರಾಜ್ಯವ್ಯಾಪಿ ಲಾಕ್ಡೌನ್ ಗಳು ಉಪಯುಕ್ತವಾಗಿತ್ತೇ? ಈ ಬಗ್ಗೆ ಹಲವು ವಿಜ್ಞಾನಿಗಳು ಅಧ್ಯಯನವನ್ನು ನಡೆಸಿದ ಸಮೀಕ್ಷೆಯ ಅಂಶ ಹೊರಬಿದ್ದಿದೆ.
ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಇದರ ಪರಿಣಾಮ ಹೇಗೆ ಇರಲಿದೆ ಎನ್ನುವುದನ್ನು ಅರಿಯದ ಮತ್ತು ವಿಶ್ವದ ಇತರ ರಾಷ್ಟ್ರಗಳು ಅನುಸರಿಸಿದ ಲಾಕ್‌ಡೌನ್ ಪದ್ದತಿಯನ್ನೂ ಭಾರತದಲ್ಲೂ ವಿಧಿಸಲಾಗಿತ್ತು. ಪ್ರಧಾನಿಗಳೇ ದೇಶವನ್ನು ಉದ್ದೇಶಿಸಿ ಲಾಕ್‌ಡೌನ್ ಅನ್ನು ಘೋಷಿಸಿದ್ದರು.
ಇದಾದ ನಂತರವೂ ಲಾಕ್‌ಡೌನ್ ಘೋಷಣೆ ಮಾಡಿದ್ದರೂ, ಇದನ್ನು ವಿಧಿಸುವ ಅಥವಾ ತೆಗೆದುಹಾಕುವ ನಿರ್ಧಾರವನ್ನು ಆಯಾಯ ರಾಜ್ಯಗಳಿಗೆ ಬಿಡಲಾಗಿತ್ತು. ಇವೆಲ್ಲದರ ನಡುವೆ ಲಾಕ್‌ಡೌನ್ ವಿಧಿಸುವ ವಿಚಾರದಲ್ಲಿ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ಎದುರಾಗಿತ್ತು.

ಬೊಮ್ಮಾಯಿ ಸರಕಾರ ಎಲ್ಲಾ ಕಠಿಣ ನಿಯಮಗಳಲ್ಲಿ ಸಡಿಲಿಕೆ
ಕರ್ನಾಟಕದಲ್ಲಿ ಇತ್ತೀಚೆಗೆ ವಿಧಿಸಲಾಗಿದ್ದ ವೀಕೆಂಡ್ ಕರ್ಫ್ಯೂ/ನೈಟ್ ಕರ್ಫ್ಯೂವಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆಡಳಿತ ಪಕ್ಷದ ಸದಸ್ಯರೇ ಕರ್ಫ್ಯೂಗೆ ವಿರೋಧವನ್ನು ವ್ಯಕ್ತ ಪಡಿಸಿದ್ದರು. ಇದನ್ನೆಲ್ಲಾ ಅವಲೋಕಿಸಿದ ಬಸವರಾಜ ಬೊಮ್ಮಾಯಿ ಸರಕಾರ, ಕೆಲವೊಂದು ನಿರ್ಬಂಧಗಳನ್ನು ಮುಂದುವರಿಸಿ ಮಿಕ್ಕ ಎಲ್ಲಾ ಕಠಿಣ ನಿಯಮಗಳಲ್ಲಿ ಸಡಿಲಿಕೆಯನ್ನು ಮಾಡಿದ್ದರು. ಲಾಕ್‌ಡೌನ್ ಎನ್ನುವುದು ಸರಿಯಾದ ಮಾರ್ಗವಲ್ಲ ಎಂದು ಪ್ರಧಾನಿ ಮೋದಿ ಪದೇಪದೇ ಇತ್ತೀಚಿನ ದಿನಗಳಲ್ಲಿ ಪುನರುಚ್ಚಿಸಿದ್ದರು. ಇದು ಸರಿಯಾದ ಮಾರ್ಗ ಅಲ್ಲ ಎಂದಿದ್ದರು, ಈಗ ಅಧ್ಯಯನ ವರದಿಯೂ ಅದನ್ನೇ ಹೇಳುತ್ತಿದೆ.

ಕೋವಿಡ್ ವಿಚಾರದಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ಪರಿಣಾಮಕಾರಿಯಲ್ಲ
ಕೋವಿಡ್ ವಿಚಾರದಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ಪರಿಣಾಮಕಾರಿಯಲ್ಲ, ಇದರಿಂದ ಸಾವಿನ ಪ್ರಮಾಣ ಕಮ್ಮಿಯಾಗಿಲ್ಲ ಎನ್ನುವ ಅಂಶ ಅಧ್ಯಯನದ ವರದಿಯಲ್ಲಿ ಉಲ್ಲೇಖವಾಗಿದೆ. ಇನ್ನು ಅಮೆರಿಕಾ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಲಾಕ್‌ಡೌನ್ ಏನೇನೂ ಉಪಯೋಗವಾಗಿಲ್ಲ. ಇದರ ಜೊತೆಗೆ, ವಿಶ್ವದ ಆರ್ಥಿಕತೆಯ ಮೇಲು ಇದು ಭಯಂಕರ ಪರಿಣಾಮವನ್ನು ಬೀರಿತ್ತು. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಅಧ್ಯಯನದ ಪ್ರಕಾರ, ಕೋವಿಡ್ ಆರಂಭದ ದಿನಗಳಲ್ಲೇ ಲಾಕ್‌ಡೌನ್‌ನಿಂದ ಸಾವಿನ ಪ್ರಮಾಣ ಕಮ್ಮಿಯಾಗಿದ್ದು ಕೇವಲ ಶೇ. 0.2.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು
"ಲಾಕ್‌ಡೌನ್, ಶಾಲೆಯನ್ನು ಮುಚ್ಚುವುದು, ಅಂತರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧ, ಹೆಚ್ಚಿನ ಪ್ರಮಾಣದಲ್ಲಿ ಜನ ಸೇರುವುದನ್ನು ತಡೆಯುವುದರಿಂದ, ಸಾವಿನ ಪ್ರಮಾಣದ ಇಳಿಕೆಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಇಂತಹ ತಪ್ಪು ನಿರ್ಧಾಗಳಿಂದ ನಿರುದ್ಯೋಗ, ಆರ್ಥಿಕತೆ ಪಾತಾಳಕ್ಕೆ ಇಳಿಯುವುದು, ಶಿಕ್ಷಣ ಕ್ಷೇತ್ರದಲ್ಲಿ ಹಿನ್ನಡೆ, ಕೌಟುಂಬಿಕ ಸಮಸ್ಯೆಗಳ ಹೆಚ್ಚಳ ಮುಂತಾದ ವಿದ್ಯಮಾನಗಳಿಗೆ ಆಸ್ಪದ ಸಿಕ್ಕಿದಂತಾಗಿದೆಯೇ ಹೊರತು ಬೇರೇನೂ ಉಪಯೋಗವಾಗಿಲ್ಲ. ರಾಜಕಾರಣಿಗಳು ಪರಿಸ್ಥಿತಿಯ ಲಾಭವನ್ನು ಪಡೆಯುವಂತಾಯಿತು"ಎಂದು ಅಧ್ಯಯನ ನಡೆಸಿದ ಸ್ಟೀವ್ ಹೆಂಕ್, ಜೊನಾಸ್ ಹೆಬ್ರಿ, ಲಾರ್ಸ್ ಜೊನಾಂಗ್ ಅಭಿಪ್ರಾಯ ಪಟ್ಟಿದ್ದಾರೆ.

ಪ್ರಧಾನಿಗಳೇ ಲಾಕ್‌ಡೌನ್ ಆಯ್ಕೆಯನ್ನು ಕೊನೆಯ ಅಸ್ತ್ರವನ್ನಾಗಿ ಇಟ್ಟುಕೊಳ್ಳಿ
"ಒಟ್ಟಾರೆಯಾಗಿ ನಮ್ಮ ಅಧ್ಯಯನದ ಅಂಶದ ಪ್ರಕಾರ ಲಾಕ್‌ಡೌನ್ ಮರಣದ ಪ್ರಮಾಣವನ್ನು ಎಳ್ಳಷ್ಟೂ ಸಹಕಾರಿಯಾಗಿಲ್ಲ, ಅದರಲ್ಲೂ ಇದು ಕೋವಿಡ್ ಮೊದಲನೇ ಅಲೆಯಲ್ಲಂತೂ ಏನೂ ಉಪಯೋಗಕ್ಕೆ ಬಂದಿಲ್ಲ"ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಎರಡನೇ ಲಾಕ್‌ಡೌನ್ ನಂತರ ಖುದ್ದು ಪ್ರಧಾನಿಗಳೇ ಈ ಆಯ್ಕೆಯನ್ನು ಕೊನೆಯ ಅಸ್ತ್ರವನ್ನಾಗಿ ಇಟ್ಟುಕೊಳ್ಳಿ, ಜನಜೀವನಕ್ಕೆ ಮತ್ತು ಆರ್ಥಿಕತೆಗೆ ತೊಂದರೆಯಾಗದಿರಲಿ ಎಂದು ಮೋದಿ ಅಭಿಪ್ರಾಯ ಪಟ್ಟಿದ್ದರು.












Click it and Unblock the Notifications