ಗುಜರಾತ್ ಚುನಾವಣೆಯ ಎಕ್ಸಿಟ್ ಪೋಲಿಗೂ ಫಲಿತಾಂಶಕ್ಕೂ ಸಂಬಂಧನೇ ಇರಲಿಲ್ಲ!
ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನದ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಚುನಾವಣಾ ಆಯೋಗದ ಆದೇಶ ಇದ್ದಿದ್ದರಿಂದ, ವೋಟಿಂಗ್ ಪ್ರಕ್ರಿಯೆ ಮುಕ್ತಾಯಗೊಂಡ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆಗಳು ಹೊರಬೀಳುತ್ತಿವೆ.
ಇತ್ತೀಚಿನ ದಿನಗಳಲ್ಲಿ ಚುನಾವಣಾತ್ತೋರ ಸಮೀಕ್ಷೆಗಳು ಫಲಿತಾಂಶದಷ್ಟೇ ಜನರನ್ನು ಕುತೂಹಲದಿಂದ ಕಾಯುವಂತೆ ಮಾಡಿದೆ. ಕಳೆದ ವರ್ಷ ಅಂದರೆ 2022ರಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆದು, ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡಿತ್ತು.

ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಬಿಜೆಪಿಗೆ ಭಾರೀ ಪೈಪೋಟಿಯನ್ನು ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಬಿಜೆಪಿಯಲ್ಲಿ ಗದ್ದುಗೆಯನ್ನು ಉಳಿಸಿಕೊಂಡಿತ್ತು.
182ಸ್ಥಾನಗಳನ್ನು ಹೊಂದಿರುವ ಅಸೆಂಬ್ಲಿಯಲ್ಲಿ ಅಧಿಕಾರಕ್ಕೇರಲು 92ಸ್ಥಾನದ ಅವಶ್ಯಕತೆಯಿದೆ. ಎಲ್ಲಾ ವಾಹಿನಿಗಳು ನಡೆಸಿದ್ದ ಸಮೀಕ್ಷೆಯಲ್ಲಿ ಬಿಜೆಪಿ ಮತ್ತೆ ಸರಕಾರ ರಚಿಸುತ್ತದೆ ಎಂದೇನೋ ಹೇಳಿತ್ತು, ಆದರೆ, ಎಕ್ಸಿಟ್ ಪೋಲ್ ನಲ್ಲಿ ಬಂದ ಫಲಿತಾಂಶಕ್ಕೂ ನೈಜ ಫಲಿತಾಂಶಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ಬಿಜೆಪಿ 156, ಕಾಂಗ್ರೆಸ್ 17, ಆಪ್ ನಾಲ್ಕು ಮತ್ತು ಇತರರು ನಾಲ್ಕು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದವು.
ಆಜ್ ತಕ್ - ಆಕ್ಸಿಸ್ ಮೈ ಇಂಡಿಯಾ, ನ್ಯೂಸ್ 24 - ಟುಡೇಸ್ ಚಾಣಕ್ಯ ಹೇಳಿದ್ದ ಸಮೀಕ್ಷೆ ಮಾತ್ರ ಫಲಿತಾಂಶಕ್ಕೆ ಹತ್ತಿರವಾಗಿತ್ತು. ಆಜ್ ತಕ್ - ಆಕ್ಸಿಸ್ ಮೈ ಇಂಡಿಯಾ, ಬಿಜೆಪಿಗೆ 129-151, ಕಾಂಗ್ರೆಸ್ಸಿಗೆ 16-30, ಆಪ್ ಗೆ 9-21, ಇತರರು 2-6 ಎನ್ನುವ ಸಮೀಕ್ಷೆಯನ್ನು ನೀಡಿತ್ತು. ಇನ್ನು, ಟುಡೇಸ್ ಚಾಣಕ್ಯ ತಂಡವು ಬಿಜೆಪಿಗೆ 150, ಕಾಂಗ್ರೆಸ್ಸಿಗೆ 19, ಆಪ್ ಗೆ 11, ಇತರರಿಗೆ ಎರಡು ಸ್ಥಾನ ಸಿಗಬಹುದು ಎಂದು ಹೇಳಿತ್ತು.
ಇಂಡಿಯಾ ಟಿವಿ - ಮಾಟ್ರೀಜ್ ನಡೆಸಿದ್ದ ಮತಗಟ್ಟೆ ಸಮೀಕ್ಷೆ
ಇಂಡಿಯಾ ಟಿವಿ - ಮಾಟ್ರೀಜ್ ನಡೆಸಿದ್ದ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಗೆ 104-119, ಕಾಂಗ್ರೆಸ್ಸಿಗೆ 53-68, ಆಪ್ ಗೆ 0-6 ಮತ್ತು ಇತರರು 0-3 ಎಂದು ಹೇಳಿತ್ತು. ಅದೇ ರೀತಿ, ಎಬಿಪಿ - ಸಿವೋಟರ್ ಬಿಜೆಪಿಗೆ 128-140, ಕಾಂಗ್ರೆಸ್ಸಿಗೆ 31-43, ಆಪ್ ಗೆ 3-11, ಇತರರಿಗೆ 2-6 ಸ್ಥಾನ ಸಿಗಬಹುದು ಎಂದು ತನ್ನ ಸರ್ವೇಯಲ್ಲಿ ಹೇಳಿದ್ದವು.
ಟಿವಿ 9 ಗುಜರಾತಿ ನಡೆಸಿದ್ದ ಸಮೀಕ್ಷೆ
ಟಿವಿ 9 ಗುಜರಾತಿ ನಡೆಸಿದ್ದ ಸಮೀಕ್ಷೆಯಲ್ಲಿ ಬಿಜೆಪಿಗೆ 125-130, ಕಾಂಗ್ರೆಸ್ಸಿಗೆ 40-50, ಆಪ್ ಗೆ 3-5, ಇತರರಿಗೆ 3-7 ಸ್ಥಾನ ಸಿಗಬಹುದು ಎಂದು ಹೇಳಿತ್ತು. ಜೀನ್ಯೂಸ್ - ಬಾರ್ಕ್ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ 110-125, ಕಾಂಗ್ರೆಸ್ 45-60, ಆಪ್ 1-5, ಇತರರು 0-4 ಎಂದು ಅಂದಾಜಿಸಿತ್ತು. ಕೆಲವೊಂದು ಸಮೀಕ್ಷೆಗಳು ನೈಜ ಫಲಿತಾಂಶದಿಂದ ಬಹಳ ದೂರ ಉಳಿದಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.












Click it and Unblock the Notifications