Exit Poll Result 2024: ಕಾಂಗ್ರೆಸ್‌ಗೆ ಡಬಲ್ ಡಿಜಿಟ್ ಅಂದ್ರು ಸಿಎಂ
ಹೈದರಾಬಾದ್, ಜೂನ್ 02: ಲೋಕಸಭೆ ಚುನಾವಣೆ 2024ರ ಫಲಿತಾಂಶ ಜೂನ್ 4ರ ಮಂಗಳವಾರ ಘೋಷಣೆಯಾಗಲಿದೆ. ವಿವಿಧ ಚುನಾವಣೋತ್ತರ ಸಮೀಕ್ಷೆಗಳು ಶನಿವಾರ ಪ್ರಕಟಗೊಂಡಿವೆ. ಈ ಬಾರಿಯ ಚುನಾವಣೆಯಲ್ಲಿ ಕುತೂಹಲ ಕೆರಳಿಸಿರುವ ರಾಜ್ಯಗಳಲ್ಲಿ ತೆಲಂಗಾಣ ಸಹ ಒಂದು.
ತೆಲಂಗಾಣದಲ್ಲಿ ಕಾಂಗ್ರೆಸ್ ಆಡಳಿತ ಪಕ್ಷ. ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕ, ತೆಲಂಗಾಣ ಪ್ರಮುಖವಾದವುಗಳು. ಚುನಾವಣೋತ್ತರ ಸಮೀಕ್ಷೆಗಳು ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿ ಸೀಟು ಗೆಲ್ಲುವುದಿಲ್ಲ ಎಂದು ಅಂದಾಜಿಸಿವೆ.

ರಾಜ್ಯದಲ್ಲಿರುವ ಲೋಕಸಭಾ ಸೀಟುಗಳ ಸಂಖ್ಯೆ 17. ವಿವಿಧ ಎಕ್ಸಿಟ್ ಪೋಲ್ ಫಲಿತಾಂಶಗಳ ಪ್ರಕಾರ ತೆಲಂಗಾಣ ರಾಜ್ಯದಲ್ಲಿ ಇಂಡಿಯಾ ಮೈತ್ರಿಕೂಟ 7-9 ಸ್ಥಾನಗಳಿಸಬಹುದು ಎಂದು ಅಂದಾಜಿಸಲಾಗಿದೆ. ಎನ್‌ಡಿಎ ಮೈತ್ರಿಕೂಟ 7-10 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ.
ಡಬಲ್ ಡಿಜಿಟ್ ದಾಟತ್ತೆ: ಚುನಾವಣೋತ್ತರ ಸಮೀಕ್ಷೆಗಳ ಕುರಿತು ಪಿಟಿಐ ಜೊತೆ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, "ಕಾಂಗ್ರೆಸ್ ಪಕ್ಷ 17 ಸ್ಥಾನಗಳ ಪೈಕಿ ಕನಿಷ್ಠ 10 ಸ್ಥಾನಗಳಲ್ಲಿ ಜಯಗಳಿಸಲಿದೆ, ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆ ಮಾಡಲಿದೆ" ಎಂದರು.
"ರಾಜ್ಯದಲ್ಲಿ ಬಿಜೆಪಿ 4-5 ಸೀಟುಗಳನ್ನು ಗೆಲ್ಲಲಿದೆ. ಬಿಆರ್‌ಎಸ್ ಒಂದಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ. ಎಐಎಂಐಎಂ ಹೈದರಾಬಾದ್ ಅನ್ನು ಮರಳಿ ಪಡೆಯಲಿದೆ. ಬಿಜೆಪಿ 240ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ. ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ತೆಲಂಗಾಣ ರಾಜ್ಯಕ್ಕೆ 10 ವರ್ಷದಲ್ಲಿ ಯಾವ ಕೊಡುಗೆಯೂ ನೀಡಿಲ್ಲ. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ತೆಲಂಗಾಣಕ್ಕೆ ಪ್ರಮುಖ ಖಾತೆಗಳನ್ನು ಪಡೆಯಲು ಪ್ರಯತ್ನ ನಡೆಸಲಾಗುತ್ತದೆ" ಎಂದು ಹೇಳಿದರು.
ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳಿಗೆ ಮೇ 13ರಂದು ಮತದಾನ ನಡೆದಿತ್ತು. 2019ರಲ್ಲಿ ಬಿಜೆಪಿ 4, ಕಾಂಗ್ರೆಸ್ 3, ಟಿಆರ್‌ಎಸ್ 9 ಮತ್ತು ಎಐಎಂಐಎಂ 1 ಸ್ಥಾನದಲ್ಲಿ ಜಯಗಳಿಸಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಆದ್ದರಿಂದ ಪಕ್ಷ ಹೆಚ್ಚು ಸೀಟು ಗೆಲ್ಲಬಹುದು ಎಂಬುದು ಲೆಕ್ಕಾಚಾರವಾಗಿದೆ.
ಈ ಬಾರಿ ಇಂಡಿಯಾ ಮೈತ್ರಿಕೂಟ 7-9, ಎನ್‌ಡಿಎ ಮೈತ್ರಿಕೂಟ 7-9, ಇತರರು 1 ಸ್ಥಾನ ಗೆಲ್ಲಬಹುದು ಎಂದು ABP-C Voter ಸಮೀಕ್ಷೆ ಅಂದಾಜಿಸಿದೆ. Republic PMARQ ಸಮೀಕ್ಷೆ ಇಂಡಿಯಾ ಮೈತ್ರಿಕೂಟ 8, ಎನ್‌ಡಿಎ 6, ಇತರರು 3 ಕ್ಷೇತ್ರ ಗೆಲ್ಲಲಿದ್ದಾರೆ ಎಂದು ಹೇಳಿದೆ.
ಟುಡೇಸ್ Chanakya ಪ್ರಕಾರ ರಾಜ್ಯದಲ್ಲಿ ಇಂಡಿಯಾ 5, ಎನ್‌ಡಿಎ 12 ಮತ್ತು ಇತರರು 0 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್ ನಾಯಕರು ಈ ಫಲಿತಾಂಶವನ್ನು ಒಪ್ಪುತ್ತಿಲ್ಲ. ಕಾಂಗ್ರೆಸ್‌ಗೆ ಡಬಲ್ ಡಿಜಿಟ್ ತಲುಪಲಿದೆ ಎಂದು ವಿಶ್ವಾಸದಲ್ಲಿದ್ದಾರೆ.
ತೆಲಂಗಾಣ ರಾಜ್ಯದಲ್ಲಿ ಹೈದರಾಬಾದ್ ಕ್ಷೇತ್ರದ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಪ್ರತಿನಿಧಿಸುವ ಕ್ಷೇತ್ರವಿದು. ಹಾಲಿ ಸಂಸದರು ಸಹ ಅವರೇ. ಬಿಜೆಪಿ ಒವೈಸಿಗೆ ಎದುರಾಳಿಯಾಗಿ ಕೆ. ಮಾಧವಿ ಲತಾ ಅವರನ್ನು ಕಣಕ್ಕಿಳಿಸಿದೆ.
ಕೆ. ಮಾಧವಿ ಲತಾ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ನಡುವೆ ಚುನಾವಣೆಯಲ್ಲಿ ತೀವ್ರ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಉಭಯ ಅಭ್ಯರ್ಥಿಗಳು ಬಿರುಸಿನಿಂದ ಪ್ರಚಾರವನ್ನು ನಡೆಸಿದ್ದರು. ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಮಾಧವಿ ಲತಾ ಹಿಂದುತ್ವವನ್ನು ಮುಂದಿಟ್ಟುಕೊಂಡು ಮತ ಕೇಳಿದ್ದಾರೆ.
ಹೈದರಾಬಾದ್ ಕ್ಷೇತ್ರ ಎಐಎಂಐಎಂ ಭದ್ರಕೋಟೆ ಎಂದರೂ ತಪ್ಪಿಲ್ಲ. ಅಸಾದುದ್ದೀನ್ ಒವೈಸಿ ಹಾಲಿ ಸಂಸದರು ಮತ್ತು 2004ರಿಂದ 4 ಬಾರಿ ಅವರು ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ. ಅವರ ತಂದೆ ಸುಲ್ತಾನ್ ಸಲಾವುದ್ದೀನ್ ಓವೈಸಿ 6 ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಇಂತಹ ಕ್ಷೇತ್ರದಲ್ಲಿ ಬಿಜೆಪಿ ಕೆ. ಮಾಧವಿ ಲತಾ ಅವರನ್ನು ಕಣಕ್ಕಿಳಿಸಿದ್ದು, ಇದು ಅವರ ಮೊದಲ ಚುನಾವಣೆ.











Click it and Unblock the Notifications