K Kavitha: ಬಿಆರ್‌ಎಸ್ ನಾಯಕಿ ಕೆ ಕವಿತಾಗೆ ಏಪ್ರಿಲ್ 9 ರವರೆಗೆ ನ್ಯಾಯಾಂಗ ಬಂಧನ
ನವದೆಹಲಿ , ಮಾರ್ಚ್. 26: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಜಾರಿ ನಿರ್ದೇಶನಾಲಯದ (ಇಡಿ) ವಶದಲ್ಲಿರುವ ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರನ್ನು ಮಾರ್ಚ್ 26 ರಂದು ದೆಹಲಿ ನ್ಯಾಯಾಲಯವು ಏಪ್ರಿಲ್ 9 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ದೆಹಲಿ ಅಬಕಾರಿ ನೀತಿ 2021-22 ಪ್ರಕರಣದ ಅಕ್ರಮ ಹಣ ವರ್ಗಾವಣೆ ಆರೋಪದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಕಸ್ಟಡಿ ವಿಚಾರಣೆ ಕೊನೆಯಾಗಿದ್ದು, ದೆಹಲಿ ನ್ಯಾಯಾಲಯವು ಭಾರತ್ ರಾಷ್ಟ್ರ ಸಮಿತಿ ನಾಯಕಿ ಮತ್ತು ತೆಲಂಗಾಣ ಶಾಸಕಿ ಕೆ ಕವಿತಾ ಅವರನ್ನು ಏಪ್ರಿಲ್ 9 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಅಬಕಾರಿ ನೀತಿಯನ್ನು ಈಗ ರದ್ದುಗೊಳಿಸಲಾಗಿದೆ.

ಬಿಆರ್‌ಎಸ್ ನಾಯಕಿ ಕವಿತಾ ತುಂಬಾ ಪ್ರಭಾವಿ ಮತ್ತು ಜಾಮೀನಿನ ಮೇಲೆ ಬಿಡುಗಡೆಯಾದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಮತ್ತು ಸಾಕ್ಷ್ಯವನ್ನು ಹಾಳುಮಾಡಬಹುದು ಎಂದು ಜಾರಿ ನಿರ್ದೇಶನಾಲಯ ನ್ಯಾಯಲಯದ ಮುಂದೆ ಹೇಳಿದೆ. ಇಡಿ ಮನವಿಯನ್ನು ಪುರಸ್ಕರಿಸಿದ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಕವಿತಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ (46) ಅವರನ್ನು ಮಾರ್ಚ್ 15 ರ ಸಂಜೆ ಹೈದರಾಬಾದ್ ನಿವಾಸದಿಂದ ಇಡಿ ಬಂಧಿಸಿದೆ. ಮಾರ್ಚ್ 16 ರಂದು ಅವರನ್ನುನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮಾರ್ಚ್ 23 ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಲಾಯಿತು. ಶನಿವಾರ, ನ್ಯಾಯಾಧೀಶರು ಆಕೆಯ ಇಡಿ ಕಸ್ಟಡಿಯನ್ನು ಮಂಗಳವಾರದವರೆಗೆ ವಿಸ್ತರಿಸಿದ್ದರು.

ಹಿರಿಯ ವಕೀಲ ವಿಕ್ರಮ್ ಚೌಧರಿ ಮತ್ತು ವಕೀಲರಾದ ನಿತೇಶ್ ರಾಣಾ ಮತ್ತು ದೀಪಕ್ ನಗರ್ ಅವರನ್ನೊಳಗೊಂಡ ಕವಿತಾ ಅವರ ಕಾನೂನು ತಂಡವು ಆಕೆಯ 16 ವರ್ಷದ ಮಗನ ಶಾಲಾ ಪರೀಕ್ಷೆಯನ್ನು ಉಲ್ಲೇಖಿಸಿ ಮಧ್ಯಂತರ ಜಾಮೀನು ಅರ್ಜಿಯನ್ನು ಸಲ್ಲಿಸಿತು. ಸಾಮಾನ್ಯ ಜಾಮೀನು ಅರ್ಜಿ ಈಗಾಗಲೇ ನ್ಯಾಯಾಧೀಶರ ಮುಂದೆ ಬಾಕಿ ಇದೆ.
ಇಡಿ ಪರ ಹಾಜರಾದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಜೊಹೆಬ್ ಹೊಸೈನ್ ಅವರು ಉತ್ತರವನ್ನು ಸಲ್ಲಿಸಲು ಸಮಯ ಕೋರಿದ ನಂತರ ವಿಶೇಷ ನ್ಯಾಯಾಲಯವು ಮಧ್ಯಂತರ ಜಾಮೀನು ಅರ್ಜಿಯನ್ನು ಏಪ್ರಿಲ್ 1 ರಂದು ವಿಚಾರಣೆಗೆ ಪಟ್ಟಿ ಮಾಡಿದೆ. ಆರಂಭದಲ್ಲಿ ಕವಿತಾ ಅವರು ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಆದರೆ ಮಾರ್ಚ್ 22 ರಂದು ಅವರ ಕೋರಿಕೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿ, ಮೊದಲು ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಲು ಶಾಸಕಕಿಗೆ ಸೂಚಿಸಿತ್ತು.
ಕವಿತಾ ಒಬ್ಬ ರಾಜಕೀಯ ವ್ಯಕ್ತಿಯಾಗಿರುವುದರಿಂದ ಅಥವಾ ನೇರವಾಗಿ ಉನ್ನತ ನ್ಯಾಯಾಲಯಕ್ಕೆ ಬರಲು ಶಕ್ತಳಾಗಿರುವುದರಿಂದ ಆಕೆಯ ಜಾಮೀನು ಅರ್ಜಿಯನ್ನು ನೇರವಾಗಿ ಆಲಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನವೆಂಬರ್ 2023 ರಲ್ಲಿ ಇಡಿ ಸಲ್ಲಿಸಿದ ಆರು ಚಾರ್ಜ್ ಶೀಟ್‌ಗಳಲ್ಲಿ ಯಾವುದೇ ಆರೋಪಿ ಎಂದು ಹೆಸರಿಸದಿದ್ದರೂ, ನ್ಯಾಯಾಲಯದ ದಾಖಲೆಗಳಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮಗಳಲ್ಲಿ ಕವಿತಾ ಅವರನ್ನು ಪ್ರಮುಖ ವ್ಯಕ್ತಿ ಎಂದು ಉಲ್ಲೇಖಿಸಿದೆ.
ಕವಿತಾ ಅವರು ದೆಹಲಿ ಅಬಕಾರಿ ನೀತಿಯ ಅಡಿಯಲ್ಲಿ ಒಂಬತ್ತು ಚಿಲ್ಲರೆ ವಲಯಗಳನ್ನು ಪಡೆಯುವ ಬದಲು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರಿಗೆ 100 ಕೋಟಿ ಕಿಕ್‌ಬ್ಯಾಕ್ ನೀಡಿದ್ದಾರೆ ಎಂಬ ಆರೋಪವಿದೆ. ಇದಲ್ಲದೆ ಅವರ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆ (CBI) ಕೂಡ ಕಣ್ಣಿಟ್ಟಿದೆ.












Click it and Unblock the Notifications