ಆಂಧ್ರದಲ್ಲಿ ಮತ್ತೊಂದು ಇವಿ ಬೈಕ್ ಬ್ಯಾಟರಿ ಸ್ಫೋಟ: ವೃದ್ಧ ಸಾವು, ಪತ್ನಿ ಗಂಭೀರ
ಅಮರಾವತಿ, ಏಪ್ರಿಲ್ 24: ಮೂರು ದಿನಗಳ ಹಿಂದೆ ನೆರೆಯ ತೆಲಂಗಾಣದ ನಿಜಾಮಾಬಾದ್ ಪಟ್ಟಣದಲ್ಲಿ ವಿದ್ಯುತ್ ವಾಹನದ ಬ್ಯಾಟರಿ ಸ್ಫೋಟಗೊಂಡು 80 ವರ್ಷದ ವ್ಯಕ್ತಿ ಸಾವನ್ನಪ್ಪಿದ ಘಟನೆ ಇನ್ನೂ ಮರೆಯಾಗಿಲ್ಲ. ಅದಾಗಲೇ ಮತ್ತೊಂದು ಇವಿ ಬೈಕ್ ಬ್ಯಾಟರಿ ಸ್ಫೋಟ ಘಟನೆ ನಡೆದಿದ್ದು ಜನರನ್ನು ಬೆಚ್ಚಿ ಬೀಳಿಸಿದೆ.
ಮಲಗುವ ಕೋಣೆಯಲ್ಲಿ ಹೊಸ ಎಲೆಕ್ಟ್ರಿಕ್ ಬೈಕ್‌ನ ಬ್ಯಾಟರಿ ಸ್ಫೋಟಗೊಂಡು 40 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ವಿಜಯವಾಡ ನಗರದಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ. ಅವರ ಪತ್ನಿ ಸುಟ್ಟಗಾಯಗಳಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಜೊತೆಗೆ ಅವರ ಇಬ್ಬರು ಮಕ್ಕಳು ಸಹ ಉಸಿರುಕಟ್ಟುವಿಕೆಯಿಂದ ಬಳಲುತ್ತಿದ್ದು ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಸೇರಿಸಿದ್ದಾರೆ.
ಇವಿ ಬೈಕ್ ಬ್ಯಾಟರಿ ಸ್ಫೋಟಗೊಂಡ ಘಟನೆ ಇದೇ ಮೊದಲಲ್ಲ ಇತ್ತೀಚೆಗೆ ಮಹಾರಾಷ್ಟ್ರ ಮತ್ತು ತಮಿಳುನಾಡಿನಂತಹ ಇತರ ರಾಜ್ಯಗಳಿಂದ ಇದೇ ರೀತಿಯ ಘಟನೆಗಳು ವರದಿಯಾಗಿದ್ದವು.

ಸ್ವಯಂ ಉದ್ಯೋಗಿ ಡಿಟಿಪಿ ಕೆಲಸಗಾರನಾಗಿದ್ದ ಸಂತ್ರಸ್ತ ಕೆ ಶಿವಕುಮಾರ್ ಶುಕ್ರವಾರವಷ್ಟೇ ಎಲೆಕ್ಟ್ರಿಕ್ ಬೈಕ್ ಖರೀದಿಸಿದ್ದರು. ಶುಕ್ರವಾರ ರಾತ್ರಿ ಅವರ ಮಲಗುವ ಕೋಣೆಯಲ್ಲಿ ವಾಹನದ ಡಿಟ್ಯಾಚೇಬಲ್ ಬ್ಯಾಟರಿಯನ್ನು ಚಾರ್ಜ್‌ನಲ್ಲಿ ಇರಿಸಲಾಗಿತ್ತು ಮತ್ತು ಎಲ್ಲರೂ ಗಾಢ ನಿದ್ದೆಯಲ್ಲಿದ್ದಾಗ ಅದು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎಂದು ಸೂರ್ಯರಾವ್‌ಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ವಿ ಜಾನಕಿ ರಾಮಯ್ಯ ತಿಳಿಸಿದ್ದಾರೆ.

ಸ್ಫೋಟದಿಂದಾಗಿ ಮನೆಯಲ್ಲಿ ಸಣ್ಣ ಬೆಂಕಿ ಕಾಣಿಸಿಕೊಂಡಿದ್ದು, ಹವಾನಿಯಂತ್ರಣ ಯಂತ್ರ ಮತ್ತು ಕೆಲವು ಗೃಹೋಪಯೋಗಿ ವಸ್ತುಗಳು ಸುಟ್ಟು ಹೋಗಿವೆ. ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡ ನೆರೆಹೊರೆಯವರು ಬಾಗಿಲು ಒಡೆದು ಒಳಗೆ ಸಿಲುಕಿದ್ದ ಕುಟುಂಬವನ್ನು ಹೊರತೆಗೆದಿದ್ದಾರೆ. ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವ ವೇಳೆ ಶಿವಕುಮಾರ್ ಮೃತಪಟ್ಟಿದ್ದಾರೆ. ಆತನ ಪತ್ನಿಯನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯನ್ನು 48 ಗಂಟೆಗಳ ಕಾಲ ನಿಗಾ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಸ್ಫೋಟಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬ್ಯಾಟರಿ ಸ್ಫೋಟಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವೇ ಎಂದು ಪರಿಶೀಲಿಸಲು ನಾವು ಇವಿ ಕಂಪನಿಯೊಂದಿಗೆ ಮಾತನಾಡಿದ್ದೇವೆ" ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿದೆ.
ಇಂತೆಲ್ಲಾ ಘಟನೆಗಳ ಬಳಿಕ ಸರ್ಕಾರಿ ಚಿಂತಕರ ನೀತಿ ಆಯೋಗವು ಎರಡು ದಿನಗಳ ಹಿಂದೆ ಎಲೆಕ್ಟ್ರಿಕ್ ವಾಹನಗಳಿಗೆ ಕರಡು ಬ್ಯಾಟರಿ ವಿನಿಮಯ ನೀತಿಯನ್ನು ಹೊರತಂದಿದೆ. ಬ್ಯಾಟರಿಗಳಿಗೆ ಕಠಿಣ ಪರೀಕ್ಷಾ ಪ್ರೋಟೋಕಾಲ್ ಅನ್ನು ಸೂಚಿಸಿದೆ. ಎಲೆಕ್ಟ್ರಿಕ್ ವಾಹನಗಳ ಸುತ್ತಲಿನ ಸುರಕ್ಷತಾ ಸಮಸ್ಯೆಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಮಧ್ಯೆ ಈ ಸೂಚನೆ ನೀಡಲಾಗಿದೆ.
ಇದಲ್ಲದೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನಿರ್ಲಕ್ಷ್ಯ ತೋರಿದ ಕಂಪನಿಗಳಿಗೆ ದಂಡ ವಿಧಿಸಲಾಗುವುದು ಮತ್ತು ಈ ವಿಷಯದ ಬಗ್ಗೆ ತನಿಖೆ ಮಾಡಲು ರಚಿಸಲಾದ ತಜ್ಞರ ಸಮಿತಿಯ ವರದಿಯನ್ನು ಸ್ವೀಕರಿಸಿದ ನಂತರ ಎಲ್ಲಾ ದೋಷಯುಕ್ತ ಇವಿಗಳನ್ನು ಮರುಪಡೆಯಲು ಆದೇಶಿಸಲಾಗುವುದು ಎಂದು ಹೇಳಿದ್ದಾರೆ.












Click it and Unblock the Notifications