Haryana: ಕಾಂಗ್ರೆಸ್‌ನ ಇವಿಎಂ ದೋಷಾರೋಪಕ್ಕೆ ಚುನಾವಣಾ ಆಯೋಗ ಖಡಕ್ ಉತ್ತರ
ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಕಾಂಗ್ರೆಸ್ ಪಕ್ಷವು ಹಲವು ಅನುಮಾನಗಳನ್ನು ವ್ಯಕ್ತಪಡಿಸಿತ್ತು. ಇಲ್ಲಿ ಕೂಡ ಮತಯಂತ್ರಗಳಲ್ಲಿ (ಇವಿಎಂ) ದೋಷ ಉಂಟಾಗಿರಬಹುದು ಎಂದು ಸಂಶಯವಾಗಿ ಹೇಳಿತ್ತು. ಇದಕ್ಕೆ ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಇವಿಎಂಗಳನ್ನು ಕಾಂಗ್ರೆಸ್ ದೂಷಿಸಿತ್ತು. ಈ ಬಗ್ಗೆ ಹಲವರು ನಾಯಕರು ಹೇಳಿಕೆಗಳನ್ನು ನೀಡಿದ್ದರು. ಕಾಂಗ್ರೆಸ್ ಪಕ್ಷದ ಈ ಹೇಳಿಕೆಗಳನ್ನು ರಾಜೀವ್ ಕುಮಾರ್ ತಳ್ಳಿಹಾಕಿದ್ದಾರೆ.

ಮತದಾರರು ಮತದಾನದಲ್ಲಿ ಭಾಗವಹಿಸುವ ಮೂಲಕ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಇವಿಎಂಗಳಿಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗಳೆಲ್ಲವೂ ಸುಳ್ಳು. ಇವಿಎಂಗಳು ಶೇ 100ರಷ್ಟು ಸುರಕ್ಷಿತ ಹಾಗೂ ಮೋಸ ಮಾಡುವುದಿಲ್ಲ ಎಂದು ರಾಜೀವ್ ಕುಮಾರ್ ಒತ್ತಿ ಹೇಳಿದ್ದಾರೆ.
ಕಳೆದ ವಾರ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಸಮಯದಲ್ಲಿ ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಕೆಲ ದೋಷಗಳು ಕಂಡುಬಂದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕಾಂಗ್ರೆಸ್ ಕೋರಿತ್ತು.

ಹರಿಯಾಣ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ, ಅಶೋಕ್ ಗೆಹ್ಲೋಟ್, ಕೆ.ಸಿ. ವೇಣುಗೋಪಾಲ್, ಜೈರಾಮ್ ರಮೇಶ್, ಹರಿಯಾಣ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನ್ ಸೇರಿದಂತೆ ಕಾಂಗ್ರೆಸ್ ನಾಯಕರು ನಿಯೋಗವು ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿಯೂ ಮಾಡಿತ್ತು.
ಹರಿಯಾಣದ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ 20ಕ್ಕೂ ಹೆಚ್ಚು ದೂರುಗಳು ಬಂದಿವೆ. ಬಹುತೇಕ ದೂರುಗಳು ಇವಿಎಂಗಳ ಕುರಿತಾಗಿಯೇ ಇದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಕೇಳಿಕೊಂಡಿತ್ತು.
ಚುನಾವಣೆಗೆ ಮುನ್ನ ಇವಿಎಂಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಿದ ಬ್ಯಾಟರಿಗಳನ್ನು ಅಳವಡಿಸಲಾಗಿತ್ತು. ಆದರೆ, ಅಣಕು ಮತದಾನ, ದಿನವಿಡೀ ಮತದಾನ ಮತ್ತು ಮತ ಎಣಿಕೆಯಲ್ಲಿ ವೇಳೆ ಅವುಗಳ ಚಾರ್ಜ್ ಮಟ್ಟವು ಕಡಿಮೆಯಾಗಿತ್ತಲೇ ಇತ್ತು ಎಂದು ಕಾಂಗ್ರೆಸ್ ದೂರಿತ್ತು. ಇದನ್ನು ಚುನಾವಣಾ ಆಯೋಗವು ಸಾರಾಸಗಟಾಗಿ ತಿರಸ್ಕರಿಸಿದೆ.
ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್, ಮತದಾನದ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದೆ. ಈ ಹಿನ್ನೆಲೆ ಹರಿಯಾಣದ ಪ್ರತಿ ಬೂತ್‌ನಿಂದಲೂ ವರದಿ ಸಂಗ್ರಹಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದರು.
ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ನಮ್ಮ ಕಾಂಗ್ರೆಸ್ ಪಕ್ಷ ವಿಶ್ಲೇಷಿಸುತ್ತಿದೆ. ಅಲ್ಲಿನ ಸೋಲಿಗೆ ಕಾರಣವೇನು ಎಂಬುದನ್ನು ನಿರ್ಧರಿಸಲು ಪ್ರತಿ ಬೂತ್‌ನಿಂದ ವರದಿಯನ್ನು ಕೇಳಿದೆ ಎಂದು ಖರ್ಗೆ ಹೇಳಿದ್ದರು.
ಹರಿಯಾಣದಲ್ಲಿ ನಮ್ಮ ಕಾರ್ಯಕರ್ತರಿಂದ ಯಾವ ತಪ್ಪಾಗಿದೆ? ಇದರಲ್ಲಿ ನಮ್ಮ ನಾಯಕರ ಪಾತ್ರವೇನು? ಹೇಗೆ ಸೋಲಾಯಿತು? ಎಂಬ ನಿಟ್ಟಿನಲ್ಲಿ ಬೂತ್‌ವಾರು ವರದಿ ಸಂಗ್ರಹಿಸುತ್ತಿದ್ದೇವೆ. ಅದರ ಆಧಾರದ ಮೇಲೆ ನಾವು ಚರ್ಚಿಸಿ, ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇವೆ ಎಂದಿದ್ದರು. ಈಗ ಚುನಾವಣಾ ಆಯೋಗವು ಆರೋಪಗಳನ್ನು ತಳ್ಳಿಹಾಕಿದೆ.












Click it and Unblock the Notifications