ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಸ್ವಾರಸ್ಯ: ವಾಜಪೇಯಿಯನ್ನು ಕಾಡಿದ ಸಂಖ್ಯೆ 13

By Mahesh
|
Google Oneindia Kannada News

ನವದೆಹಲಿ, ಮೇ.8: ಭಾರತೀಯ ಜನತಾ ಪಕ್ಷದಿಂದ ಪ್ರಥಮ ಬಾರಿಗೆ ಪ್ರಧಾನಿಯಾದ ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಸಂಖ್ಯೆ 13ಕ್ಕೂ ಬಿಡಿಸಲಾರದ ನಂಟಿದೆ. ಎರಡು ಬಾರಿ ಅವರಿಗೆ ಸಂಖ್ಯೆ 13 ದುರದೃಷ್ಟವಾಗಿ ಪರಿಣಮಿಸಿದೆ.

1996ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭಾರಿ ಬಹುಮತ ಪಡೆದು ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿತ್ತು. ಅಂದಿನ ರಾಷ್ಟ್ರಪತಿಗಳಾದ ಶಂಕರ್ ದಯಾಳ್ ಶರ್ಮ ಅವರು ವಾಜಪೇಯಿ ನೇತೃತ್ವದ ಬಿಜೆಪಿಗೆ ಸರ್ಕಾರ ರಚಿಸುವಂತೆ ಆಹ್ವಾನವನ್ನು ನೀಡಿದರು. ದೇಶದ 10ನೇ ಪ್ರಧಾನಿಯಾಗಿ ವಾಜಪೇಯಿ ಅವರು ಪ್ರಮಾಣ ವಚನ ಸ್ವೀಕರಿಸಿದರು.

ಆದರೆ, ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಬಿಜೆಪಿ ಸೋಲುಕಂಡಿತು. ಎಡ ಪಕ್ಷಗಳು ಸೇರಿದಂತೆ ಯಾವುದೇ ಪಕ್ಷಗಳು ಬಿಜೆಪಿ ಪರ ಮತ ಹಾಕಲು ಹಿಂದೇಟು ಹಾಕಿದ್ದವು. ಹೀಗಾಗಿ ಕೇವಲ 13 ದಿನಗಳ ನಂತರ ವಾಜಪೇಯಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಬೇಕಾಯಿತು. ಶಂಕರ್ ದಯಾಳ್ ಶರ್ಮ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುವ ಮುನ್ನ ಸಂಸತ್ತಿನಲ್ಲಿ ವಾಜಪೇಯಿ ಮಾಡಿದ ಭಾಷಣಕ್ಕೆ ಇಡೀ ಸದನ ತಲೆದೂಗಿತ್ತು.

Election anecdote: Why number 13 was unlucky for Atal Bihari Vajpayee

1998ರಲ್ಲೂ ಬಿಜೆಪಿ ನೇತೃತ್ವದ ಎನ್ ಡಿಎ ಮತ್ತೆ ಬಹುಮತ ಸಾಧಿಸುವಲ್ಲಿ ಯಶ ಕಂಡಿತ್ತು. ಮತ್ತೊಮ್ಮೆ ವಾಜಪೇಯಿ ಅವರು ಪ್ರಧಾನಿಯಾದರು. ಇದಕ್ಕೂ ಮುನ್ನ ಯುನೈಟೆಡ್ ಫ್ರಂಟ್ ಸಮೂಹ ಎರಡು ಬಾರಿ ಸರ್ಕಾರ ಮುನ್ನಡೆಸುವ ಪ್ರಯತ್ನ ವಿಫಲವಾಗಿತ್ತು. ಈ ಬಾರಿ ಸಂಸತ್ತಿನಲ್ಲಿ ವಾಜಪೇಯಿ ನೇತೃತ್ವದ ನ್ಯಾಷನಲ್ ಡೆಮಾಕ್ರಾಟಿಕ್ ಅಲೈಯನ್ಸ್(ಎನ್ಡಿಎ) ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಯಿತು. ಆದರೆ, ವಾಜಪೇಯಿ ಅವರ ಸರ್ಕಾರ 13 ತಿಂಗಳಿನಲ್ಲೇ ಕುಸಿಯಿತು. ಜೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ ಎನ್ಡಿಎಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡಿತು. ಕೇವಲ ಒಂದು ಮತದ ಅಂತರದಿಂದ ಸಂಸತ್ತಿನಲ್ಲಿ ವಾಜಪೇಯಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರು.

ವಿಪಕ್ಷಗಳು ಕೂಡಾ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ ಗಳಿಸಲು ಸಾಧ್ಯವಾಗದೇ ಸಂಸತ್ತು ವಿಸರ್ಜನೆ ಮಾಡಬೇಕಾಗಿ ಬಂದಿತ್ತು. ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಎನ್ ಡಿಎ ಮತ್ತೊಮ್ಮೆ ಅಧಿಕಾರ ಗದ್ದುಗೆ ಹಿಡಿಯಿತು. ಪ್ರಥಮ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರವೊಂದು ತನ್ನ ಪೂರ್ಣಾವಧಿ ಪೂರ್ತಿ ಗಳಿಸಿದ ಸಾಧನೆ ವಾಜಪೇಯಿ ಸರ್ಕಾರಕ್ಕೆ ಸಿಕ್ಕಿತ್ತು.

ಕೊನೆ ಗುಟುಕು: 16 ಮೇ 1996 ರಂದು ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಮೂಲಕ ಬಿಜೆಪಿ ದೇಶದ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಈಗ 16 ಮೇ 2014 ರಂದು ಸಾರ್ವತ್ರಿಕ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಮತ್ತೊಮ್ಮೆ ಇತಿಹಾಸ ಮರುಕಳಿಸುವುದೇ ಕಾದು ನೋಡಬೇಕಿದೆ.

English summary
Atal Bihari Vajpayee was the first person from the Bharatiya Janata Party to become the Prime Minister of India. He was sworn in as PM three times. However, the first two times, the number 13 proved unlucky for him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X