Maharashtra Election 2024: ನಾನು ಮತ್ತೆ ಸಿ.ಎಂ ಆಗಬೇಕು ಅಂತಿದ್ದಾರೆ ಜನ ಎಂದು ಬಾಂಬ್ ಸಿಡಿಸಿದ ಏಕನಾಥ್ ಶಿಂಧೆ!
Maharashtra CM controversy: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಆಯ್ಕೆ ಹಾಗೂ ಸರ್ಕಾರ ರಚನೆಯ ಕಸರತ್ತು ಚುನಾವಣೆ ಫಲಿತಾಂಶ ಪ್ರಕಟವಾಗಿ ಹತ್ತು ದಿನ ಸಮೀಪಿಸುತ್ತಿದ್ದರೂ, ಮುಗಿಯುತ್ತಿಲ್ಲ. ಇದೀಗ ಮಹಾರಾಷ್ಟ್ರದ ನಿಯೋಜಿತ ಮುಖ್ಯಮಂತ್ರಿ ಹಾಗೂ ಮಹಾಯುತಿಯ ಭಾಗವಾಗಿರುವ ಏಕನಾಥ್ ಶಿಂಧೆ ಅವರು ಹೊಸ ಕ್ಯಾತೆ ತೆಗೆದಿದ್ದಾರೆ. ಜನ ನನ್ನನ್ನು ಮತ್ತೆ ಮುಖ್ಯಮಂತ್ರಿಯಾಗಿ ನೋಡುವುದಕ್ಕೆ ಆಸೆ ಪಡ್ತಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ. ಸರ್ಕಾರ ರಚನೆ ವಿಚಾರದಲ್ಲಿ ಹಾಗೂ ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ನಾವು ಶಿವಸೇನಾ (ಏಕನಾಥ್ ಶಿಂಧೆ ಬಣ) ಸಂಪೂರ್ಣವಾಗಿ ಸಹಕಾರ ನೀಡಲಿದೆ. ನಾವು ಮುಖ್ಯಮಂತ್ರಿ ವಿಚಾರದಲ್ಲಿ ಅಡ್ಡಗಾಲು ಹಾಕುವುದಿಲ್ಲ ಎಂದಿದ್ದರು.
ನಾನು ಉತ್ತಮ ಕೆಲಸ ಮಾಡಿರುವುದರಿಂದ ಜನ ಮತ್ತೆ ನಾನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಬೇಕು ಎಂದು ಭಯಸುತ್ತಿದ್ದಾರೆ. ಮಹಾರಾಷ್ಟ್ರದ ಸಿ.ಎಂ ಆಗಬೇಕು ಎಂದು ನಿರೀಕ್ಷಿಸುತ್ತಿದ್ದಾರೆ. ಇನ್ನು ಈಗಾಗಲೇ ಮಹಾರಾಷ್ಟ್ರದ ರಾಜಧಾನಿ ಮುಂಬೈನ ಆಜಾದ್ ಮೈದಾನದಲ್ಲಿ ಡಿಸೆಂಬರ್ 5ಕ್ಕೆ ಹೊಸ ಸರ್ಕಾರದ ಮುಖ್ಯಮಂತ್ರಿ ಹಾಗೂ ಮಂತ್ರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿಯಿಂದ ದೇವೇಂದ್ರ ಫಡ್ನವಿಸ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಈಗಾಗಲೇ ಬಿಜೆಪಿ ಹೇಳಿದೆ. ಈ ರೀತಿ ಬಿಜೆಪಿಯಿಂದ ಮಹತ್ವದ ಸಂದೇಶ ಬಂದ ಬೆನ್ನಲ್ಲೇ ಏಕನಾಥ್ ಶಿಂಧೆ ಅವರು ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಮಹಾಯುತಿ ಅಧಿಕಾರದಲ್ಲಿ ಇತ್ತು (ಬಿಜೆಪಿ, ಶಿವಸೇನಾ - ಏಕನಾಥ್ ಶಿಂಧೆ ಬಣ ಹಾಗೂ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ - ಅಜಿತ್ ಪವಾರ್) ಪಕ್ಷಗಳು ಇದ್ದವು. ಈ ಬಾರಿಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯನ್ನೂ ಈ ಪಕ್ಷಗಳು ಜಂಟಿಯಾಗಿ ಎದುರಿಸಿದ್ದರು. ಅಮೋಘ ವಿಜಯ ಸಾಧಿಸಿವೆ. ಆದರೆ, ಈ ಪಕ್ಷಗಳ ಅಧಿಕಾರ ಹಂಚಿಕೆಯ ವಿಚಾರದಲ್ಲಿ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲ.
ನಾನು ಕಾಮನ್ ಮ್ಯಾನ್ ಸಿ.ಎಂ ಆಗಿ ಮಹಾರಾಷ್ಟ್ರದಲ್ಲಿ ಆಡಳಿತ ನಡೆಸಿದ್ದೇನೆ. ರಾಜ್ಯದ ಜನರ ನೋವುಗಳಿಗೆ ಸ್ಪಂದಿಸಿದ್ದೇನೆ. ಮಹಾ ಜನರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಶ್ರಮಿಸಿದ್ದೇನೆ. ನಾನು ಸಾಮಾನ್ಯಜನರೊಂದಿಗೆ ಬೆರೆತು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಕ್ಕಾಗಿ ಜನ ನನ್ನನ್ನು ಮತ್ತೆ ಸಿ.ಎಂ ಆಗಬೇಕು ಎಂದು ಬಯಸುತ್ತಿದ್ದಾರೆ ಎಂದಿದ್ದಾರೆ.
ಮಹಾರಾಷ್ಟ್ರದ ಜನರ ನೋವು ಹಾಗೂ ಸಂಕಷ್ಟಗಳನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಹೀಗಾಗಿ, ಜನ ನಿರೀಕ್ಷೆ ಮಾಡುತ್ತಿದ್ದಾರೆ. ಅಲ್ಲದೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯು ನನ್ನ ಅಧ್ಯಕ್ಷತೆಯಲ್ಲಿ ನಡೆದಿದೆ. ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಗಳು ನನ್ನ ಬೆಂಬಲಕ್ಕೆ ನಿಂತಿದ್ದರು. ಆದರೆ, ನನ್ನ ನಾಯಕತ್ವದಲ್ಲಿ ಈ ಚುನಾವಣೆ ನಡೆದಿದ್ದು, ನಾವು ಅಮೋಘ ಸಾಧನೆ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ. ಇಷ್ಟೆಲ್ಲ ಹೇಳಿದ ಮೇಲೆ ಕೊನೆಯದಾಗಿ ಕೇಂದ್ರ ಬಿಜೆಪಿ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿಯೂ ಹೇಳಿದ್ದಾರೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಏಕನಾಥ್ ಶಿಂಧೆ ಅವರು ಟ್ರಬಲ್ ಕ್ರಿಯೇಟರ್ ಆಗುತ್ತಿದ್ದಾರೆಯೇ ಎನ್ನುವ ಅನುಮಾನ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಮಹಾಯುತಿಯು 230 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮಹಾರಾಷ್ಟ್ರದಲ್ಲಿ ಒಟ್ಟು 288 ವಿಧಾನಸಭಾ ಸ್ಥಾನಗಳಿದ್ದು, 145 ಮ್ಯಾಜಿಕ್ ಸಂಖ್ಯೆಯಾಗಿದೆ. ಏಕನಾಥ್ ಶಿಂಧೆ ಬಣವು 57 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.












Click it and Unblock the Notifications