ಪೆಟ್ರೋಲಿಯಂ ಉತ್ಪನ್ನ ಜಿಎಸ್ ಟಿ ಅಡಿ ತರಲು ಕೇಂದ್ರದಿಂದ ಓಲೈಕೆ!
ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿ ಅಡಿಯಲ್ಲಿ ತರುವ ಪ್ರಯತ್ನದ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತೊಮ್ಮೆ ಮಾತನಾಡಿದ್ದಾರೆ. ದೇಶದ ನಾನಾ ಭಾಗಗಳಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಭಾರೀ ಏರಿಕೆ ಆಗಿದ್ದು, ಜಿಎಸ್ ಟಿ ಅಡಿ ಈ ಉತ್ಪನ್ನಗಳನ್ನು ತಂದರೆ ದರ ಇಳಿಕೆ ಆಗುತ್ತದೆ ಎಂಬ ಒತ್ತಾಯ ಕೇಳಿಬರುತ್ತಿದೆ.
ಈ ಬಗ್ಗೆ ರಾಜ್ಯ ಸರಕಾರಗಳ ಜತೆಗೆ ಕೇಂದ್ರ ಮಾತುಕತೆ ನಡೆಸುತ್ತಿದೆ ಎಂದು ಧರ್ಮೇಂದ್ರ ಪ್ರಧಾನ್ ಮಾಹಿತಿ ನೀಡಿದ್ದಾರೆ. ಜಿಎಸ್ ಟಿ ಕೌನ್ಸಿಲ್ ನೇತೃತ್ವ ವಹಿಸಿರುವ ಅರುಣ್ ಜೇಟ್ಲಿ ಎಲ್ಲ ರಾಜ್ಯಗಳ ಜತೆಗೆ ಚರ್ಚೆ ನಡೆಸಿ, ಈ ವಿಚಾರದ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

'ಪೆಟ್ರೋಲಿಯಂ ಖಾತೆ ಸಚಿವನಾಗಿ ರಾಜ್ಯ ಸರಕಾರಗಳಿಗೆ ಮನವಿ ಮಾಡಿದ್ದೇನೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿ ಅಡಿಯಲ್ಲಿ ತಂದರೆ ಜನರಿಗೆ ಅನುಕೂಲವಾಗುತ್ತದೆ ಎಂಬ ಅಂಶವನ್ನು ಗಮನಕ್ಕೆ ತಂದಿದ್ದೇನೆ' ಎಂದು ಅವರು ತಿಳಿಸಿದ್ದಾರೆ.
ಈ ವಿಚಾರದಲ್ಲಿ ನಮ್ಮ ಅಭಿಪ್ರಾಯವನ್ನು ರಾಜ್ಯಗಳ ಮೇಲೆ ಹೇರಲು ಬಯಸುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಹೇಗೆ ಈ ವಿಚಾರದಲ್ಲಿ ನಡೆದುಕೊಳ್ಳಬೇಕೋ ಹಾಗೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಸದ್ಯಕ್ಕೆ ಎಲ್ಲ ರಾಜ್ಯಗಳಲ್ಲೂ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವ್ಯಾಟ್ ಮತ್ತಿತರ ತೆರಿಗೆ ಹಾಕಲಾಗುತ್ತಿದೆ. ಆ ಕಾರಣಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಕಡಿಮೆ ಇದ್ದರೂ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ಕಡಿಮೆ ಆಗಿಲ್ಲ. ಆದ್ದರಿಂದ ಜಿಎಸ್ ಟಿ ಅಡಿಯಲ್ಲೇ ಇದನ್ನೂ ತರಬೇಕು ಎಂಬ ಒತ್ತಾಯ ಎಲ್ಲೆಡೆಯಿಂದ ಕೇಳಿಬರುತ್ತಿದೆ.












Click it and Unblock the Notifications