• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಸ್ವಾವಲಂಬಿ ಭಾರತ' - ಐತಿಹಾಸಿಕ ಯೋಜನೆ ಎಂದ ಕೇಂದ್ರ ಸಚಿವ ಸದಾನಂದ ಗೌಡ

|

ನವದೆಹಲಿ, ಮೇ 16: ''ಜಾಗತಿಕ ಮಹಾಮಾರಿ ಕೊರೊನಾ ವೈರಸ್ ಎಸೆದ ಸವಾಲನ್ನು ವರವಾಗಿ ಪರಿವರ್ತಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ದೂರದೃಷ್ಟಿಯ ಯೋಜನೆಗಳೊಂದಿಗೆ ಹೆಜ್ಜೆಹಾಕುತ್ತಿದೆ. ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಯ 'ಸ್ವಾವಲಂಬಿ ಭಾರತ' ಯೋಜನೆ ಮುಂಬರುವ ದಿನಗಳಲ್ಲಿ ದೇಶವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಸಂಪೂರ್ಣ ಸ್ವಾವಲಂಬಿಯನ್ನಾಗಿಸಲಿದೆ. ಭಾರತವು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಸ್ಥಾನ ಪಡೆಯಲಿದೆ'' ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಅಭಿಪ್ರಾಯ ಪಟ್ಟಿದ್ದಾರೆ.

   ರಾಜ್ಯದಲ್ಲಿ ಕೈಗಾರಿಕೆಗಳ ಪುನರ್ ಆರಂಭಕ್ಕೆ ಸೂಚನೆ | Industries to reopen soon | Oneindia Kannada

   ''ಬಡವರು, ದಿನಗೂಲಿ ಕಾರ್ಮಿಕರು, ವಲಸಿಗರು, ನಿರ್ಗತಿಕರು, ರೈತರು, ಸ್ವಯಂ ಉದ್ಯೋಗಿಗಳು, ಬೀದಿಬದಿ ವ್ಯಾಪಾರಿಗಳು, ಸಣ್ಣ, ಅತಿಸಣ್ಣ ಉದ್ದಿಮೆದಾರರು, ಕೈಗಾರಿಕೋದ್ಯಮಿಗಳು, ಉತ್ಪಾದಕ ಹಾಗೂ ಸೇವಾ ವಲಯ - ಹೀಗೆ ಸಮಾಜದ ಪ್ರತಿಯೊಂದು ವರ್ಗವನ್ನೂ ಗಮನದಲ್ಲಿಟ್ಟುಕೊಂಡು 'ಸ್ವಾವಲಂಬಿ ಭಾರತ' ಯೋಜನೆಯನ್ನು ರೂಪಿಸಲಾಗಿದೆ''

   ''ಕೊರೊನಾ ಮಹಾಮಾರಿ ಸ್ವಾವಲಂಬನೆಯ ಮಹತ್ವವನ್ನು ತಿಳಿಸಿಕೊಟ್ಟಿದೆ. ಉದಾಹರಣೆಗೆ ಕೊರೊನಾ ಆರಂಭಕ್ಕೆ ಮುನ್ನ ಭಾರತವು ಸೋಂಕು ನಿರೋಧಕ ಪಿಪಿಇ ಕಿಟ್ಟುಗಳನ್ನು ತಯಾರಿಸುತ್ತಿರಲಿಲ್ಲ. ಆದರೆ ಈಗ ಸ್ವದೇಶಿ ಉದ್ಯಮಗಳು ಪ್ರತಿದಿನ 2 ಲಕ್ಷಕ್ಕೂ ಅಧಿಕ ಪಿಪಿಇ ಕಿಟ್ ಗಳನ್ನು ತಯಾರಿಸುತ್ತಿದ್ದಾರೆ. ಈ ಸಾಮರ್ಥ್ಯ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ.''

   ಲಾಕ್ ಡೌನ್ ವೇಳೆ ರಾಸಾಯನಿಕ, ರಸಗೊಬ್ಬರ ಇಲಾಖೆಯ ಸಾಧನೆ ಇದು!

   ''ಔಷಧ ವಲಯದಲ್ಲಿ ಭಾರತವು ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ವಿವಿಧ ನಮೂನೆಯ ಔಷಧಗಳನ್ನು ರಫ್ತು ಮಾಡುತ್ತದೆ. ಆದರೆ ಔಷಧಗಳಿಗೆ ಬೇಕಾಗುವ ಎಪಿಐ ಮುಂತಾದ ಬಹಳಷ್ಟು ಮೂಲ ರಾಸಾಯನಿಕ ವಸ್ತುಗಳಿಗಾಗಿ ಚೀನಾ ಮತ್ತಿತರ ದೇಶಗಳ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ವಸ್ತುಗಳ ಪರಾವಲಂಬನೆಯನ್ನು ಸಂಪೂರ್ಣ ಕಡಿಮೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ'' ಅಂತ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

   ಕೈಗಾರಿಕೆಗಳಿಗೆ ಉಪಯೋಗ

   ಕೈಗಾರಿಕೆಗಳಿಗೆ ಉಪಯೋಗ

   ''ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು.. ಕೃಷಿ ನಂತರ ಅತಿಹೆಚ್ಚು ಉದ್ಯೋಗಾವಕಾಶವನ್ನ ನೀಡುವ ವಲಯವಾಗಿದೆ. ಹಾಗಾಗಿ 'ಸ್ವಾವಲಂಬಿ ಭಾರತ' ಯೋಜನೆ ಮೂಲಕ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಸುಲಭ ಸಾಲ ನೀಡಲಾಗುತ್ತಿದೆ. ಇದಕ್ಕೆ ಯಾವುದೇ ಗ್ಯಾರಂಟಿ ನೀಡಬೇಕಾಗಿಲ್ಲ. ಇದರಿಂದ 45 ಲಕ್ಷ ಸಣ್ಣ ಕಂಪನಿಗಳಿಗೆ ಅನುಕೂಲವಾಗಲಿದೆ. ಅಕ್ಟೋಬರ್ 31 ರವರೆಗೆ ಸಣ್ಣ ಕೈಗಾರಿಕೆಗಳು ಈ ಸಾಲ ಸೌಲಭ್ಯ ಪಡೆಯಬಹುದು. ಒಂದು ವರ್ಷದವರಗೆ ಇ.ಎಂ.ಐ ಕಟ್ಟಬೇಕಾಗಿಲ್ಲ. ಎರಡನೇ ವರ್ಷದಿಂದ ಸಾಲ ಮರುಪಾವತಿ ಆರಂಭವಾಗುತ್ತದೆ. ಸಾಲ ತೀರಿಸಲು ನಾಲ್ಕು ವರ್ಷ ಕಾಲಾವಕಾಶವಿದೆ. ಇನ್ನು ಸಾಲ ತೀರಿಸಲಾಗದೆ ಅನುತ್ಪಾದಕಗೊಂಡಿರುವ ಸುಮಾರು 2 ಲಕ್ಷ ಅತಿಸಣ್ಣ, ಸಣ್ಣ, ಮಧ್ಯಮ ಗಾತ್ರದ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ ಕೇಂದ್ರವು 20 ಸಾವಿರ ಕೋಟಿ ರೂಪಾಯಿ ನೆರವು ಘೋಷಿಸಿದೆ. ಹಾಗೆಯೇ ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕಾಗಿ 10 ಸಾವಿರ ಕೋಟಿ ರೂಪಾಯಿ ಆರಂಭಿಕ ನಿಧಿಯೊಂದಿಗೆ 50 ಸಾವಿರ ಕೋಟಿ ರೂಪಾಯಿ 'ಫಂಡ್ ಆಫ್ ಫಂಡ್' ಸ್ಥಾಪಿಸಿದೆ. ಈ ಎಲ್ಲ ಕ್ರಮಗಳು ಭಾರತದಲ್ಲಿ ಔದ್ಯೋಗಿಕ ಕ್ರಾಂತಿಯ ಹೊಸ ಶಕೆಯನ್ನ ಆರಂಭಿಸಲಿವೆ. ಕೈಗಾರಿಕೆಗಳು ಅಗತ್ಯ ಭೂಮಿ ಪಡೆಯುವಲ್ಲಿದ್ದ ಕಾನೂನಾತ್ಮಕ ಅಡಚಣೆಗಳನ್ನು ತೊಡೆದುಹಾಕಲಾಗಿದೆ. ಇನ್ನಷ್ಟು ಆಡಳಿತಾತ್ಮಕ ಸುಧಾರಣೆಗೆ ಉದ್ದೇಶಿಸಲಾಗಿದೆ. ಇದರಿಂದ ಸ್ವದೇಶಿ ಹಾಗೂ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಾಗಲಿದ್ದು, ಉದ್ಯೋಗಾವಕಾಶ ಸಹಜವಾಗಿಯೇ ಹೆಚ್ಚಲಿದೆ'' - ಡಿ.ವಿ.ಸದಾನಂದ ಗೌಡ

   ಸ್ವದೇಶಿ ಕೈಗಾರಿಕೆಗಳನ್ನು ಉತ್ತೇಜಿಸೋಣ

   ಸ್ವದೇಶಿ ಕೈಗಾರಿಕೆಗಳನ್ನು ಉತ್ತೇಜಿಸೋಣ

   ''ಸ್ಥಳೀಯವಾಗಿ ತಯಾರಾಗುವ ವಸ್ತುಗಳನ್ನೇ ಖರೀದಿಸೋಣ. ಸ್ವದೇಶಿ ಕೈಗಾರಿಕೆಗಳನ್ನು ಉತ್ತೇಜಿಸೋಣ. ಇನ್ನುಮುಂದೆ 200 ಕೋಟಿ ರೂಪಾಯಿ ಮೌಲ್ಯದವರೆಗಿನ ಕೆಲಸ, ಸೇವೆ, ಸರಕು ಗಳಿಗಾಗಿ ಜಾಗತಿಕ ಟೆಂಡರ್ ಕರೆಯಲಾಗುವುದಿಲ್ಲ. ಸ್ವದೇಶಿ ಕಂಪನಿಗಳು, ಗುತ್ತಿಗೆದಾರರು, ಸರಬರಾಜುದಾರರನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇನ್ನು ಗುಡಿಕೈಗಾರಿಕೆ, ಸ್ಥಳೀಯ ಉತ್ಪನ್ನಗಳ ಪ್ಯಾಕೇಜಿಂಗ್‌, ಬ್ರಾಂಡಿಂಗ್ ಮತ್ತು ರಫ್ತು ಉತ್ತೇಜನಕ್ಕಾಗಿ 10 ಸಾವಿರ ಕೋಟಿ ರೂಪಾಯಿ ಘೋಷಿಸಲಾಗಿದೆ. ಜನ ಇದರ ಉಪಯೋಗ ಪಡೆಯಬೇಕು. ಮುಂಬರುವ ದಿನಗಳಲ್ಲಿ ಭಾರತದಲ್ಲಿ ತಯಾರಾದ ವಸ್ತುಗಳು ಜಗತ್ತಿನ ಎಲ್ಲ ದೇಶಗಳಲ್ಲಿಯೂ ಮಾರುಕಟ್ಟೆ ಪಡೆಯುವಂತಾಗಬೇಕು. 'ಮೇಕ್ ಇನ್‌ ಇಂಡಿಯಾ' ವಸ್ತುಗಳು ವಿಶ್ವಾದ್ಯಂತ ರಾರಾಜಿಸಬೇಕು'' - ಡಿ.ವಿ.ಸದಾನಂದ ಗೌಡ

   ರೈತರಿಗೆ ಅನುಕೂಲ

   ರೈತರಿಗೆ ಅನುಕೂಲ

   ''ರೈತರಿಗೆ ಈಗಾಗಲೇ ಮೂರು ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಸುಲಭ ಸಾಲ ಸೌಲಭ್ಯವನ್ನು ಘೋಷಿಸಲಾಗಿದ್ದು, ಒಂದು ಲಕ್ಷ ಕೋಟಿ ರೂಪಾಯಿಯನ್ನು ಕೃಷಿ ಕ್ಷೇತ್ರದ ಮೂಲಭೂತ ಸೌಲಭ್ಯಗಳಿಗಾಗಿ ನೆರವು ಪ್ರಕಟಿಸಲಾಗಿದೆ. ಸಂಸ್ಕರಣಾ ಘಟಕಗಳು, ಶೀತಲ ಸ್ಟೋರೇಜ್‌ ಕೇಂದ್ರಗಳು, ಗೋದಾಮುಗಳು, ಶೀತಲ ವ್ಯವಸ್ಥೆಯುಳ್ಳ ಸಾಗಣೆ ವ್ಯವಸ್ಥೆ, ಸಾಗಣೆ, ಸುಲಭ ಮಾರುಕಟ್ಟೆ ವ್ಯವಸ್ಥೆ - ಇವೇ ಮುಂತಾದ ಸೌಲಭ್ಯಗಳು ಇದರಲ್ಲಿ ಸೇರಿವೆ. ಇದರಿಂದ ರೈತರಿಗೆ ತಾವು ಬೆಳೆದ ಬೆಳೆಗಳ ರಕ್ಷಣೆ ಮಾಡಿಕೊಳ್ಳಲು ಹಾಗೂ ಉತ್ತಮ ಮೌಲ್ಯ (ಬೆಲೆ) ಪಡೆಯಲು ಅನುಕೂಲವಾಗಲಿದೆ'' - ಡಿ.ವಿ.ಸದಾನಂದ ಗೌಡ

   ರಾಗಿಗೆ ಅಂತಾರಾಷ್ಟ್ರೀಯ ಬ್ರ್ಯಾಂಡಿಂಗ್

   ರಾಗಿಗೆ ಅಂತಾರಾಷ್ಟ್ರೀಯ ಬ್ರ್ಯಾಂಡಿಂಗ್

   ''ನಮ್ಮ ರಾಜ್ಯದ ರಾಗಿಯೂ ಅಂತಾರಾಷ್ಟ್ರೀಯ ಬ್ರಾಂಡಿಂಗ್ ನೊಂದಿಗೆ ವಿಶ್ವ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇನ್ನು ಪಶುಸಂಗೋಪನೆ, ಹಾಲು ಸಂಗ್ರಹಣೆ ಮತ್ತು ಸಂಸ್ಕರಣೆ, ಡೇರಿ ತಂತ್ರಜ್ಞಾನ ಮೇಲ್ದರ್ಜೆಗೆ ಏರಿಸಲು 23 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ಘೋಷಿಸಲಾಗಿದೆ. ಇದರಿಂದ 2 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಅನುಕೂಲವಾಗಲಿದೆ. ಮತ್ಸೋದ್ಯಮವನ್ನು ಪ್ರೋತ್ಸಾಹಿಸಲು 20 ಸಾವಿರ ಕೋಟಿ ರೂಪಾಯಿಯ 'ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ'ಯನ್ನು ರೂಪಿಸಲಾಗಿದೆ. ಇದರಿಂದ 20 ಲಕ್ಷ ಟನ್‌ ಹೆಚ್ಚುವರಿ ಮೀನು ಲಭ್ಯವಾಗಲಿದೆ. ದೇಶದ ಮೀನು ರಫ್ತು ದ್ವಿಗುಣಗೊಂಡು 1 ಲಕ್ಷ ಕೋಟಿ ಮೌಲ್ಯವನ್ನು ತಲುಪಲಿದೆ. ಸುಮಾರು 55 ಲಕ್ಷ ಜನಕ್ಕೆ ಉದ್ಯೋಗ ದೊರೆಯಲಿದೆ'' - ಡಿ.ವಿ.ಸದಾನಂದ ಗೌಡ

   ಆಡಳಿತಾತ್ಮಕ ಸುಧಾರಣೆ

   ಆಡಳಿತಾತ್ಮಕ ಸುಧಾರಣೆ

   ''ಕೇಂದ್ರ ಸರ್ಕಾರವು 'ಒಂದು ದೇಶ - ಒಂದು ಪಡಿತರ ಚೀಟಿ' ಎಂಬ ಕ್ರಾಂತಿಕಾರಕ ಆಡಳಿತಾತ್ಮಕ ಸುಧಾರಣೆಗೆ ಕೈಹಾಕಿದೆ. ಇದು ದೇಶಾದ್ಯಂತ ಮಾನ್ಯವಾಗುವ ಪಡಿತರ ಚೀಟಿ. ಮುಂದಿನ ಮಾರ್ಚ್ ತಿಂಗಳ ಒಳಗಾಗಿ ಇಂಥ ಪಡಿತರ ಚೀಟಿಗಳನ್ನು ದೇಶದ ಎಲ್ಲ ಅರ್ಹ ಕುಟುಂಬಗಳಿಗೆ ವಿತರಿಸಲಾಗುವುದು. ವಲಸಿಗರು, ಕಾರ್ಮಿಕರು ಸೇರಿದಂತೆ ಈ ಪಡಿತರ ಚೀಟಿ ಹೊಂದಿರುವವರು ದೇಶದ ಯಾವುದೇ ರಾಜ್ಯಕ್ಕೆ ವಲಸೆ ಹೋದರೂ ಇದೇ ಚೀಟಿ ಬಳಸಿ ಪಡಿತರಧಾನ್ಯ ಪಡೆಯಬಹುದು. ವಲಸಿಗರ ಬಹುವರ್ಷಗಳ ಸಮಸ್ಯೆಗೆ ಈ ವ್ಯವಸ್ಥೆ ಪರಿಹಾರ ಒದಗಿಸಲಿದೆ. ಇದರಿಂದ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯು ಪರಿಣಾಮಕಾರಿಯಾಗಿ ಜಾರಿಗೊಳ್ಳಲಿದೆ. 'ಸ್ವಾವಲಂಬಿ ಭಾರತ' ಯೋಜನೆಯನ್ನು ರೂಪಿಸುವಾಗ ಜನ ಸಾಮಾನ್ಯರ ತಾತ್ಕಾಲಿಕ ಅವಶ್ಯಕತೆಗಳ ಬಗ್ಗೆಯೂ ಗಮನ ನೀಡಲಾಗಿದೆ. ಲಾಕ್ಡೌನ್ ಕಾರಣದಿಂದ ದೇಶದ ವಿವಿಧೆಡೆ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರ ತಾತ್ಕಾಲಿಕ ವಸತಿ & ಮೂರು ಹೊತ್ತಿನ ಊಟಕ್ಕಾಗಿ ಕೇಂದ್ರ ಸರ್ಕಾರವು ಇದುವರೆಗೆ 11000 ಕೋಟಿ ರೂ. ವೆಚ್ಚ ಮಾಡಿದೆ. ವಲಸೆ ಕಾರ್ಮಿಕರು ಹಾಗೂ ಬಡವರಿಗೆ ಪಡಿತರ ಚೀಟಿ ಇರಲಿ ಅಥವಾ ಇರದಿರಲಿ ತಲಾ 5 KG ಅಕ್ಕಿ/ಗೋಧಿ ಮತ್ತು ಕುಟುಂಬಕ್ಕೆ 1 KG ಬೇಳೆಯನ್ನು ಉಚಿತವಾಗಿ ವಿತರಿಸುತ್ತಿದೆ. ಕಳೆದೆರಡು ತಿಂಗಳಿಂದ ನಡೆದಿರುವ ಈ ಉಚಿತ ರೇಷನ್ ವಿತರಣೆ ಜೂನ್ ವರೆಗೆ ಮುಂದುವರಿಯಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ 80 ಲಕ್ಷ ಕ್ವಿಂಟಲ್ ಅಕ್ಕಿ/ಗೋಧಿ 5 ಲಕ್ಷ ಕ್ವಿಂಟಲ್ ದ್ವಿದಳ ಧಾನ್ಯ (ಬೇಳೆ) ಒದಗಿಸುತ್ತಿದೆ. ಇವೆಲ್ಲದರ ಹೊರತಾಗಿ ಮಧ್ಯಮ ವರ್ಗ ಹಾಗೂ ಸಮಾಜದ ಎಲ್ಲರಿಗೂ ಅನುಕೂಲವಾಗುವಂತಹ ಅನೇಕ ಕ್ರಮಗಳು 'ಸ್ವಾವಲಂಬಿ ಭಾರತ' ಯೋಜನೆಯು ಒಳಗೊಂಡಿದೆ. ಒಟ್ಟಿನಲ್ಲಿ ಇದು ಒಂದು 'ಐತಿಹಾಸಿಕ ಯೋಜನೆ'ಯಾಗಿ ದೇಶದ ಇತಿಹಾಸ ಪುಟಗಳಲ್ಲಿ ದಾಖಲಾಗಲಿದೆ'' ಎಂದು ಸಚಿವ ಸದಾನಂದ ಗೌಡ ಹೇಳಿದರು.

   English summary
   DV Sadananda Gowda praises 20 Lakh Crore Economic Package.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X