"ನನ್ನ ಹೆಸರಿನಲ್ಲಿ ಹಣ ಹೂಡಿಕೆ ಮಾಡಲು ಹೇಳಿದ್ರೆ ನಂಬಬೇಡಿ": ಡೀಪ್‌ಫೇಕ್ ಬಗ್ಗೆ ಸುಧಾ ಮೂರ್ತಿ ಎಚ್ಚರಿಕೆ
ಬೆಂಗಳೂರು: ರಾಜ್ಯಸಭಾ ಸದಸ್ಯೆ ಹಾಗೂ ಹಿರಿಯ ಲೇಖಕಿ ಸುಧಾ ಮೂರ್ತಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ತಮ್ಮ ನಕಲಿ ವಿಡಿಯೋಗಳ ಬಗ್ಗೆ ಸಾರ್ವಜನಿಕರಿಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ತಮ್ಮ ಧ್ವನಿ ಮತ್ತು ಮುಖಚಹರೆಯನ್ನು ತಂತ್ರಜ್ಞಾನದ ಮೂಲಕ ದುರ್ಬಳಕೆ ಮಾಡಿಕೊಂಡು, ಹಣಕಾಸು ಹೂಡಿಕೆ ಮಾಡುವಂತೆ ಜನರನ್ನು ದಾರಿತಪ್ಪಿಸಲಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಏನಿದು ಪ್ರಕರಣ?
ಇತ್ತೀಚೆಗೆ ಫೇಸ್‌ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸುಧಾ ಮೂರ್ತಿ ಅವರ ವಿಡಿಯೋಗಳು ಹರಿದಾಡುತ್ತಿವೆ. ಅದರಲ್ಲಿ ಸುಧಾ ಮೂರ್ತಿ ಅವರೇ ಮಾತನಾಡುತ್ತಿರುವಂತೆ ಬಿಂಬಿಸಲಾಗಿದ್ದು, "200 ಡಾಲರ್ ಅಥವಾ 20,000 ರೂಪಾಯಿ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿ ಹತ್ತು ಪಟ್ಟು ಲಾಭ ಪಡೆಯಬಹುದು," ಎಂದು ಹೇಳುವಂತೆ ನಕಲಿ ವಿಡಿಯೋ ಸೃಷ್ಟಿ ಮಾಡಲಾಗಿದೆ.

ಈ ಕುರಿತು ಸುಧಾ ಮೂರ್ತಿ ತಮ್ಮ 'ಎಕ್ಸ್' ಖಾತೆಯಲ್ಲಿ ವಿಡಿಯೋ ಸಂದೇಶ ಪ್ರಕಟಿಸಿದ್ದು, "ದಯವಿಟ್ಟು ಇಂತಹ ವಂಚನೆಯ ಜಾಲಕ್ಕೆ ಬೀಳಬೇಡಿ. ಇವೆಲ್ಲವೂ ನನ್ನ ಅರಿವಿಲ್ಲದೆ ಮತ್ತು ಅನುಮತಿಯಿಲ್ಲದೆ ಸೃಷ್ಟಿಸಲಾದ ಡೀಪ್‌ಫೇಕ್ ವಿಡಿಯೋಗಳು. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವ ಸುಧಾ ಮೂರ್ತಿ, "ನಾನು ಯಾವಾಗಲೂ ಭಾರತೀಯ ಸಂಸ್ಕೃತಿ, ಪುಸ್ತಕಗಳು, ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ನನ್ನ ಕೆಲಸದ ಬಗ್ಗೆ ಮಾತನಾಡುತ್ತೇನೆಯೇ ಹೊರತು, ಎಂದಿಗೂ ಷೇರು ಮಾರುಕಟ್ಟೆ ಅಥವಾ ಹಣಕಾಸು ಹೂಡಿಕೆಗಳ ಬಗ್ಗೆ ಸಲಹೆ ನೀಡುವುದಿಲ್ಲ. ಇದು ನನ್ನ ಜೀವನದ ನಿಯಮ. ಹಣ ದ್ವಿಗುಣಗೊಳಿಸುವ ಅಥವಾ ಲಾಭದ ಆಸೆ ತೋರಿಸುವ ವಿಡಿಯೋಗಳಲ್ಲಿ ಇರುವುದು ನಾನಲ್ಲ," ಎಂದು ಪುನರುಚ್ಚರಿಸಿದರು.
ಮುಂದುವರೆದು, ತಮಗೆ ಪರಿಚಯವಿರುವ ಅನೇಕರು ಇಂತಹ ನಕಲಿ ಜಾಹೀರಾತುಗಳನ್ನು ನಿಜವೆಂದು ನಂಬಿ ಹಣ ಹೂಡಿಕೆ ಮಾಡಿ ಮೋಸ ಹೋಗಿರುವುದು ತಮಗೆ ತೀವ್ರ ನೋವು ತಂದಿದೆ ಎಂದಿದ್ದಾರೆ. "ನಿಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ದುರಾಸೆಗೆ ಬಿದ್ದು ಕಳೆದುಕೊಳ್ಳಬೇಡಿ. ಅಂತಹ ಆಮಿಷಗಳಿಗೆ ಬಲಿಯಾಗುವ ಮುನ್ನ ಅಧಿಕೃತ ಬ್ಯಾಂಕ್‌ಗಳು, ಹಣಕಾಸು ತಜ್ಞರು ಅಥವಾ ಪೊಲೀಸ್ ಠಾಣೆಯಲ್ಲಿ ವಿಚಾರಿಸಿ ಖಚಿತಪಡಿಸಿಕೊಳ್ಳಿ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶಗಳನ್ನು ಕಣ್ಣುಮುಚ್ಚಿ ನಂಬಬೇಡಿ. ಸುರಕ್ಷಿತವಾಗಿರಿ," ಎಂದು ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
I want to alert you to fake videos circulating online that falsely use my image and voice to promote financial schemes and investments. These are deepfakes created without my knowledge or consent.
— Smt. Sudha Murty (@SmtSudhaMurty) January 21, 2026
Please do not make any financial decisions based on these fraudulent videos. I urge… pic.twitter.com/JyJTIR78wQ
ಹಾಗೆಯೇ ಈ ಮೋಸದ ವೀಡಿಯೊಗಳನ್ನು ಆಧರಿಸಿ ಯಾವುದೇ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಅಧಿಕೃತ ಮಾರ್ಗಗಳ ಮೂಲಕ ಮಾಹಿತಿಯನ್ನು ಪರಿಶೀಲಿಸಲು ಮತ್ತು ನೀವು ಎದುರಿಸುವ ಯಾವುದೇ ವಿಷಯವನ್ನು ವರದಿ ಮಾಡಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ. ಜೈ ಹಿಂದ್!" ಎಂದು ಅವರು ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.












Click it and Unblock the Notifications